ತೆಲಂಗಾಣದ ಮಹಿಳೆಯೊಬ್ಬರು ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆಯಾಗಿದೆ. ಈ ಘಟನೆ ಮೆಹಬೂಬ್‌ನಗರ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಸ್ಯಾಹಾರಿ ಆಹಾರದಲ್ಲಿ ಮಾಂಸ, ಪಪ್ಸ್‌ಗಳಲ್ಲಿ ಹಲ್ಲಿ ಇಲಿ, ಚೇಳು, ಇರುವೆ ಹೀಗೆ ಪ್ರಾಣಿಗಳ ಕಳೆಬರ ಆಗಾಗ ಕಾಣ ಸಿಕ್ಕಿ ದೊಡ್ಡ ಸುದ್ದಿಯಾಗಿದ್ದನ್ನು ನೀವು ಕೇಳಿರಬಹುದು. ಅದೇ ರೀತಿಯ ಮತ್ತೊಂದು ಅವಾಂತರ ಇಲ್ಲೊಂದು ಕಡೆ ನಡೆದಿದೆ. ತೆಲಂಗಾಣದ ಮಹಿಳೆಯೊಬ್ಬರಿಗೆ ಸ್ನ್ಯಾಕ್ಸ್‌ನಲ್ಲಿ ಸ್ನೇಕ್ ಪತ್ತೆಯಾಗಿದೆ..! ಹೌದು ಬೇಕರಿಯೊಂದರಿಂದ ಖರೀದಿಸಿದ ಪಫ್ಸ್‌ನಲ್ಲಿ ಅವರಿಗೆ ಹಾವೊಂದು ಕಾಣಿಸಿದ್ದು, ಕೂಡಲೇ ಅದನ್ನು ಕವರ್‌ಗೆ ತುಂಬಿಸಿಕೊಂಡು ಬಂದ ಅವರು ಸೀದಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.

ಎಗ್‌ಪಫ್‌ನಲ್ಲಿ ಸ್ಟಪ್‌ ಆಗಿತ್ತು ಹಾವು:

ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಮಹಿಳೆ ಶ್ರೀಶೈಲಾ ಎಂಬುವವರು ಮೆಹಬೂಬಾನಗರದ ಅಯ್ಯಂಗಾರ್ ಹೆಸರಿನ ಬೇಕರಿಯೊಂದರಿಂದ ಎಗ್‌ಪಫ್ಸ್‌ ಖರೀದಿಸಿ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರೆ. ಜಡ್ಚರ್ಲಾದ ಮುನಿಸಿಪಾಲಿಟಿ ಪ್ರದೇಶದಲ್ಲಿ ಈ ಬೇಕರಿ ಇದ್ದು, ಮನೆಗೆ ಬಂದ ನಂತರ ಎಗ್ ಪಫ್ಸ್‌ ಅನ್ನು ಮಕ್ಕಳ ಜೊತೆ ಕುಳಿತು ತಿನ್ನುವುದಕ್ಕಾಗಿ ತೆರೆದು ನೋಡಿದಾಗ ಅವರಿಗೆ ಅದರೊಳಗೆ ಹಾವು ಇರುವುದು ಕಾಣಿಸಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ:

ಕೂಡಲೇ ಅವರು ಅದನ್ನು ವಾಪಸ್‌ ಬೇಕರಿಗೆ ತೆಗೆದುಕೊಂಡು ಹೋಗಿ ತೋರಿಸಿದ್ದು, ಈ ವೇಳೆ ಮಾಲೀಕರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ ಇದರಿಂದ ಆಕ್ರೋಶಗೊಂಡ ಮಹಿಳೆ ಶ್ರೀಶೈಲಾ ಜಡ್ಚರ್ಲಾದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ವೀಡಿಯೋ ವೈರಲ್ ಆಗ್ತಿದೆ.

ವೀಡಿಯೋ ವೈರಲ್ ಆಗ್ತಿದ್ದಂತೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಪಪ್ಸ್‌ನ್ನು ಹಾಗೆಯೇ ಬಾಯಿಗಿಡುತ್ತಾರೆ. ಯಾರು ಕೂಡ ಅದನ್ನು ಎರಡು ಭಾಗ ಮಾಡಿ ತೆರೆದು ತಿನ್ನುವುದಿಲ್ಲ ಹೀಗಾಗಿ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನೀವು ಪಫ್ಸ್‌ ತಿನ್ಬೇಕಾದ್ರೆ ಅದನ್ನು ಒಪನ್ ಮಾಡಿ ತಿನ್ತಿರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅನೇಕರು ಈ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ, ಚೀನಾದಿಂದ ಆಮದು ಮಾಡಿಕೊಂಡಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಎಗ್ ಪಫ್ಸ್‌ ವೆಜ್ ಪಫ್ಸ್‌ ಬಳಿಕ ಈಗ ಸ್ನೇಕ್ ಪಪ್‌ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram