ಹಳದಿ ಮೆಟ್ರೋ ಮಾರ್ಗದ ಜನಸಂಚಾರದ ಮೊದಲ ದಿನವೇ ಎಲ್ಲ ಮೂರು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸಿದ್ದು, ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 56 ಸಾವಿರಕ್ಕೂ ಅಧಿಕ ಜನರು ಪ್ರಯಾಣ ಮಾಡಿದ್ದಾರೆ.

ಬೆಂಗಳೂರು : ಹಳದಿ ಮೆಟ್ರೋ ಮಾರ್ಗದ ಜನಸಂಚಾರದ ಮೊದಲ ದಿನವೇ ಎಲ್ಲ ಮೂರು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸಿದ್ದು, ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 56 ಸಾವಿರಕ್ಕೂ ಅಧಿಕ ಜನರು ಪ್ರಯಾಣ ಮಾಡಿದ್ದಾರೆ.

ಬೆಳಗ್ಗೆ 6.30ಕ್ಕೆ ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿರುವ ರೈಲು ಸಂಚಾರ ಆರಂಭಿಸಿತು. ಬೊಮ್ಮಸಂದ್ರ ಕಡೆಯಿಂದ ತಿತಾಘರ್‌ನಲ್ಲಿ ನಿರ್ಮಿತ ರೈಲು ಹೊರಟಿತು.

ಹೊಸ ಮಾರ್ಗ, ಹೊಸ ಮಾದರಿಯ ರೈಲಿನಲ್ಲಿ ಪ್ರಯಾಣಿಸಲು ಕುತೂಹಲದಿಂದ ಬಂದವರೂ ಹೆಚ್ಚಾಗಿದ್ದರು. ವಿಶೇಷವಾಗಿ ನಿತ್ಯ ಎಲೆಕ್ಟ್ರಾನಿಕ್‌ ಸಿಟಿಗೆ ತೆರಳುವ ಟೆಕ್ಕಿಗಳು ಹೆಚ್ಚಾಗಿದ್ದರು. ದಟ್ಟಣೆ ಅವಧಿಯ ಬೆಳಗ್ಗೆ ಮತ್ತು ಸಂಜೆ ರೈಲಿನಲ್ಲಿ ಪ್ರಯಾಣಿಕರು ತುಂಬಿದ್ದರು. ಅನೇಕರು ಹೊಸ ರೈಲು, ನಿಲ್ದಾಣಗಳ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಹಸಿರು-ಹಳದಿ ಮಾರ್ಗದ ನಡುವಿನ ಹೊಸ ಇಂಟರ್‌ಚೇಂಜ್‌ ಅಗಿ ಬದಲಾಗಿರುವ ಕಾರಣ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕ ದಟ್ಟಣೆ ಹೆಚ್ಚಾಗಿತ್ತು. ಹಸಿರು ಮಾರ್ಗದ ಮೂಲಕ ಆಗಮಿಸಿ ಆರ್.ವಿ.ರಸ್ತೆ ನಿಲ್ದಾಣದಿಂದ ಹಳದಿ ಮಾರ್ಗದೆಡೆ ಪ್ರಯಾಣಿಸಿದರು. ಆರ್‌.ವಿ.ರಸ್ತೆಯ 3ನೇ ಪ್ಲಾಟ್‌ಫಾರ್ಮ್‌ ಮೂಲಕ ಹಳದಿ ಮಾರ್ಗಕ್ಕೆ ಬದಲಾಯಿಸಿಕೊಳ್ಳಬೇಕಿದೆ. ಈ ಕುರಿತು ಮಾಹಿತಿ ಮಾಹಿತಿಯನ್ನು ಭದ್ರತಾ ಸಿಬ್ಬಂದಿ ನೀಡಿದರು.

ಎದ್ದು ಕಂಡ ರೈಲಿನ ಕೊರತೆ ಸಮಸ್ಯೆ

ಹೊಸ ಮಾರ್ಗ ಆರಂಭ ಒಂದು ಕಡೆಯಾದರೆ 25-30 ನಿಮಿಷಗಳ ಕಾಲ ಪ್ರಯಾಣಿಕರು ಕಾದು ನಿಲ್ಲಬೇಕಾಗಿತ್ತು. ಪ್ರಮುಖ ನಿಲ್ದಾಣಗಳಾದ ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮಸಂದ್ರ, ಜಯದೇವ ಮೆಟ್ರೋ ನಿಲ್ದಾಣ, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ರೈಲಿಗಾಗಿ ಕಾದಿದ್ದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ಆದಷ್ಟು ಬೇಗ ಇನ್ನಷ್ಟು ರೈಲನ್ನು ಸೇರ್ಪಡೆ ಮಾಡಬೇಕು. ನಿಲ್ದಾಣಗಳಲ್ಲಿ ಆಸನ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರಾದ ಮಧುಕುಮಾರ್‌ ಆಗ್ರಹಿಸಿದರು.

ಇಲ್ಲಿಯೂ ಪಿಸಿಡಿ ಇಲ್ಲ:

ಹಳದಿ ಮಾರ್ಗದಲ್ಲಿಯೂ ಕೂಡ ರೈಲಿನ ಹಳಿ ಹಾಗೂ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಇಲ್ಲ.ಅವಘಡ ನಡೆಯದಿರಲು ಹೊಸ ಮಾರ್ಗದಲ್ಲಿ ಪಿಸಿಡಿ ಅಳವಡಿಸುವುದಾಗಿ ಬಿಎಂಆರ್‌ಸಿಎಲ್‌ ಹಿಂದೆ ಹೇಳಿತ್ತು. ಆದರೆ ಈಗ ನೋಡಿದರೆ ಆ ವ್ಯವಸ್ಥೆ ಇಲ್ಲ. ಶೀಘ್ರವೇ ಎಲ್ಲ ನಿಲ್ದಾಣದಲ್ಲಿ ಪಿಸಿಡಿ ಅಳವಡಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದರು.ರೈಲಿನಲ್ಲಿ ಏನೇನು ವಿಶೇಷ?ಹೊಸ ರೈಲಿನಲ್ಲಿ ಡಿಜಿಟಲ್‌ ಬೋರ್ಡ್‌ಗಳಿದ್ದು, ಇದರಲ್ಲಿ ಹಳದಿ ಮಾರ್ಗದ ಎಲ್ಲ ನಿಲ್ದಾಣಗಳ ಪಟ್ಟಿಯಿದೆ. ಜತೆಗೆ ಪ್ರಯಾಣಿಕ ಸದ್ಯ ಇರುವ ನಿಲ್ದಾಣ, ಮುಂದಿನ ನಿಲ್ದಾಣ ಹಾಗೂ ಹಿಂದಿನ ನಿಲ್ದಾಣಗಳ ಕುರಿತು ಬಿತ್ತರವಾಗುತ್ತದೆ. ಜಾಹೀರಾತು, ಸೂಚನೆ ನೀಡಲು ಪ್ರತ್ಯೇಕ ಡಿಜಿಟಲ್ ಬೋರ್ಡ್‌ಗಳಿವೆ. ಮೊಬೈಲ್‌ ಚಾರ್ಜಿಂಗ್‌ಗೆ ಸ್ವಿಚ್‌ ಬೋರ್ಡ್‌ ಜತೆಗೆ ಯುಎಸ್‌ಬಿ ಅವಕಾಶವೂ ಇದೆ. ಸುಧಾರಿತ ಸಿಸಿ ಕ್ಯಾಮೆರಾ, ಹ್ಯಾಂಡಲ್‌ ಇನ್ನಿತರ ಸೌಲಭ್ಯಗಳಿವೆ.

ಶೇ.10-20ರಷ್ಟು ಸಂಚಾರ ದಟ್ಟಣೆ ಇಳಿಕೆ

ಹಳದಿ ಮಾರ್ಗ ಆರಂಭದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಕೊಂಚ ಮಟ್ಟಿಗೆ ಸಂಚಾರ ದಟ್ಟಣೆ ಕಡಿಮೆ ಆಗಿದ್ದು ಮೊದಲ ದಿನವೇ ಕಂಡುಬಂತು. ಸುಮಾರು ಶೇ.10-20ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಿದೆ ಎನ್ನಬಹುದು. ವಾರ - ಹದಿನೈದು ದಿನಗಳಲ್ಲಿ ನಿಖರವಾಗಿ ಎಷ್ಟು ಪ್ರಮಾಣದ ಕಡಿಮೆ ಆಗಿದೆ ಎಂದು ತಿಳಿಯಬಹುದು ದಕ್ಷಿಣ ವಿಭಾಗ ಡಿಸಿಪಿ (ಸಂಚಾರ) ಗೋಪಾಲ ಬ್ಯಾಕೋಡ್ ತಿಳಿಸಿದರು.ಹಳದಿ ಮಾರ್ಗ ಆರಂಭವಾಗಿದ್ದು ಖುಷಿ ಕೊಟ್ಟಿದೆ. ನಾವು ಹಸಿರು, ನೀಲಿ ಮಾರ್ಗ ಹಾಗೂ ಅದರ ವಿಸ್ತರಿತ ಭಾಗ ಆರಂಭವಾದಾಗಲು ಸಂಚರಿಸಿದ್ದೆವು.

- ಸತೀಶ್‌ ಎಸ್‌. ಪ್ರಯಾಣಿಕಹೊಸ ರೈಲಲ್ಲಿ ಫಲಕದ ಬದಲು ಡಿಜಿಟಲ್‌ ಬೋರ್ಡ್‌ ಇರುವುದು ವಿಶೇಷ. ಪ್ರಯಾಣಿಕರ ಅನುಕೂಲಕ್ಕೆ ಆದಷ್ಟು ಬೇಗ ಹೆಚ್ಚು ರೈಲುಗಳು ಸೇರ್ಪಡೆ ಆಗಲಿ.

ರಾಜೇಶ್‌ ವಿ. ಪ್ರಯಾಣಿಕ