ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೋಗಿಯನ್ನು ಪ್ರೀತಿಸಿ ಮದುವೆಯಾದ ವೈದ್ಯೆ, ಗಂಡನ ಕಿರುಕುಳ ತಾಳಲಾರದೆ ಸಾವಿಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 

ಹೈದರಾಬಾದ್‌: ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ರೋಗಿಯನ್ನೇ ಪ್ರೀತಿಸಿ ಮದುವೆಯಾಗಿದ್ದ ಮಾನಸಿಕ ತಜ್ಞೆಯೊಬ್ಬರು ಮದುವೆಯ ನಂತರ ಆತನ ಕಿರುಕುಳ ತಡೆದುಕೊಳ್ಳಲಾಗದೇ ಸಾವಿಗೆ ಶರಣಾದ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.

ಸಾವಿಗೆ ಶರಣಾದ ವೈದ್ಯೆಯನ್ನು ಡಾ ರಂಜಿತಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಪತಿ ರೋಹಿತ್‌ನನ್ನು ತಾನು ಇಂಟರ್ನಿ ಆಗಿ ಕೆಲಸ ಮಾಡುತ್ತಿದ್ದ ಬಂಜಾರಹಿಲ್ಸ್‌ನಲ್ಲಿರುವ ಮಾನಸಿಕ ಆರೋಗ್ಯ ಆಸ್ಪತ್ರೆಯೊಂದರಲ್ಲಿ ಮೊದಲ ಬಾರಿ ನೋಡಿದ್ದಳು. ಆಗ ರಂಜಿತಾ ಮಾನಸಿಕ ತಜ್ಞೆಯಾಗಿದ್ದರೆ, ಇತ್ತ ರೋಹಿತ್ ಮಾನಸಿಕ ಖಿನ್ನತೆಗೊಳಗಾಗಿದ್ದ ರೋಗಿಯಾಗಿದ್ದ. ಆದರೆ ರಂಜಿತಾಳ ಆರೈಕೆಯಲ್ಲಿ ಆತ ಗಮನಾರ್ಹವಾಗಿ ಸುಧಾರಿಸಿಕೊಂಡು ಮೊದಲಿನಂತೆ ಸಾಮಾನ್ಯ ವ್ಯಕ್ತಿಯಾಗಿದ್ದ. ಇದಾದ ನಂತರ ರೋಹಿತ್ ತನ್ನ ಗುಣಪಡಿಸಿದ ರಂಜಿತಾಗೆ ಪ್ರೇಮ ನಿವೇದನೆ ಮಾಡಿದ್ದ. ರೋಹಿತ್ ಲವ್ ಪ್ರಪೋಸಲ್‌ ಅನ್ನು ರಂಜಿತಾ ಒಪ್ಪಿಕೊಂಡಿದ್ದಳು. ನಂತರ ಮನೆಯರವರೆಲ್ಲಾ ಒಪ್ಪಿಯೇ ಇಬ್ಬರು ಮದುವೆಯಾಗಿದ್ದರು.

ಆದರೆ ಮದುವೆಯ ನಂತರ ರೋಹಿತ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದ, ತನ್ನ ಪ್ರತಿಯೊಂದು ಅಗತ್ಯಗಳಿಗೂ ಹೆಂಡತಿ ಬಳಿ ಹಣಕ್ಕಾಗಿ ಕೈಚಾಚುತ್ತಿದ್ದ. ಇತ್ತ ರಂಜಿತಾ ಆಸ್ಪತ್ರೆಯ ಕೆಲಸ ಬಿಟ್ಟು ನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳ ಮನಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಳು. ಹಾಗೂ ರೋಹಿತ್ ತನ್ನ ವರ್ತನೆಯನ್ನು ಬದಲಿಕೊಳ್ಳುವುದಕ್ಕಾಗಿ ಆಕೆ ಹಲವು ಬಾರಿ ರೋಹಿತ್‌ಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾಳೆ. ಆದರೆ ತನ್ನ ವರ್ತನೆ ಬದಲಿಸಿಕೊಳ್ಳದ ಆತ ಆಗಾಗ್ಗೆ ಹೆಂಡತಿ ಬಳಿ ಹಣ ಕೇಳುತ್ತಿದ್ದ ಆಕೆ ಕೊಡಲು ನಿರಾಕರಿಸಿದಾಗ ಆಕೆಯ ಮೇಲೆ ಮೃಗದಂತೆ ಹಲ್ಲೆ ಮಾಡುತ್ತಿದ್ದ ಎಂದು ರಂಜಿತಾಳ ಕುಟುಂಬದವರು ಆರೋಪಿಸಿದ್ದಾರೆ.

ಆದರೆ ದಿನ ಕಳೆದಂತೆ ರೋಹಿತ್‌ನ ವರ್ತನೆ ಮಿತಿಮೀರಿತ್ತು. ಕೇವಲ ರೋಹಿತ್ ಮಾತ್ರವಲ್ಲ ಆತನ ಕುಟುಂಬದವರು ಕೂಡ ರಂಜಿತಾಗೆ ಕಿರುಕುಳ ನೀಡಲು ಶುರು ಮಾಡಿದರು. ಆತನ ಪೋಷಕರಾದ ಕಿಷ್ಟಯ್ಯ ಹಾಗೂ ಸುರೇಖಾ ಹಾಗೂ ರೋಹಿತ್‌ನ ಸೋದರ ಮೋಹಿತ್ ಕೂಡ ರಂಜಿತಾಗೆ ಕಿರುಕುಳ ನೀಡುತ್ತಿದ್ದರು ಎಂದು ರಂಜಿತಾ ಪೋಷಕರು ಆರೋಪಿಸಿದ್ದಾರೆ. ಇದರಿಂದ ರೋಸಿ ಹೋದ ರಂಜಿತಾ ಜುಲೈ 16ರಂದು ಮೊದಲ ಬಾರಿ ನಿದ್ರೆ ಮಾತ್ರೆ ಸೇವಿಸಿ ಜೀವನ ಕೊನೆಗೊಳಿಸಲು ಯತ್ನಿಸಿದ್ದಳು. ಕೂಡಲೇ ವಿಷಯ ತಿಳಿದು ಮನೆಮಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ಪರಿಣಾಮ ಆಕೆಯ ಜೀವ ಉಳಿದಿತ್ತು.ಘಟನೆಯ ಬಳಿಕ ಆಕೆಯ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ಆದರೆ ಜುಲೈ 28 ರಂದು ಆಕೆ ಮತ್ತೆ ಆತ್ಮ8ತ್ಯೆಗೆ ಯತ್ನಿಸಿದ್ದಾಳೆ. ತಾನು ವಾಸವಿದ್ದ ಮನೆಯ 4ನೇ ಮಹಡಿಯ ಬಾತ್‌ರೂಮ್ ಕಿಟಕಿಯಿಂದ ಆಕೆ ಕೆಳಗೆ ಹಾರಿದ್ದಳು. ಈ ವೇಳೆ ಆಕೆಗೆ ಗಂಭೀರ ಗಾಯಗಳಾಗಿದ್ದವು. ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಣೆ ಮಾಡಿದರು.

ಘಟನೆಗೆ ಸಂಬಂಧಿಸಿದಂತೆ ಈಗ ಆಕೆಯ ತಂದೆ ಸಬ್ ಇನ್ಸ್‌ಪೆಕ್ಟರ್ ಆಗಿರುವ ನರಸಿಂಹ ಗೌಡ್ ನೀಡಿದ ದೂರಿನ ಮೇರೆಗೆ ಸಂಜೀವ್ ರೆಡ್ಡಿ ನಗರ ಪೊಲೀಸರು ಆಕೆಯ ಪತಿ ರೋಹಿತ್ ಹಾಗೂ ಆತನ ಕುಟುಂಬದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 306ರಡಿ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ ಕೇಸು ದಾಖಲಿಸಿದ್ದಾರೆ. ನಾವು ಆಕೆಯ ಪತಿ ಹಾಗೂ ಕುಟುಂಬದವರ ವಿರುದ್ಧ ಕೇಸು ದಾಖಲಿಸಿದ್ದೇವೆ ತನಿಖೆ ಮುಂದುವರೆದಿದ್ದು, ಕಿರುಕುಳಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸುತ್ತಿದ್ದೇವೆ ಎಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777