ಉತ್ತರಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಶಿಕ್ಷಣ ಇಲಾಖೆ ಆನ್‌ಲೈನ್ ಸಭೆಯಲ್ಲಿ ನೀಲಿ ಚಿತ್ರ ಪ್ರಸಾರವಾಗಿದೆ. ಜೇಸನ್ ಜೂನಿಯರ್ ಎಂಬ ಹೆಸರಿನ ವ್ಯಕ್ತಿಯಿಂದ ಈ ಘಟನೆ ನಡೆದಿದ್ದು, ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ನವದೆಹಲಿ (ಆ.13): ಉತ್ತರಪ್ರದೇಶದ ಮಹಾರಾಜ್‌ ಗಂಜ್ ಎಂಬಲ್ಲಿ ಶಿಕ್ಷಣ ಇಲಾಖೆಯ ಆನ್‌ಲೈನ್ ಸಭೆ ನಡೆಯುತ್ತಿದ್ದ ವೇಳೆ, ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ, ಇದ್ದಕ್ಕಿದ್ದಂತೆ ನೀಲಿ ಚಿತ್ರ ಪ್ರಸಾರವಾದ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಕೂಡ ಇದ್ದ ಈ ಸಭೆಯಲ್ಲಿ ಜೇಸನ್ ಜೂನಿಯರ್ ಎಂಬ ಹೆಸರಿನವರ ಸ್ಟೀನ್‌ನಲ್ಲಿ ಇಂತಹ ದೃಶ್ಯಗಳು ಪ್ರಸಾರವಾಗಿದೆ. ಇದರಿಂದ ಮುಜುಗರಗೊಂಡ ಕೆಲ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದ್ದಾರೆ. ಆದರೆ ಅರ್ಜುನ್ ಎಂಬ ಹೆಸರಿನವರು ಆಕ್ಷೇಪಾರ್ಹವಾಗಿ ಮಾತಾಡತೊಡಗಿದರು. ಇದೀಗ ಸೈಬರ್ ಪೊಲೀಸರು ಆ ಮಹಾನುಭಾವರಿಬ್ಬರ ಶೋಧಕ್ಕೆ ಇಳಿದಿದ್ದಾರೆ.

ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸೋಮವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ಆನ್‌ಲೈನ್‌ ಮೂಲಕ ಈ ಸಭೆ ನಡೆದಿತ್ತು. ಈ ಸಮಯದಲ್ಲಿ, ಗೂಗಲ್ ಮೀಟ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಸಭೆಯ ಸಮಯದಲ್ಲಿ ಅಶ್ಲೀಲ ವೀಡಿಯೊವನ್ನು ಪ್ಲೇ ಮಾಡಿದ್ದಾರೆ. ಪರದೆಯ ಮೇಲೆ ವೀಡಿಯೊ ಪ್ಲೇ ಆಗುತ್ತಿರುವುದನ್ನು ನೋಡಿದ ತಕ್ಷಣ, ಡಿಎಂ ಅದನ್ನು ತಕ್ಷಣವೇ ನಿಲ್ಲಿಸಿದರು ಮತ್ತು ಎಸ್‌ಪಿ ಜೊತೆ ಮಾತನಾಡುತ್ತಾ, ಸೈಬರ್ ಪೊಲೀಸರಿಗೆ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.

ಡಿಎಂ ಹೊರತುಪಡಿಸಿ, ಬಿಎಸ್ಎ ರಿದ್ಧಿ ಪಾಂಡೆ ಮತ್ತು ಮೂಲ ಶಿಕ್ಷಣ ಇಲಾಖೆಯ ಎಲ್ಲಾ ಬ್ಲಾಕ್ ಶಿಕ್ಷಣ ಅಧಿಕಾರಿಗಳು ಗೂಗಲ್ ಮೀಟ್‌ ಮೂಲಕ ಹಾಜರಿದ್ದರು. ಮಹಾರಾಜ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂತೋಷ್ ಕುಮಾರ್ ಶರ್ಮಾ ಅವರು ಮೂಲಭೂತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ತಿಳಿಸಲು ಎನ್ಐಸಿ ಸಭಾಂಗಣದಿಂದ ಇ-ಚೌಪಲ್ ಮೂಲಕ ಶಿಕ್ಷಕರು, ಪತ್ರಕರ್ತರು ಮತ್ತು ಸಾರ್ವಜನಿಕರೊಂದಿಗೆ ಸಂವಹನ ನಡೆಸುತ್ತಿದ್ದರು. ಈ ಸಮಯದಲ್ಲಿ, ಮಹಿಳಾ ಬಿಎಸ್ಎ ರಿದ್ಧಿ ಪಾಂಡೆ ಮತ್ತು ಎಲ್ಲಾ ಬ್ಲಾಕ್ ಶಿಕ್ಷಣ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸಲು ಹಾಜರಿದ್ದರು.

ತನಿಖೆಗೆ ಆದೇಶಿಸಿದ ಡಿಎಂ

ಸಂವಾದದಲ್ಲಿ, ಶಿಥಿಲಗೊಂಡ ಕಟ್ಟಡಗಳು, ಮಧ್ಯಾಹ್ನದ ಊಟ, ಪುಸ್ತಕಗಳ ವಿತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಜನರು ತಮ್ಮ ಅಭಿಪ್ರಾಯಗಳು ಮತ್ತು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾಗ, ಜೇಸನ್ ಎಂಬ ವ್ಯಕ್ತಿ ಆನ್‌ಲೈನ್‌ನಲ್ಲಿ ಅಶ್ಲೀಲ ವೀಡಿಯೊವನ್ನು ಪ್ಲೇ ಮಾಡಿದರು. ಇದನ್ನು ನೋಡಿದ ತಕ್ಷಣ ಡಿಎಂ ಸಭೆಯನ್ನು ನಿಲ್ಲಿಸಿ ಎಸ್‌ಪಿ ಜೊತೆ ಮಾತನಾಡಿ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದರು. ಪ್ರಸ್ತುತ, ಎಬಿಎಸ್‌ಎ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ.

ಮಹಾರಾಜ್‌ಗಂಜ್ ಕೊತ್ವಾಲಿ ಇನ್ಸ್‌ಪೆಕ್ಟರ್ ಸತ್ಯೇಂದ್ರ ರಾಯ್ ಮಾತನಾಡಿ, ಸಭೆಯ ಸಮಯದಲ್ಲಿ ಅಶ್ಲೀಲ ವೀಡಿಯೊಗಳನ್ನು ಪ್ಲೇ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಜೇಸನ್ ಎಂಬ ವ್ಯಕ್ತಿ ಆನ್‌ಲೈನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ಪ್ಲೇ ಮಾಡಿದ್ದಾನೆ. ಅರ್ಜುನ್ ಎಂಬ ವ್ಯಕ್ತಿ ಆನ್‌ಲೈನ್ ಸಾರ್ವಜನಿಕ ವಿಚಾರಣೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಅಡ್ಡಿಪಡಿಸಿದ್ದಾನೆ. ಇಡೀ ವಿಷಯದ ತನಿಖೆ ನಡೆಯುತ್ತಿದೆ.