, ‘ನಗರ ನಕ್ಸಲರ ಮೊದಲ ಗುರಿ ಹಿಂದೂ ಶ್ರದ್ಧಾ ಕೇಂದ್ರಗಳು ಮತ್ತು ನಂಬಿಕೆಗಳು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕಿಡಿಕಾರಿದ್ದಾರೆ.

ನವದೆಹಲಿ: ದಸರಾ ಉದ್ಘಾಟನೆ ವಿಷಯ ಮತ್ತು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ಭಾರೀ ವಿವಾದ ಸೃಷ್ಟಿಸಿರುವ ಹೊತ್ತಿನಲ್ಲೇ, ‘ನಗರ ನಕ್ಸಲರ ಮೊದಲ ಗುರಿ ಹಿಂದೂ ಶ್ರದ್ಧಾ ಕೇಂದ್ರಗಳು ಮತ್ತು ನಂಬಿಕೆಗಳು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕಿಡಿಕಾರಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವ ಸಂತೋಷ್‌, ‘ಸಾಮಾಜಿಕ ಅಸ್ಥಿರತೆ ಹಾಗೂ ಅಸ್ವಸ್ಥತೆ ನಿರ್ಮಿಸುವ ಸಮಾನ ಮನಸ್ಕರ (ನಗರ ನಕ್ಸಲರ) ಮೊದಲ ಗುರಿ ಹಿಂದೂ ಶ್ರದ್ಧಾ ಕೇಂದ್ರಗಳು ಹಾಗೂ ನಂಬಿಕೆಗಳು. ಆ ಪಟ್ಟಿಯಲ್ಲಿ ಇತ್ತೀಚಿನ ಸೇರ್ಪಡೆ ಚಾಮುಂಡಿ ಬೆಟ್ಟ ಹಾಗೂ ದಸರಾ ಉತ್ಸವ’ ಎಂದು ಬರೆದಿದ್ದಾರೆ.

ದಸರಾ ಉದ್ಘಾಟನೆಗೆ ಬುಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಆಹ್ವಾನಿಸಿದ್ದನ್ನು ಬಿಜೆಪಿ ನಾಯಕರು ಈಗಾಗಲೇ ಆಕ್ಷೇಪಿಸಿದ್ದಾರೆ. ಅದರ ಬೆನ್ನಲ್ಲೇ ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಡಿ.ಕೆ.ಶಿವಕುಮಾರ್‌ ವಿವಾದದ ಕಿಡಿ ಹೊತ್ತಿಸಿದ್ದರು.