ಕೇಂದ್ರ ಜಿಎಸ್‌ಟಿ ಮಂಡಳಿಯ ಎರಡು ದಿನಗಳ ಸಭೆ ಬುಧವಾರದಿಂದ ಆರಂಭ. ದಿನಬಳಕೆ ವಸ್ತುಗಳು, ಇ.ವಿ ವಾಹನಗಳಿಗೆ ಶೇ.5ರಷ್ಟು ತೆರಿಗೆ ಇಳಿಕೆ ಪ್ರಸ್ತಾಪ ಪರಿಶೀಲನೆ.

  • ಇಂದು ಜಿಎಸ್‌ಟಿ ಮಂಡಳಿಯ ಮಹತ್ವದ ಸಭೆ ನಿಗದಿ
  • ದಿನಬಳಕೆ ವಸ್ತು, ಇ.ವಿ ವಾಹನಗಳಿಗೆ ಶೇ.5ರಷ್ಟು ತೆರಿಗೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯ ಕೇಂದ್ರ ಜಿಎಸ್‌ಟಿ ಮಂಡಳಿಯ ಮಹತ್ವದ ಸಭೆ ಬುಧವಾರದಿಂದ 2 ದಿನಗಳ ಕಾಲ ಇಲ್ಲಿ ನಡೆಯಲಿದೆ.

ಹಾಲಿ 4 ಸ್ತರದಲ್ಲಿರುವ ಜಿಎಸ್ಟಿ ತೆರಿಗೆಯನ್ನು ಶೇ.5 ಮತ್ತು ಶೇ.18ರ 2 ಸ್ತರಕ್ಕೆ ಇಳಿಸಲು ಕೇಂದ್ರ ಸರ್ಕಾರ ಪ್ರಸ್ತಾಪ ಮುಂದಿಟ್ಟಿದೆ. ಈ ಪ್ರಸ್ತಾಪಕ್ಕೆ ಈಗಾಗಲೇ ಜಿಎಸ್ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದ್ದು, ಅದನ್ನು ಬುಧವಾರದ ಸಭೆ ಪರಿಶೀಲಿಸಲಿದೆ.

ಈ ಪೈಕಿ ಯಾವ್ಯಾವ ವಸ್ತುಗಳನ್ನು ಯಾವ ಪಟ್ಟಿಗೆ ತರಬೇಕೆಂಬ ಬಗ್ಗೆ ಬುಧವಾರದ ಸಭೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ದಿನಬಳಕೆಯ ವಸ್ತುಗಳು, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ವಿದ್ಯುತ್‌ ಚಾಲಿತ ವಾಹನಗಳನ್ನು ಹಾಲಿ ಇರುವ ಶೇ.28 ಮತ್ತು ಶೇ.18ರ ಸ್ತರದಿಂದ ಶೇ.5ಕ್ಕೆ ಇಳಿಸುವ ಕುರಿತು ಪ್ರಸ್ತಾಪವನ್ನು ಸಚಿವೆ ನಿರ್ಮಲಾ ಅವರು ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಮುಂದೆ ಇಡಲಿದ್ದಾರೆ ಎನ್ನಲಾಗಿದೆ. 2017ರಲ್ಲಿ ದೇಶದಲ್ಲಿ ಜಿಎಸ್ಟಿ ನಿಯಮಗಳು ಜಾರಿ ಬಂದ ಬಳಿಕ ಶೇ.5, ಶೇ.12, ಶೇ.18 ಮತ್ತು ಶೇ.28ರ ತೆರಿಗೆ ಸ್ತರ ಜಾರಿಯಲ್ಲಿದೆ.

ಇದನ್ನೂ ಓದಿ: ಭಾರತ ನಮ್ ಜೊತೆ ಇರ್ಬೇಕಿತ್ತು ರಷ್ಯಾ ಜೊತೆ ಅಲ್ಲ: ಪುಟಿನ್ ಮೋದಿ ಭೇಟಿ ಬಳಿ ಟ್ರಂಪ್ ಸಲಹೆಗಾರ ಹೇಳಿದ್ದೇನು?

ಜಾರಂಗೆ ಬೇಡಿಕೆಗೆ ಸರ್ಕಾರ ಅಸ್ತು: ಮರಾಠ ಮೀಸಲು ಹೋರಾಟ ಅಂತ್ಯ

ಮುಂಬೈ: ಮರಾಠ ಮೀಸಲು ಸಂಬಂಧ ಮನೋಜ್‌ ಜಾರಂಗೆ ಮುಂದಿಟ್ಟಿದ್ದ ಬಹುತೇಕ ಬೇಡಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಸಮ್ಮತಿ ನೀಡಿದೆ. ಇದರೊಂದಿಗೆ ಕಳೆದ 5 ದಿನಗಳಿಂದ ನಡೆಸುತ್ತಿದ್ದ ತಮ್ಮ ಮೀಸಲು ಹೋರಾಟವನ್ನು ಜಾರಂಗೆ ಹಿಂದಕ್ಕೆ ಪಡೆದಿದ್ದಾರೆ. ಅರ್ಹ ಮರಾಠರಿಗೆ ಕುಣಬಿ ಜಾತಿ ಪ್ರಮಾಣ ಪತ್ರ, ಹೈದರಾಬಾದ್‌ ಗೆಜೆಟ್‌ ಜಾರಿಗೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿದೆ. ಇದರಿಂದಾಗಿ ಕುಣಬಿ ಪ್ರಮಾಣಪತ್ರ ಪಡೆದ ಮರಾಠಿಗರು ಇನ್ನು ಒಬಿಸಿ ಕೋಟಾದಡಿ ಮೀಸಲು ಪಡೆಯಲು ಅರ್ಹರಾಗುತ್ತದೆ. 

ಹೈದ್ರಾಬಾದ್‌ ನಿಜಾಮರ ಕಾಲಘಟ್ಟದಲ್ಲಿ ಹೊರಡಿಸಿದ್ದ ನಿಯಮದ ಪ್ರಕಾರ ಕುಣಬಿ ಜನಾಂಗ ಎಂದರೆ ಮರಾಠರ ಅನೇಕ ಸಮುದಾಯಗಳನ್ನು ಒಳಗೊಂಡ ಹಿಂದುಳಿದ ವರ್ಗ. ಈ ಹಿಂದೆ ಕುಣಬಿಗಳಿಗೆ ಅಧಿಕಾರ, ಆಡಳಿತ ಎರಡರಲ್ಲೂ ಪ್ರಾತಿನಿಧ್ಯ ನೀಡಲಾಗಿತ್ತು, ಅನಂತರ ಬದಲಾದ ಕಾಲಘಟ್ಟದಲ್ಲಿ ಮೀಸಲಾತಿ ನೀಡಲಾಯಿತು.

ಇದನ್ನೂ ಓದಿ: ಭಾರತದಲ್ಲಿನ ತನ್ನೆಲ್ಲಾ ವ್ಯವಹಾರ ಕ್ಲೋಸ್ ಮಾಡ್ತಿದೆ ಬ್ಯಾಂಕ್; ನಿಮ್ಮ ಅಕೌಂಟ್ ಇದ್ಯಾ?