ಮಾಧ್ಯಮಗಳ ಕಿರುಕುಳದಿಂದ ನೊಂದಿದ್ದೇನೆ ಎಂದು ಹೇಳಿಕೊಂಡು ಸುಜಾತ ಭಟ್ ಡೆತ್ ನೋಟ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಪೊಲೀಸರಿಂದ ಭದ್ರತೆ ಕೋರಿದ ಸುಜಾತ ಭಟ್, ತಮ್ಮ ಆರೋಗ್ಯ ಸರಿಯಿಲ್ಲ ಮತ್ತು ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಬೆಂಗಳೂರು (ಆ.23): ಮಾಧ್ಯಮಗಳ ಕಿರುಕುಳದಿಂದ ನೊಂದಿದ್ದೇನೆ ಎಂದು ಹೇಳಿಕೊಂಡು ಸುಜಾತ ಭಟ್ ಡೆತ್ ನೋಟ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಧ್ಯಮಗಳ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಇದೇ ವೇಳೆ, ಸುಜಾತ ಭಟ್ ಅವರು ಮತ್ತೊಂದು ನಾಟಕೀಯ ಬೆಳವಣಿಗೆಯಂತೆ ಪೊಲೀಸರಿಂದ ಭದ್ರತೆ ಕೋರಿದ್ದಾರೆ. ತಮ್ಮ ಆರೋಗ್ಯ ಸರಿಯಿಲ್ಲ ಮತ್ತು ಬೆದರಿಕೆಗಳು ಬರುತ್ತಿವೆ ಎಂದು ಹೇಳಿ ಸ್ಥಳೀಯ ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಬನಶಂಕರಿ ಪೊಲೀಸರು ಸುಜಾತ ಭಟ್ ಅವರಿಗೆ ಭದ್ರತೆ ಒದಗಿಸಿದ್ದು, ಅವರ ಮನೆಯ ಬಳಿ ಯಾರೊಬ್ಬರೂ ಮಾಧ್ಯಮದವರು ಅಥವಾ ಸಾರ್ವಜನಿಕರು ಬರದಂತೆ ನಿರ್ಬಂಧ ಹೇರಿದ್ದಾರೆ. ಸದ್ಯ ಇಬ್ಬರು ಪೊಲೀಸರು ಶಿಫ್ಟ್‌ಗಳ ಆಧಾರದ ಮೇಲೆ ಅವರಿಗೆ ಭದ್ರತೆ ನೀಡುತ್ತಿದ್ದಾರೆ.
ಕಳೆದ ದಿನವಷ್ಟೇ, ತಮ್ಮ ದೂರಿಗೆ ಬದ್ಧ ಎಂದು ಹೇಳುವ ಮೊದಲು, ಅನನ್ಯ ಭಟ್ ಅವರ ಹೇಳಿಕೆ ಕಟ್ಟುಕಥೆ ಎಂದು ಸುಜಾತ ಭಟ್ ತಿಳಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇದಾದ ಬಳಿಕ ಮಾಧ್ಯಮದವರಿಂದ ಕಿರುಕುಳವಾಗುತ್ತಿದೆ ಎಂದು ಸುಜಾತ ಭಟ್ ಆರೋಪಿಸಿದ್ದಾರೆ. ಸದ್ಯ, ಅವರು ಮನೆಯಲ್ಲಿಯೇ ಇದ್ದಾರೆ ಎಂದು ತಿಳಿದುಬಂದಿದೆ.

