ದಸರಾ ಉತ್ಸವದ ಉದ್ಘಾಟನೆಗೆ ಸಂಬಂಧಿಸಿದಂತೆ ಇದಾಗಲೇ ವಾದ-ವಿವಾದ-ಪ್ರತಿವಾದಗಳು ಜೋರಾಗಿಯೇ ನಡೆಯುತ್ತಿದೆ. ಇದರ ವಿಚಾರ ಹೈಕೋರ್ಟ್​ಗೂ ಹೋಗಿದೆ. ಇದರ ನಡುವೆಯೇ ನಟ ಅವಿನಾಶ್​ ಹೇಳಿದ್ದೇನು? 

ಮೈಸೂರಿನಲ್ಲಿ ಇದೇ 22ರಿಂದ 11 ದಿನಗಳ ಕಾಲ ನಡೆಯಲಿರುವ ದಸರಾ (Dasara) ಉತ್ಸವದ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ (Banu Mushtaq ) ಅವರನ್ನು ಮುಖ್ಯ ಅತಿಥಿಯಾಗಿ ನಾಮನಿರ್ದೇಶನ ಮಾಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಇದಾಗಲೇ ಭಾರಿ ಚರ್ಚೆ ನಡೆಯುತ್ತಲೇ ಇದೆ. ಇದರ ಪರ-ವಿರೋಧ ಅಲೆಗಳು ಸೋಷಿಯಲ್​ ಮೀಡಿಯಾದಲ್ಲಿಯೂ ಜೋರಾಗಿದೆ. ಇದಾಗಲೇ ಈ ಬಗ್ಗೆ ಮಹಾರಾಜ ಕುಟುಂಬದ ಯದುವೀರ ದತ್ತ ಒಡೆಯರ್​, ರಾಣಿ ಪ್ರಮೋದಾ ದೇವಿ ಕೂಡ ಮಾತನಾಡಿದ್ದಾರೆ. 'ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಬಾನು ಮುಷ್ತಾಕ್​ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ' ಎಂದು ಯದುವೀರ ದತ್ತ ಒಡೆಯರ್​ ಹೇಳಿದ್ದರು.

ನಟ ಅವಿನಾಶ್​ ಹೇಳಿದ್ದೇನು?

ಇದೀಗ ಈ ಬಗ್ಗೆ ನಟ ಅವಿನಾಶ್​ ಅವರು ಮಾತನಾಡಿದ್ದಾರೆ. ಬಾಸ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 'ಬಾನು ಮುಷ್ತಾಕ್​ ಅವರು ಅದ್ಭುತವಾದ ಲೇಖಕಿ. ಅದರ ಬಗ್ಗೆ ಪ್ರಶ್ನೇ ಮಾಡುವಂತಿಲ್ಲ. ಆದರೆ ನಾಡಹಬ್ಬಕ್ಕೆ ಅದರದ್ದೇ ಆದ ಸಂಪ್ರದಾಯವಿದೆ. ಚಾಮುಂಡಿಬೆಟ್ಟಕ್ಕೆ ಹೋಗಬೇಕು. ಅಲ್ಲಿ ಪೂಜೆ ನಡೆಯುತ್ತದೆ. ಸಂಪ್ರದಾಯದ ಬಗ್ಗೆ ನಂಬಿಕೆ ಇಲ್ಲ ಎಂದಾದಾಗ ಅಲ್ಲಿಗೆ ಹೋಗಬಾರದು ಅಷ್ಟೇ. ಈ ವಿಚಾರದಲ್ಲಿ ನಂಬಿಕೆಯಿಲ್ಲ, ಆದ್ದರಿಂದ ನಾನು ಬರುವುದೇ ಇಲ್ಲ ಎಂದು ಅವರೇ ಹೇಳಬಹುದಿತ್ತು' ಎಂದಿದ್ದಾರೆ.

ಇದನ್ನೂ ಓದಿ: ದಸರಾ ಉದ್ಘಾಟನೆ ಹೈಕೋರ್ಟ್​ ಅಂಗಳಕ್ಕೆ: Banu Mushtaq ವಿರುದ್ಧ ಆರೋಪ- ಅರ್ಜಿಯಲ್ಲಿ ಏನಿದೆ?

ನಾಡಹಬ್ಬ ದಸರಾ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವದು. ನಂಬಿಕೆನೇ ಇಲ್ಲ, ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನಲು ಆಗತ್ತಾ? ಹೋಗಬಾರದು ಅಷ್ಟೇ. ನಂಬಿಕೆ ಇಲ್ಲದ ಮೇಲೆ ಬಲವಂತವಾಗಿ ಯಾರೂ ಎಳೆದುಕೊಂಡು ಹೋಗುವುದಿಲ್ಲ. ತಾಯಿ ಭುವನೇಶ್ವರಿ ಬಗ್ಗೆ ನಂಬಿಕೆ ಇಲ್ಲ ಎಂದಾದಾಗ ಹೋಗಬಾರದು. ಏಕೆಂದರೆ ಭುವನೇಶ್ವರಿ ಇಂದು-ನಿನ್ನೆಯದ್ದಲ್ಲ. ಕದಂಬರ ಕಾಲದಲ್ಲಿ 6ನೇ ಶತಮಾನದ್ದು. ನಮ್ಮದೇ ಇತಿಹಾಸವಿದೆ' ಎಂದಿದ್ದಾರೆ ಅವಿನಾಶ್​.

ಹೈಕೋರ್ಟ್ ಅಂಗಳಕ್ಕೆ ವಿವಾದ:

ಇವುಗಳ ನಡುವೆಯೇ, ಇದೀಗ ಈ ವಿವಾದ ಹೈಕೋರ್ಟ್​ ಅಂಗಳಕ್ಕೆ ಹೋಗಿದೆ. ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ. ದಸರಾ ಉತ್ಸವವು ಮಹಿಷಾಸುರನ ಮೇಲೆ ಚಾಮುಂಡೇಶ್ವರಿ ದೇವತೆಯ ವಿಜಯವನ್ನು ಸ್ಮರಿಸುತ್ತದೆ ಮತ್ತು ನವರಾತ್ರಿ ಆಚರಣೆಯ ಪರಾಕಾಷ್ಠೆಯನ್ನು ಸೂಚಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದು ಮೈಸೂರು ರಾಜಮನೆತನದ ಪರಂಪರೆ ಮತ್ತು ಪೋಷಣೆಯೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿರುವ ಆಳವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವಾಗಿದೆ. ಉತ್ಸವದ ಉದ್ಘಾಟನೆ ಮತ್ತು ವಿದ್ಯುಕ್ತ ಆಚರಣೆಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರವು ರಾಜಮನೆತನದವರನ್ನು ಸಂಪರ್ಕಿಸುವುದು ಪೀಳಿಗೆಯಿಂದ ಬಂದಿರುವ ಪದ್ಧತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆಕ್ಷೇಪಾರ್ಹ ನಿರ್ಧಾರ

ರಾಜ್ಯ ಸರ್ಕಾರದ ಆಕ್ಷೇಪಾರ್ಹ ನಿರ್ಧಾರವು ಕರ್ನಾಟಕದ ಜನರ ಧಾರ್ಮಿಕ ಸೂಕ್ಷ್ಮತೆ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಕಡೆಗಣಿಸುವುದಲ್ಲದೆ, ಈ ಪ್ರದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಗುರುತಿನ ಪ್ರಮುಖ ಭಾಗವಾಗಿರುವ ದೀರ್ಘಕಾಲದ ಸಂಪ್ರದಾಯವನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ದಸರಾ ಉತ್ಸವವನ್ನು ನಡೆಸುವಲ್ಲಿ ರಾಜಮನೆತನದ ಪಾತ್ರವು ಕೇವಲ ವಿದ್ಯುಕ್ತವಾಗಿಲ್ಲ, ಆದರೆ ಪ್ರದೇಶದ ಧಾರ್ಮಿಕ ಪದ್ಧತಿಗಳು ಮತ್ತು ಸಮುದಾಯದ ನಿರೀಕ್ಷೆಗಳಲ್ಲಿ ಆಳವಾಗಿ ಬೇರೂರಿದೆ. ಈ ವಿಷಯವು ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಗಳ ವ್ಯಾಪ್ತಿಯಲ್ಲಿ ನೇರವಾಗಿ ಬರುತ್ತದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಮತ್ತು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮೂರ್ತಿ ಪೂಜೆಯಲ್ಲಿ ಪಾಲ್ಗೊಳ್ಳೋದು ಶಿರ್ಕ್,​ ಇದು ಕಟ್ಟಾಜ್ಞೆ: ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮಾತು ಕೇಳಿ...

View post on Instagram