ಅಮೆರಿಕ-ಭಾರತ ವ್ಯಾಪಾರ ಉದ್ವಿಗ್ನತೆಯ ನಡುವೆ, ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರ ನಾಲ್ಕು ಫೋನ್ ಕರೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು ಉಭಯ ನಾಯಕರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು (ಆ.27): ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಸುಂಕದ ಉದ್ವಿಗ್ನತೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಲ್ಕು ಫೋನ್ ಕರೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿಲ್ಲ ಎಂದು ಜರ್ಮನ್ ಪತ್ರಿಕೆಯ ವರದಿಯೊಂದು ಹೇಳಿದೆ. ಜರ್ಮನಿಯ ಪ್ರಮುಖ ಪತ್ರಿಕೆಯಾದ ಫ್ರಾಂಕ್‌ಫರ್ಟರ್ ಅಲ್ಲೆಜೆಮೈನ್ ಜೈಟಂಗ್, ಪ್ರಧಾನಿ ಮೋದಿ ಅವಮಾನಿತರಾಗಿದ್ದಾರೆ ಎಂದು ಸೂಚಿಸುವ ಚಿಹ್ನೆಗಳು ಸಿಕ್ಕಿವೆ ಎಂದು ಹೇಳಿದ್ದು, ಟ್ರಂಪ್ ಅವರೊಂದಿಗೆ ಮಾತನಾಡು ಮೋದಿ ನಿರಾಕರಿಸಿದ್ದು, ಟ್ರಂಪ್ ಅವರ ಕಿರಿಕಿರಿ ಹಾಗೂ ಅಲರ್ಟ್‌ನ ಆಳವನ್ನು ಸೂಚಿಸುತ್ತದೆ ಎಂದು ಬರೆದಿದೆ. ವರದಿಯು ತನ್ನ ವರದಿಯ ಮೂಲವನ್ನು ಬಹಿರಂಗಪಡಿಸಿಲ್ಲ.
ವ್ಯಾಪಾರ ಮಾತುಕತೆಗಳಲ್ಲಿನ ಬಿಕ್ಕಟ್ಟು ಮತ್ತು ರಷ್ಯಾದಿಂದ ತೈಲ ಖರೀದಿಸುವ ನವದೆಹಲಿಯ ನಿರ್ಧಾರದಿಂದಾಗಿ ಅಮೆರಿಕ ಭಾರತದ ಮೇಲೆ ಶೇ. 50 ರಷ್ಟು ಕಡಿದಾದ ಸುಂಕವನ್ನು ವಿಧಿಸಿರುವ ಸಮಯದಲ್ಲಿ ಇದು ಬಂದಿದೆ. ಇತ್ತೀಚೆಗೆ, ಜಪಾನ್‌ನ ನಿಕ್ಕಿ ಏಷ್ಯಾದಲ್ಲಿ ಬಂದ ವರದಿಯೊಂದು, ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್ ಅವರ ಫೋನ್ ಕರೆಗಳನ್ನು ತಪ್ಪಿಸಿದ್ದಾರೆ ಎಂದು ಹೇಳಿಕೊಂಡಿದ್ದು, "ಅವರ ಹತಾಶೆಯನ್ನು ಹೆಚ್ಚಿಸಿದೆ" ಎಂದು ಹೇಳಿದೆ.
ಫೋನ್ ಕರೆಗಳ ಮೂಲಕ ವಿವರವಾದ ಮಾತುಕತೆ ನಡೆಸುವುದು ಪ್ರಧಾನಿ ಮೋದಿಯವರ ಶೈಲಿಯಲ್ಲ ಎಂದು ಅಮೆರಿಕದಲ್ಲಿ ನೆಲೆಸಿರುವ ರಾಜತಾಂತ್ರಿಕರೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಆದರೆ, ಜರ್ಮನ್ ಸುದ್ದಿ ವರದಿ ನಿಜವೋ ಸುಳ್ಳೋ ಎಂಬುದನ್ನು ರಾಜತಾಂತ್ರಿಕರು ದೃಢಪಡಿಸಿಲ್ಲ. ಇದಕ್ಕೂ ಮೊದಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಏಪ್ರಿಲ್ 22 ರಿಂದ ಜೂನ್ 17 ರವರೆಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದರು.
ವಿದೇಶಾಂಗ ಸಚಿವಾಲಯದ ಪ್ರಕಾರ, ಆಪರೇಷನ್ ಸಿಂದೂರ್ ಬಳಿಕ ಜೂನ್ 17 ರಂದು ಇಬ್ಬರು ನಾಯಕರು ಮೊದಲ ಬಾರಿಗೆ ಮಾತನಾಡಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದ ಈಗಾಗಲೇ ಜಾರಿಯಲ್ಲಿದ್ದ ನಂತರ ಈ ಕರೆ ನಡೆಯಿತು.
ಸುಮಾರು 35 ನಿಮಿಷಗಳ ಕಾಲ ನಡೆದ ಸಂಭಾಷಣೆಯಲ್ಲಿ, ಪ್ರಧಾನಿ ಮೋದಿ ಅವರು ಟ್ರಂಪ್ ಅವರಿಗೆ ಆಪರೇಷನ್ ಸಿಂದೂರ್ ಮತ್ತು ಭಾರತದ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಬಗ್ಗೆ ವಿವರಿಸಿದರು, ಪಾಕಿಸ್ತಾನದೊಂದಿಗಿನ ಭದ್ರತಾ ವಿಷಯಗಳಲ್ಲಿ ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ನಾಲ್ಕು ತಿಂಗಳುಗಳಲ್ಲಿ, ಟ್ರಂಪ್ ಪದೇ ಪದೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ವ್ಯಾಪಾರವನ್ನು ಮಾತುಕತೆಯ ಮೂಲಕ ತಪ್ಪಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆಗಾಗ್ಗೆ ಎರಡೂ ರಾಷ್ಟ್ರಗಳು ಪರಮಾಣು ಯುದ್ಧದ ಎಷ್ಟು ಹತ್ತಿರದಲ್ಲಿದ್ದವು, ಎಷ್ಟು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಮತ್ತು ಎಷ್ಟು ಯುದ್ಧಗಳನ್ನು ತಡೆದಿದ್ದಾರೆ ಎಂಬುದರ ಕುರಿತು ಅನಿಯಂತ್ರಿತ ಅಂಕಿಅಂಶಗಳನ್ನು ಉಲ್ಲೇಖಿಸುತ್ತಾರೆ.ಪಾಕಿಸ್ತಾನದೊಂದಿಗಿನ ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿದೆ ಎಂಬ ಟ್ರಂಪ್ ಹೇಳಿಕೆಯನ್ನು ಭಾರತ ಪದೇ ಪದೇ ನಿರಾಕರಿಸಿದೆ.
