ಹಳದಿ ಮಾರ್ಗದ ಮೆಟ್ರೋದಲ್ಲಿ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ತಿಂಗಳಲ್ಲಿ ನಾಲ್ಕನೇ ರೈಲು ಸಂಚಾರಕ್ಕೆ ಸೇರ್ಪಡೆ ಆದ ನಂತರ ಪ್ರತಿ 15 ನಿಮಿಷಕ್ಕೆ ಒಂದು ರೈಲು ಓಡಿಸಲು ಸಾಧ್ಯವಾಗುತ್ತದೆ

ಬೆಂಗಳೂರು : ಸದ್ಯ ಮೂರು ರೈಲು ಓಡುತ್ತಿರುವುದರಿಂದ ಪ್ರತಿ 25 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸುತ್ತಿದೆ. ಇದರಿಂದ ಹಳದಿ ಮಾರ್ಗದ ಮೆಟ್ರೋದಲ್ಲಿ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ತಿಂಗಳಲ್ಲಿ ನಾಲ್ಕನೇ ರೈಲು ಸಂಚಾರಕ್ಕೆ ಸೇರ್ಪಡೆ ಆದ ನಂತರ ಪ್ರತಿ 15 ನಿಮಿಷಕ್ಕೆ ಒಂದು ರೈಲು ಓಡಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಹಳದಿ ಮಾರ್ಗದ ಹುಸ್ಕೂರು ಮೆಟ್ರೋ ನಿಲ್ದಾಣದಲ್ಲಿ ಕುಳಿತುಕೊಳ್ಳುವುದಕ್ಕೆ ಒಂದೇ ಒಂದು ಕುರ್ಚಿ ವ್ಯವಸ್ಥೆ ಕೂಡ ಇಲ್ಲ. ಮೆಟ್ರೋ ಕಾಯುವಿಕೆ ಅವಧಿ ಹೆಚ್ಚಾಗಿರುವುದರಿಂದ ವಯಸ್ಸಾದವರು, ಗರ್ಭಿಣಿಯರು ನಿಂತೇ ರೈಲು ಕಾಯಬೇಕಾದ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 10 ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಆ.15ರಂದು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ 

ಹಳದಿ ಮಾರ್ಗ ಆರಂಭವಾದ ಬಳಿಕ 10 ಲಕ್ಷದ ಆಸುಪಾಸಿನಲ್ಲೇ ಇದ್ದ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಸ್ವಾತಂತ್ರ್ಯದಿನಾಚರಣೆಯ ದಿನ 8.80 ಲಕ್ಷಕ್ಕೆ ಇಳಿಯುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನೀಡಿರುವ ಅಂಕಿ ಅಂಶದ ಪ್ರಕಾರ ಶುಕ್ರವಾರ 8,81,430 ಪ್ರಯಾಣಿಕರು ಮೆಟ್ರೋವನ್ನು ಬಳಸಿದ್ದಾರೆ. 3,86,683 ಜನ ಟೋಕನ್‌ ಪಡೆದು ಪ್ರಯಾಣಿಸಿದ್ದರೆ 14,440 ಜನ ಎನ್‌ಸಿಎಂಸಿ ಕಾರ್ಡ್‌, 396 ಗುಂಪು ಟಿಕೆಟ್‌ ಮೂಲಕ ಸಂಚರಿಸಿದ್ದಾರೆ. ವಾಟ್ಸ್ ಆ್ಯಪ್‌, ಕ್ಯುಆರ್‌ ಕೋಡ್‌, ಪೇಟಿಎಂ ಮೆಟ್ರೋ ಟಿಕೆಟ್‌ ಪಡೆದು 1,41,701 ಜನ ಪ್ರಯಾಣಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗಾಗಿ ಬೆಳಗ್ಗೆಯೆ ಮಕ್ಕಳನ್ನು ಶಾಲಾ ಕಾಲೇಜಿಗೆ ಬಿಡಲು ಖಾಸಗಿ ವಾಹನ ಬಳಸಿರುವುದು, ಮೂರು ದಿನಗಳ ರಜಾ ಅವಕಾಶಗಳ ಹಿನ್ನೆಲೆ, ಐಟಿ ಕಾರಿಡಾರ್‌ನಲ್ಲಿ ಹೆಚ್ಚಿನ ಜನ ಓಡಾಡದಿರುವ ಕಾರಣದಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿದೆ. ನೇರಳೆ, ಹಸಿರು ಮಾರ್ಗದಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಸೋಮವಾರದಿಂದ ಪುನಃ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಲಿದೆ ಎಂದು ಮೆಟ್ರೋ ಕಾರ್ಯಾಚರಣೆ ವಿಭಾಗದ ಅಧಿಕಾರಿಗಳು ಅಭಿಪ್ರಾಯಪಟ್ಟರು.