ನೋಯ್ಡಾದ ಡೇ ಕೇರ್ ಸೆಂಟರ್‌ನಲ್ಲಿ 15 ತಿಂಗಳ ಮಗುವಿನ ಮೇಲೆ ಕೇರ್‌ಟೇಕರ್ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮಗುವಿನ ತೊಡೆಯ ಮೇಲೆ ಗಾಯದ ಗುರುತುಗಳು ಕಂಡುಬಂದ ನಂತರ ಪೋಷಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ನೋಯ್ಡಾ: ದೇಶದ ಅನೇಕ ಮಹಾನಗರಗಳಲ್ಲಿ ಸಾವಿರಾರು ಬೇಬಿಕೇರ್ ಸೆಂಟರ್‌ಗಳಿವೆ. ಬಹುತೇಕ ಗಂಡ ಹೆಂಡತಿ ಇಬ್ಬರು ದುಡಿಮೆ ಮಾಡುವುದರಿಂದಾಗಿ ಮಕ್ಕಳನ್ನು ಡೇ ಕೇರ್ ಸೆಂಟರ್ ಅಥವಾ ಬೇಬಿಸಿಟ್ಟಿಂಗ್ ಸೆಂಟರ್‌ಗಳಲ್ಲಿ ಬಿಟ್ಟು ದಂಪತಿ ದುಡಿಮೆಗೆ ಹೋಗುತ್ತಾರೆ ಮಗುವನ್ನು ತಾವು ಕೆಲಸಕ್ಕೆ ಹೋಗುವ ವೇಳೆ ಡೇ ಕೇರ್ ಸೆಂಟರ್‌ಗೆ ಬಿಟ್ಟು ಹೋದರೆ ವಾಪಸ್ ಬರುವ ವೇಳೆ ಕರೆದುಕೊಂಡು ಬರುತ್ತಾರೆ. ಆದರೆ ನೋಯ್ಡಾದ ಡೇ ಕೇರ್ ಸೆಂಟರ್‌ನಲ್ಲಿ ಇಂತಹ ಪೋಷಕರು ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಡೇ ಕೇರ್‌ನಲ್ಲಿ ಮಕ್ಕಳ ರಕ್ಷಣೆಗೆ ಇದ್ದ ಕೇರ್ ಟೇಕರ್‌ಗಳೇ ಮಗುವೊಂದರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡೇ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಅಟೆಂಡೆಂಟ್‌ವೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾದ ಪರಸ್ ಟಿರೆಯ ರೆಸಿಡೆಂಟಿಯಲ್ ಕಾಂಪ್ಲೆಕ್ಸ್‌ನಲ್ಲಿದ್ದ ಬೇಬಿಕೇರ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ನೋಯ್ಡಾದ ಸೆಕ್ಟರ್ 137ರಲ್ಲಿ ಇರುವ ಪರಸ್ ಟಿರೆಯ ವಸತಿ ಸಂಕೀರ್ಣದಲ್ಲಿದ್ದ ಡೇ ಕೇರ್ ಸೆಂಟರ್‌ನಲ್ಲಿ ಸಂದೀಪ್ ಎಂಬುವವರು ತಮ್ಮ 15 ತಿಂಗಳ ಮಗಳನ್ನು ದಿನದಲ್ಲಿ ಎರಡು ಗಂಟೆಗಳ ಕಾಲ ಬಿಡುತ್ತಿದ್ದರು. ಇತ್ತೀಚೆಗೆ ಮಗುವಿನ ತೊಡೆಯಲ್ಲಿ ಗಾಯದಂತಹ ರಕ್ತಕಂದಿದ ಗುರುತನ್ನು ಪೋಷಕರು ಗಮನಿಸಿದ್ದು, ಬಳಿಕ ಚರ್ಮದ ಅಲರ್ಜಿ ಇರಬಹುದು ಎಂದು ಸುಮ್ಮನಾಗಿದ್ದರು. ಆದರೆ ಡೇ ಕೇರ್‌ನಲ್ಲಿದ್ದ ಶಿಕ್ಷಕಿಯೂ ಈ ಬಗ್ಗೆ ಪೋಷಕರ ಗಮನ ಸೆಳೆದಿದ್ದು, ಗಾಯದ ಗುರುತಿನ ಬಗ್ಗೆ ಹೇಳಿದ್ದರು. ಹೀಗಾಗಿ ಪೋಷಕರು ಮಗುವನ್ನು ವೈದ್ಯರ ಬಳಿ ಇದು ಏನು ಎಂದು ತಿಳಿದುಕೊಳ್ಳುವ ಸಲುವಾಗಿ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಇದ್ದು ಕಚ್ಚಿದ ಗುರುತು ಎಂದು ಹೇಳಿದ್ದು, ಇದರಿಂದ ಪೋಷಕರು ದಂಗಾಗಿ ಹೋಗಿದ್ದಾರ. ನಂತರ ವಸತಿ ಸಂಕೀರ್ಣದಲ್ಲಿ ಹೋಗಿ ಡೇ ಕೇರ್‌ನ ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ಹೇಳಿದ್ದಾರೆ. ಸಿಸಿಟಿವಿ ದೃಶ್ಯ ನೋಡಿದ ಪೋಷಕರು ದಂಗಾಗಿದ್ದು, ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಸಿಸಿಟಿವಿಯಲ್ಲಿ ಇದ್ದಿದ್ದೇನು?
ಸಿಸಿಟಿವಿ ದೃಶ್ಯಾವಳಿಯಲ್ಲಿ ಅಲ್ಲಿನ ಡೇ ಕೇರ್‌ನ ಕೆಲಸದಾಕೆ ಮಗುವಿನ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುತ್ತಾಳೆ. ಮಗುವಿನ ಮುಖಕ್ಕೆ ಹೊಡೆದು ಮಗುವನ್ನು ನೆಲಕ್ಕೆ ಬೀಳಿಸುತ್ತಿರುವ ದೃಶ್ಯ ಸೆರೆ ಆಗಿದೆ. ಡೇ ಕೇರ್ ಮಹಿಳೆ ಮಾಡಿದ ಹಲ್ಲೆಯಿಂದಾಗಿ ಮಗು ಜೋರಾಗಿ ಅಳುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಘಟನೆ ಈಗ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಸಾವಿರಾಉ ಉದ್ಯೋಗಿಗಳು ತಮ್ಮ ಮಕ್ಕಳನ್ನು ಡೇ ಕೇರ್‌ಗಳಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಮಕ್ಕಳ ಸುರಕ್ಷತೆಗಾಗಿ ಸಾವಿರಾರು ರೂಪಾಯಿಯನ್ನು ವೆಚ್ಚ ಮಾಡುತ್ತಾರೆ. ಆದರೆ ಅಲ್ಲಿ ಮಕ್ಕಳ ಪಾಲನೆ ಮಾಡುವವರೆ ಮಕ್ಕಳ ಮೇಲೆ ಹಲ್ಲೆ ಮಾಡಿದರೆ ನಮ್ಮ ಮಕ್ಕಳು ಅಲ್ಲಿ ಎಷ್ಟು ಸುರಕ್ಷಿತ ಎಂಬುದು ಪೋಷಕರ ಪ್ರಶ್ನೆಯಾಗಿದೆ.
ಸಿಸಿಟಿವಿ ದೃಶ್ಯ ನೋಡಿ ಪೊಲೀಸರ ಸಂಪರ್ಕಿಸಿದ ಪೋಷಕರು
ಸಿಸಿಟಿವಿ ದೃಶ್ಯ ನೋಡಿ ಭಯಗೊಂಡ ಪೋಷಕರು ಸೆಕ್ಟರ್ 142 ಪೊಲೀಸ್ ಠಾಣೆಯಲ್ಲಿ ಈ ಬೇಬಿ ಡೇ ಕೇರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಘಟನೆಗಳ ಸಮಯದಲ್ಲಿ ಡೇಕೇರ್ ಮಾಲೀಕರು ಮಧ್ಯಪ್ರವೇಶಿಸಲಿಲ್ಲ. ತಮ್ಮ ಮಗುವಿನ ಮೇಲಿನ ಹಲ್ಲೆಯ ಬಗ್ಗೆ ಹೇಳಿದಾಗ ಮಾಲೀಕರು ಮತ್ತು ಸಹಾಯಕರು ನಮ್ಮನ್ನೇ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಗುವಿನ ಪೋಷಕರು ದೂರಿದ್ದಾರೆ. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ನಂತರ ಸಹಾಯಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಮಗುವಿನ ತಂದೆ ಸಂದೀಪ್, ಮೇ 21 ರಿಂದ ತಮ್ಮ ಮಗುವನ್ನು ಡೇಕೇರ್‌ಗೆ ಕಳುಹಿಸಲು ಪ್ರಾರಂಭಿಸಿದ್ದೆವು. ಸೋಮವಾರ (ಆಗಸ್ಟ್ 4) ರಂದು ನನ್ನ ಮಗಳ ತೊಡೆಯ ಮೇಲೆ ರಕ್ತಕಂದಿದ ಗುರುತುಗಳಿದ್ದವು ಹೀಗಾಗಿ ಅಲರ್ಜಿ ಆಗಿರಬಹುದೇನೋ ಎಂದು ಭಯದಿಂದ ನಾವು ವೈದ್ಯರ ಬಳಿಗೆ ಹೋದೆವು, ಅವರು ಇವು ಕಚ್ಚಿದ ಗುರುತುಗಳು ಎಂದು ಹೇಳಿದರು. ನಂತರ ನಾವು ತನಿಖೆ ನಡೆಸಲು ಪ್ರಾರಂಭಿಸಿ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ನಮ್ಮ ಮಗಳಿಗೆ ಏನಾಯಿತು ಎಂಬುದು ಗೊತ್ತಾಯ್ತು. ನಂತರ ನಾವು ಪೊಲೀಸರ ಬಳಿಗೆ ಹೋದೆವು ಎಂದು ಅವರು ಹೇಳಿದ್ದಾರೆ.
ದಿನಕ್ಕೆ ಎರಡು ಗಂಟೆಗಳ ಕಾಲ ಮಗುವನ್ನು ಡೇಕೇರ್ ಸೆಂಟರ್‌ನಲ್ಲಿ ಬಿಟ್ಟು ಹೋಗುತ್ತಿದ್ದೆವು. ಅಲ್ಲಿ ಮೂವರು ಶಿಕ್ಷಕರು ಇದ್ದಾರೆ ಮತ್ತು ಅವರು ಮಗುವನ್ನು ನೋಡಿಕೊಳ್ಳುತ್ತಾರೆ ಎಂದು ನಮಗೆ ತಿಳಿಸಲಾಗಿತ್ತು. ಮಗು ಅಟೆಂಡರ್ ಜೊತೆ ಇರುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಡೇಕೇರ್ ಮಾಲೀಕರು ನಿಮ್ಮ ಮಗು ತುಂಬಾ ಸಂತೋಷವಾಗಿದೆ ಎಂದು ನಮಗೆ ಹೇಳುತ್ತಿದ್ದರು. ನಾವು ಎರಡು ಗಂಟೆಗಳಿಗೆ ತಿಂಗಳಿಗೆ 2,500 ರೂ. ಪಾವತಿಸುತ್ತಿದ್ದೆವು. ಈ ವಸತಿ ಸಂಕೀರ್ಣದಲ್ಲಿರುವ ಮತ್ತೊಂದು ಕುಟುಂಬವು ತಮ್ಮ ಮಗು ಕೂಡ ಡೇಕೇರ್‌ನಲ್ಲಿ ಇದೇ ರೀತಿಯ ಸ್ಥಿತಿ ಎದುರಿಸಿದೆ ಎಂದು ತಿಳಿಸಿದ್ದು, ಶೀಘ್ರದಲ್ಲೇ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಅವರು ಹೇಳಿದರು ಎಂದು ಸಂದೀಪ್ ಹೇಳಿದ್ದಾರೆ.
ಇಂತಹ ಘಟನೆ ಮತ್ತೊಂದು ಮಗುವಿಗೆ ಆಗಬಾರದು. ಡೇಕೇರ್ ಮಾಲೀಕರು ಮತ್ತು ಅಟೆಂಡರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗಿವೂ ತುಂಬಾ ಕಷ್ಟಕರ ದಿನಗಳು, ನಾನು ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ನನ್ನ ಹೆಂಡತಿಗೆ ನಿದ್ರೆ ಬರುತ್ತಿಲ್ಲ ಘಟನೆಯ ನಂತರ ತಮಗಾದ ಆಘಾತವನ್ನು ಹೇಳಿದರು. ನಮ್ಮ ಮಗುವನ್ನು ಹೊಡೆದ ಅಟೆಂಡರ್ ಅಪ್ರಾಪ್ತ ಎಂದು ತಿಳಿದು ಬಂದಿದೆ. ಶಿಶುಗಳನ್ನು ನೋಡಿಕೊಳ್ಳುವ ತಾಳ್ಮೆ ಹೊಂದಿರುವ (ಪ್ರಬುದ್ಧ) ಜನರನ್ನು ನೇಮಿಸಿಕೊಳ್ಳುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದರು.
ಚಾರು ಎಂಬ ಮಹಿಳೆ ಈ ಡೇಕೇರ್ ನಡೆಸುತ್ತಿದ್ದು, ಇಂತಹ ಸೂಕ್ಷ್ಮ ಕೆಲಸಕ್ಕೆ ಅಪ್ರಾಪ್ತ ವಯಸ್ಕರನ್ನು ಹೇಗೆ ನೇಮಿಸಿಕೊಂಡರು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಡೇಕೇರ್‌ನ ಪರವಾನಗಿಯನ್ನು ಪರಿಶೀಲಿಸುತ್ತಿದ್ದಾರೆ .
