ಡೆನ್ಮಾರ್ಕ್ ಸರ್ಕಾರವು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬುರ್ಖಾ ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ವಲಸಿಗರು ಡ್ಯಾನಿಶ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಇಲ್ಲವೇ ದೇಶ ತೊರೆಯಿರಿ ಎಂಬ ಸರ್ಕಾರದ ನಿಲುವು ಚರ್ಚೆಗೆ ಗ್ರಾಸವಾಗಿದೆ.
ಡೆನ್ಮಾರ್ಕ್: ಸಾರ್ವಜನಿಕ ಸ್ಥಳದಲ್ಲಿ ಬುರ್ಕಾ ಬ್ಯಾನ್ ಮಾಡುವ ಮೂಲಕ 2018ರಲ್ಲಿಯೇ ಪ್ರಪಂಚದೆಲ್ಲೆಡೆ ಭಾರಿ ಸುದ್ದಿ ಮಾಡಿದ್ದ ಡೆನ್ಮಾರ್ಕ್ ಈಗ ಮತ್ತೆ ಸುದ್ದಿಯಲ್ಲಿದೆ. ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಅಥವಾ ದೇಶ ತೊರೆಯಿರಿ ಎಂದು ಅದು ಹೇಳಿದೆ. ಡೆನ್ಮಾರ್ಕ್ ಸರ್ಕಾರವು ಈ ಹಿಂದೆ 2018 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ನಿಖಾಬ್‌ಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಜಾರಿಗೆ ತಂದಿತ್ತು.
ಆದರೆ ಧರ್ಮಧ ಸಂಕೇತವಾಗಿ ಮುಖ ಮುಚ್ಚಿಕೊಳ್ಳುವುದರ ವಿರುದ್ಧ ಕಠಿಣ ನಿಲುವು ಹೊಂದಿರುವ ಡೆನ್ಮಾರ್ಕ್ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಈಗ ಡ್ಯಾನಿಶ್ ಸರ್ಕಾರವು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಗೂ ಆ ನಿಷೇಧವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಬುರ್ಖಾ ನಿಷೇಧದ ಬಗ್ಗೆ ಡೆನ್ಮಾರ್ಕ್ ಪ್ರಧಾನಿ ಹೇಳಿದ್ದೇನು?
ಇನ್ನು ಈ ಬುರ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ಧರ್ಮಕ್ಕಿಂತ ಮೊದಲು ದೇಶದ ಪ್ರಜೆಗಳು ದೇಶದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವು ಜನರ ಮೊದಲ ಆದ್ಯತೆಯಾಗಿರಬೇಕು. ಡ್ಯಾನಿಶ್ ಸಂಸ್ಕೃತಿಗಳು ಸಂಪ್ರದಾಯಗಳೊಂದಿಗೆ ಸಂಘರ್ಷ ನಡೆಸುವ ಧಾರ್ಮಿಕ ಅಭಿವ್ಯಕ್ತಿಗಳು ಶಿಕ್ಷಣ ವ್ಯವಸ್ಥೆಯ ಭಾಗವಾಗಿರಬಾರದು,. ಡ್ಯಾನಿಶ್ ಸಾಂಸ್ಕೃತಿಕ ಮೌಲ್ಯಗಳಿಗೆ ಹೊಂದಿಕೊಳ್ಳಲು ಹೆಣಗಾಡುವ ವಲಸಿಗರು ದೇಶ ತೊರೆಯಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡೆನ್ಮಾರ್ಕ್ ಸರ್ಕಾರದ ಈ ಪ್ರಸ್ತಾಪವೂ ಈಗ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ. ಡೆನ್ಮಾರ್ಕ್ ಸರ್ಕಾರದ ಈ ಕ್ರಮವು ತಾರತಮ್ಯವಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವಾದ ಮಾಡಿವೆ. ವಿಶೇಷವಾಗಿ ಧಾರ್ಮಿಕ ಆಚರಣೆಯ ಭಾಗವಾಗಿ ಮುಖ ಮುಚ್ಚಿಕೊಳ್ಳುವ ಮುಸ್ಲಿಂ ಮಹಿಳೆಯರ ಕಡೆಗೆ ಇದೊಂದು ತಾರತಮ್ಯ ನೀತಿಯಾಗಿದೆ. ಡೆನ್ಮಾರ್ಕ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಹೊಸ ನೀತಿಯು ದೇಶದ ಏಕತೆ ಅಥವಾ ಸುರಕ್ಷತೆಯ ಬಗ್ಗೆ ಅಲ್ಲ, ಕೇವಲ ಒಂದು ನಿರ್ದಿಷ್ಟ ಗುಂಪನ್ನು ಪ್ರತ್ಯೇಕಿಸುವುದು ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದರ ಬಗ್ಗೆ ಎಂದು ಡೆನ್ಮಾರ್ಕ್ ಸರ್ಕಾರದ ನೀತಿಯನ್ನು ಕೆಲವರು ಟೀಕಿಸಿದ್ದಾರೆ.
ಮತ್ತೊಂದೆಡೆ ಸರ್ಕಾರದ ಈ ಪ್ರಸ್ತಾವನೆಯನ್ನು ಬೆಂಬಲಿಸುವವರು, ಸರ್ಕಾರವು ಜಾತ್ಯತೀತ ಶಿಕ್ಷಣವನ್ನು ರಕ್ಷಿಸಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳುತ್ತಿದ್ದಾರೆ. ಶಾಲೆಯಲ್ಲಿಯೂ ಮಕ್ಕಳು ಮುಖ ಮುಚ್ಚಿಕೊಳ್ಳುವುದು ಸಂವಹನಕ್ಕೆ ಅಡ್ಡಿಯಾಗಬಹುದು ಮತ್ತು ಶಾಲೆಗಳು ಮುಕ್ತತೆ ಮತ್ತು ಸಮಾನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಸ್ಥಳಗಳಾಗಿರಬೇಕು ಎಂದು ಅವರು ವಾದಿಸುತ್ತಾರೆ.
ಈ ವಿಚಾರವಾಗಿ ಈಗ ಡೆನ್ಮಾರ್ಕ್ ಒಳಗೆ ಮತ್ತು ದೇಶದ ಹೊರಗೂ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಇದನ್ನು ಹೊಸಬರನ್ನು ಸಂಯೋಜಿಸುವ ಮತ್ತು ರಾಷ್ಟ್ರೀಯ ಗುರುತನ್ನು ಬಲಪಡಿಸುವ ಕಡೆಗೆ ದೃಢವಾದ ಹೆಜ್ಜೆ ಎಂದು ನೋಡಿದರೆ, ಇತರರು ಇದು ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತಷ್ಟು ಹೊರಗಿಡುವ ಕ್ರಮವೆಂದು ದೂರುತ್ತಾರೆ.
