AIMIM Owaisi Slammed by Congress for Modi Prophet Muhammad Comparison ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, 'ಐ ಲವ್ ಮೋದಿ' ಎನ್ನಬಹುದು ಆದರೆ 'ಐ ಲವ್ ಮೊಹಮದ್' ಎನ್ನಲಾಗದು ಎಂದು ಹೇಳಿಕೆ ನೀಡಿದ್ದರು.
ನವದೆಹಲಿ (ಅ.4): ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಶುಕ್ರವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಐ ಲವ್ ಮೋದಿ ಅಂದರೆ ತೊಂದರೆ ಇಲ್ಲ, ಐ ಲವ್ ಮೊಹಮದ್ ಅಂದರೆ ಪ್ರಶ್ನೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, ಪ್ರಧಾನಿ ಮೋದಿಯೊಂದಿಗೆ ಪ್ರವಾದಿ ಮೊಹಮದ್ ಪೈಗಂಬರ್ ಅವರನ್ನು ಹೋಲಿಸಲು ಹೇಗೆ ಸಾಧ್ಯ ಎಂದು ಕಿಡಿಕಾರಿದ್ದಾರೆ.
"ಓವೈಸಿ ಪ್ರವಾದಿ ಮೊಹಮದ್ ಅವರನ್ನು ಮೋದಿಯೊಂದಿಗೆ ಹೇಗೆ ಹೋಲಿಸುತ್ತಾರೆ? ಇದಕ್ಕಾಗಿ ಅವರು ಕ್ಷಮೆಯಾಚಿಸಬೇಕು" ಎಂದು ಅಲ್ವಿ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರವಾದಿ ಮೊಹಮದ್ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ನಿರ್ಬಂಧಗಳನ್ನು ಓವೈಸಿ ಪ್ರಶ್ನಿಸಿದ್ದು, ಈ ದೇಶದಲ್ಲಿ 'ಐ ಲವ್ ಮೋದಿ' ಎಂದು ಹೇಳಲು ಅನುಮತಿ ಇದೆ, ಆದರೆ 'ಐ ಲವ್ ಮೊಹಮದ್' ಎನ್ನುವುದಕ್ಕೆ ನಿರ್ಬಂಧವಿದೆ ಎಂದಿದ್ದರು.
ಐ ಲವ್ ಮೊಹಮದ್ ವಿವಾದ
"ನಾವು ನಮ್ಮ ಮಸೀದಿಗೆ ಹೋಗಲು ಬಯಸಿದರೂ, ಅವರು ಅದನ್ನು ಕಸಿದುಕೊಳ್ಳಲು ಬಯಸುತ್ತಾರೆ. ಐ ಲವ್ ಮೋದಿ ಎಂದು ಒಬ್ಬರು ಹೇಳಬಹುದು, ಆದರೆ ಐ ಲವ್ ಮೊಹಮದ್ ಎಂದು ಹೇಳಲು ಸಾಧ್ಯವಿಲ್ಲ. ನೀವು ಎಲ್ಲಿಗೆ ಇಳಿಯಲು ಯೋಜಿಸುತ್ತಿದ್ದೀರಿ" ಎಂದು ಅವರು ಗುರುವಾರ ನಡೆದ ಸಭೆಯಲ್ಲಿ ಹೇಳಿದರು. ಸೆಪ್ಟೆಂಬರ್ 4 ರಂದು ನಡೆದ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ "ಐ ಲವ್ ಮೊಹಮದ್ ' ಎಂದು ಬರೆದ ಬಿಲ್‌ಬೋರ್ಡ್‌ಗಳನ್ನು ಹಾಕಿದ್ದ ಕಾರಣಕ್ಕೆ ಕಾನ್ಪುರದ ಪೊಲೀಸರು 24 ಜನರ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ವಿವಾದ ಭುಗಿಲೆದ್ದಿದೆ.
