ಬಿಹಾರದಲ್ಲಿ ನಡೆಸಲಾದ ವಿಶೇಷ ಮತಪಟ್ಟಿ ಪರಿಷ್ಕರಣೆ ವೇಳೆ ಕೈಬಿಡಲಾದದ 65 ಲಕ್ಷ ಮತದಾರರ ಕುರಿತ ಮಾಹಿತಿಯನ್ನು ಆ.9ರೊಳಗೆ ತನಗೆ ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿದೆ.

ನವದೆಹಲಿ : ಬಿಹಾರದಲ್ಲಿ ನಡೆಸಲಾದ ವಿಶೇಷ ಮತಪಟ್ಟಿ ಪರಿಷ್ಕರಣೆ ವೇಳೆ ಕೈಬಿಡಲಾದದ 65 ಲಕ್ಷ ಮತದಾರರ ಕುರಿತ ಮಾಹಿತಿಯನ್ನು ಆ.9ರೊಳಗೆ ತನಗೆ ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿದೆ.

Add Asianetnews Kannada as a Preferred SourcegooglePreferred

65 ಲಕ್ಷ ಮತದಾರರನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಎಡಿಆರ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ‘ಮತಪಟ್ಟಿ ಕೈಬಿಟ್ಟ ವ್ಯಕ್ತಿಗಳು ಮೃತಪಟ್ಟಿದ್ದಾರೆಯೇ ಅಥವಾ ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡಿದ್ದಾರೆಯೇ ಎಂಬುದನ್ನು ನಮೂದಿಸಬೇಕು. ಈ ಕುರಿತು ಈಗಾಗಲೇ ರಾಜಕೀಯ ಪಕ್ಷಗಳಿಗೆ ನೀಡಿರುವ ಕರಡು ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್‌ ಸೂಚಿಸಿದೆ.

ಮತಪಟ್ಟಿ ಪರಿಷ್ಕರಣೆಯನ್ನೂ ಪ್ರಶ್ನಿಸಿ ಈಗಾಗಲೇ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದನ್ನೂ ಕೋರ್ಟ್‌ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ.

ತಮ್ಮ ಹೆಸರು ಇಲ್ಲ ಎಂದು ಗಂಭೀರ ಆರೋಪ

ಪಾಟ್ನಾ : ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ, ವಿಶೇಷ ಪರಿಷ್ಕರಣೆ (SIR) ಸಮಯದಲ್ಲಿ ನಾನು ಫಾರ್ಮ್ ಭರ್ತಿ ಮಾಡಿದ್ದೆ, ಆದರೆ ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಹೇಗೆ ಸ್ಪರ್ಧಿಸಲಿ? ಎಂದು ಪ್ರಶ್ನಿಸಿದರು. ಈ ವೇಳೆ ಅವರು ತಮ್ಮ ಮೊಬೈಲ್‌ನಲ್ಲಿ EPIC ಸಂಖ್ಯೆಯನ್ನು ಪರಿಶೀಲಿಸಿದ ವೀಡಿಯೊವನ್ನು ಪತ್ರಕರ್ತರಿಗೆ ತೋರಿಸಿದರು.

ಚುನಾವಣಾ ಆಯೋಗ ಸ್ಪಷ್ಟನೆ:

 ತೇಜಸ್ವಿ ಯಾದವ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಯಾದವ್‌ರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ 416ನೇ ಸ್ಥಾನದಲ್ಲಿದೆ. ಅವರ ಹೆಸರು ಇಲ್ಲ ಎಂಬ ಹೇಳಿಕೆ ಸುಳ್ಳು ಮತ್ತು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದೆ