ಹೆಸರು ಬದಲಾವಣೆ, ಬೆರಳಚ್ಚು ನವೀಕರಣ ಮೊದಲಾದ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
ನವದೆಹಲಿ: ಹೆಸರು ಬದಲಾವಣೆ, ಬೆರಳಚ್ಚು ನವೀಕರಣ ಮೊದಲಾದ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ಹೊಸ ದರಗಳು ಅ.1ರಿಂದಲೇ ಜಾರಿಗೆ ಬಂದಿವೆ. ಕಳೆದ 5 ವರ್ಷಗಳಲ್ಲಿ ಆಧಾರ್ ನವೀಕರಣ ಶುಲ್ಕದಲ್ಲಿ ಇದೇ ಮೊದಲ ಬಾರಿಗೆ ಏರಿಕೆಯಾಗಿದೆ.
ಪ್ರಮುಖ ಬದಲಾವಣೆಗಳು:
ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕದಂತಹ ವಿವರಗಳನ್ನು ಬದಲಾಯಿಸಲು ಶುಲ್ಕ 50 ರು.ನಿಂದ 75 ರು.ಗೆ ಏರಿಕೆಯಾಗಿದೆ. ಬೆರಳಚ್ಚು, ಕಣ್ಣಿನ ಸ್ಕ್ಯಾನ್, ಫೋಟೋದಂತಹ ಬಯೋಮೆಟ್ರಿಕ್ ವಿವರಗಳನ್ನು ಬದಲಾಯಿಸುವ ಶುಲ್ಕ 100 ರು.ನಿಂದ 125ಕ್ಕೆ ಏರಿಕೆಯಾಗಿದೆ. 5-7 ವರ್ಷದ ಮಕ್ಕಳು ಮತ್ತು 15-17 ವರ್ಷದ ಹದಿಹರೆಯದವರಿಗೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣಕ್ಕೆ ಈಗ ಶುಲ್ಕ ಇಲ್ಲ. ಈ ಹಿಂದೆ ಇದಕ್ಕೆ ₹50 ಶುಲ್ಕವಿತ್ತು.
ಯಾವುದರಲ್ಲಿ ಬದಲಾವಣೆಯಿಲ್ಲ?:
ಹೊಸ ಆಧಾರ್ ಕಾರ್ಡ್ ಪಡೆಯುವುದು ಇನ್ನುಮುಂದೆಯೂ ಉಚಿತವಾಗಿದೆ, ಯಾವುದೇ ಶುಲ್ಕ ಇಲ್ಲ. ಆಧಾರ್ ಕೇಂದ್ರಕ್ಕೆ ಭೇಟಿ ನೀಡಲಾಗದವರಿಗೆ, ಯುಐಡಿಎಐ ಮನೆಯಲ್ಲೇ ನವೀಕರಣ ಸೇವೆಯನ್ನು ಒದಗಿಸುತ್ತದೆ. ಇದಕ್ಕೆ ಮೊಬೈಲ್ ಆಧಾರ್ ಆ್ಯಪ್ ಅನ್ನು ಬಳಸಲಾಗುತ್ತದೆ. ಈ ಸೇವೆಯ ಶುಲ್ಕ 700 ರು. ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಸೇವೆಗಾಗಿ ಯುಐಡಿಎಐಗೆ ಇಮೇಲ್ ಮೂಲಕ ಸಂಪರ್ಕಿಸಿ ಅಪಾಯಿಂಟ್‌ಮೆಂಟ್ ಪಡೆಯಬೇಕು.
-5 ವರ್ಷಗಳ ಬಳಿಕ ಮೊದಲ ಬಾರಿ ಶುಲ್ಕದಲ್ಲಿ ಏರಿಕೆ
-ಹೊಸ ಆಧಾರ್ ಪಡೆಯುವುದು ಎಂದಿನಂತೆ ಉಚಿತ
ಮತದಾರ ನೋಂದಣಿ, ರದ್ದತಿಗೆ ಇನ್ನು ಇ-ದೃಢೀಕರಣ ಕಡ್ಡಾಯ
ನವದೆಹಲಿ : ಕರ್ನಾಟಕದ ಆಳಂದದಲ್ಲಿ ಕೆಲ ಮತದಾರರ ಹೆಸರುಗಳನ್ನು ಅಕ್ರಮವಾಗಿ ಮತಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಸಮಸ್ಯೆಯ ಪರಿಹಾರಕ್ಕೆ ಚುನಾವಣಾ ಆಯೋಗ ಮುಂದಾಗಿದೆ ಹಾಗೂ ಹೆಸರು ಸೇರಿಸಲು ಹಾಗೂ ತೆಗೆಸಲು ಇ-ಪರಿಶೀಲನೆ (ಇ-ದೃಢೀಕರಣ) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದಕ್ಕಾಗಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮತದಾರರು ನೀಡುವುದು ಕಡ್ಡಾಯವಾಗಲಿದೆ. ಆನ್‌ಲೈನ್‌ನಲ್ಲಿ ಫಾರ್ಂ 7 ಬಳಸಿ ಹೆಸರು ತೆಗೆಸಲಾಗುತ್ತದೆ. ಇದರಲ್ಲಿ ವ್ಯಕ್ತಿಯೊಬ್ಬನ ಹೆಸರು ಅಥನಾ ದೂರವಾಣಿ ಸಂಖ್ಯೆಯನ್ನು ಇನ್ಯಾರೋ ನಮೂದಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಇದಕ್ಕೆ ತಡೆ ಒಡ್ಡಲು ಈಗ ನಿರ್ಧರಿಸಲಾಗಿದೆ. ಇದರ ಬದಲು ನೋಂದಾಯಿತ ಸಂಖ್ಯೆಗೆ ಇನ್ನು ಮುಂದೆ ಒಟಿಪಿ ಕಳಿಸಲಾಗುವುದು. ಅದನ್ನು ಹಾಕಿದ ಬಳಿಕವಷ್ಟೇ ಪ್ರಕ್ರಿಯೆಯನ್ನು ಮುಂದುವರೆಸಲು ಸಾಧ್ಯವಾಗಲಿದೆ
