ಹಣತೆಗೆ ಯಾಕೆ ಖರ್ಚು ಮಾಡುತ್ತೀರಿ? ಅಯೋಧ್ಯೆ ದೀಪೋತ್ಸವ ಕುರಿತು ಅಖಿಲೇಶ್ ಯಾದವ್ ವಿವಾದ, ಕ್ರೈಸ್ತರಿಂದ ಕಲಿಯಿರಿ ಎಂದ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದಾರೆ. ಅಖಿಲೇಶ್ ಮಾತಿಗೆ ಬಿಜೆಪಿ ತಿರುಗೇಟು ನೀಡಿದ್ದರೆ, ಹಿಂದೂ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಲಖನೌ(ಅ.18) ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆಯೋಧ್ಯೆ ನಗರಿಯಲ್ಲಿ ದೀಪಾವಳಿ ಅತ್ಯಂತ ವಿಶೇಷ. ಅದರಲ್ಲೂ ರಾಮ ಮಂದಿರ ಉದ್ಘಾಟನೆ ಬಳಿಕ ಆಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಗುತ್ತಿದೆ. ಹಣತೆ ಬೆಳಗಿ ದೀಪೋತ್ಸವ ಆಚರಿಸಲಾಗುತ್ತದೆ. ಹಿಂದೂಗಳ ಆಚರಣೆ ಹಾಗೂ ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿರುವ ಖರ್ಚಿನ ಕುರಿತು ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ. ಇದು ವಿವಾದವಾಗಿ ಮಾರ್ಪಟ್ಟಿದೆ. ಆಯೋಧ್ಯೆ ದೀಪೋತ್ಸವದ ಹಣತೆಗೆ ಖರ್ಚು ಯಾಕೆ ಮಾಡುತ್ತಿದ್ದೀರಿ, ನೀವು ಕ್ರೈಸರ ಕ್ರಿಸ್ಮಸ್‌ನಿಂದ ಪಾಠ ಕಲಿಯಿರಿ ಎಂದು ಅಖಿಲೇಶ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರತಿ ವರ್ಷ ಹಣತೆಗೆ ಖರ್ಚು
ಆಯೋಧ್ಯೆ ದೀಪೋತ್ಸವಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹಣತೆಗೆ ಖರ್ಚು ಮಾಡುತ್ತಿದೆ. ಪ್ರತಿ ವರ್ಷ ಖರ್ಚು ಮಾಡುತ್ತಿದ್ದಾರೆ. ದೀಪೋತ್ಸವಕ್ಕೆ ಹಣತೆ ಖರ್ಚು ಯಾಕೆ, ನೀವು ಕ್ರೈಸ್ತರ ಕ್ರಿಸ್ಮಸ್ ಆಚರಣೆ ನೋಡಿ, ಅವರು ಕ್ರಿಸ್ಮಸ್ ವೇಳೆ ಒಂದು ತಿಂಗಳು ಎಲ್ಲಾ ನಗರಗಳನ್ನು ಲೈಟ್ ಮೂಲಕ ಸಿಂಗರಿಸುತ್ತಾರೆ. ನೀವು ಹಣತೆ ಖರೀದಿಸುತ್ತಾ ಖರ್ಚು ಮಾಡುತ್ತೀದ್ದೀರಿ ಎಂದು ಅಖಿಲೇಶ್ ಯಾದವ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಬಿಜೆಪಿ ತಿರುಗೇಟು
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಈ ವಿವಾದಿತ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರಾಮಮಂದಿರ ಅಂದೋಲವನ್ನು ವಿರೋಧಿಸುತ್ತಾ ಬಂದಿರುವ ಸಮಾಜವಾದಿ ಪಾರ್ಟಿ, ಹಲವು ವರ್ಷಗಳ ಕಾಲ ಆಯೋಧ್ಯೆಯನ್ನು ಕತ್ತಲಲ್ಲಿ ಇಟ್ಟಿತ್ತು. ಇಷ್ಟೇ ಅಲ್ಲ ರಾಮ ಭಕ್ತರ ಮೇಲೆ ದಾಳಿ ಮಾಡುವುದೇ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಇದೀಗ ಆಯೋಧ್ಯೆಯ ದೀಪೋತ್ಸವನ್ನು ವಿರೋಧಿಸುತ್ತಿದೆ. ಆಯೋಧ್ಯೆಯಲ್ಲಿ ದೀಪೋತ್ಸವದಿಂದ ಹಲವು ವ್ಯಾಪಾರಿಗಳು, ಸಾಮಾನ್ಯ ಜನರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕೆಲವರಿಗೆ ಇದು ಹಿಡಿಸುತ್ತಿಲ್ಲ ಎಂದು ಶೆಹಜಾದ್ ಪೂನವಾಲ ಹೇಳಿದ್ದಾರೆ.
ದೀಪಾವಳಿಗೆ ಹಣತೆ ಹಿಂದೂಗಳ ಸಂಸ್ಕೃತಿ
ದೀಪಾವಳಿಗೆ ಹಣತೆ ಬೆಳಗುವುದು ಹಿಂದುಗಳ ಸಂಸ್ಕೃತಿ, ಕ್ಯಾಂಡಲ್ ಬೆಳಗುವುದು ಕ್ರೈಸ್ತರ ಪದ್ಧತಿ. ಯಾವುದು ಎಲ್ಲಿ ಬೆಳಗಬೇಕು, ಹೇಗೆ ಬೆಳಗಬೇಕು ಅನ್ನೋ ಜ್ಞಾನವಿಲ್ಲದೆ ಅಖಿಲೇಶ್ ಯಾದವ್ ಮಾತನಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಸರ್ಕಾರ ಹಣತೆಗೆ ಅತ್ಯಲ್ಪ ಮೊತ್ತ ಖರ್ಚು ಮಾಡುತ್ತಿದೆ. ಹಲವರು ಹಣತೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹಿಂದೂ ದೇವಸ್ಥಾನಗಳಿಂದ, ಆಯೋಧ್ಯೆ ಶ್ರೀರಾಮ ಮಂದಿರದಿಂದ ಪಡೆಯುತ್ತಿದೆ. ಇದೇ ಹಣದ ಅತ್ಯಲ್ಪ ಹಣದಲ್ಲಿ ಹಣತೆ ಬೆಳಗಲಾಗುತ್ತಿದೆ. ಇದರಲ್ಲಿ ತಪ್ಪೇನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಬೆಳಗುತ್ತಿದೆ 26 ಲಕ್ಷ ಹಣತೆ
ಆಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ಬರೋಬ್ಬರಿ 26 ಲಕ್ಷ ಹಣತೆ ಬೆಳಲಾಗುತ್ತಿದೆ. ಅಕ್ಟೋಬರ್ 17 ರಿಂದ ಆರಂಭಗೊಂಡಿರುವ ಆಯೋಧ್ಯೆ ದೀಪೋತ್ಸವ 56 ಘಾಟ್‌ಗಳಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಸರಯು ನದಿ ಸೇರಿದಂತೆ 56 ಘಾಟ್‌ಗಳಲ್ಲಿ 26,11,101 ಹಣತೆ ಬೆಳಗಲಾಗುತ್ತದೆ.
2017ರಿಂದ ಆಯೋಧ್ಯೆ ದೀಪೋತ್ಸವ ದಾಖಲೆ ಪುಟ ಸೇರಿಕೊಂಡಿದೆ. 2017ರಲ್ಲಿ 1.71 ಲಕ್ಷ ಹಣತೆ ಬೆಳಗಲಾಗಿತ್ತು. ಇದೀಗ 26 ಲಕ್ಷಕ್ಕೆ ಏರಿಕೆಯಾಗಿದೆ.
