ವರದಕ್ಷಿಣೆ ಕಿರುಕುಳಕ್ಕೆ ದುರಂತ ಅಂತ್ಯಕಂಡ ನೋಯ್ಡಾದ ನಿಕ್ಕಿ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಕಾರು, ಬೈಕ್, ಚಿನ್ನ, ನಗದು ಕೊಟ್ಟರೂ ದಾಹ ತೀರಲಿಲ್ಲ. ಮತ್ತೆ 36 ಲಕ್ಷ ರೂ ತರುವಂತೆ ಕಿರುಕುಳ ನೀಡಿ ಸಹೋದರಿಯನ್ನು ಸಾಯಿಸಿದ್ದಾರೆ ಎಂದು ನಿಕ್ಕಿ ಸಹೋದರಿ ಕಣ್ಣೀರಿಟ್ಟಿದ್ದಾರೆ.

ನೋಯ್ಡಾ (ಆ.25) ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ದುರಂತ ಅಂತ್ಯ ಕಂಡ ನೋಯ್ಡಾಗ ನಿಕ್ಕಿ ಅನುಭವಿಸಿದ ನೋವುಗಳು ಒಂದೊಂದಾಗಿ ಹೊರಬರುತ್ತಿದೆ. ಗಂಡ, ಆತನ ಸೋಹದರು, ತಂದೆ ತಾಯಿ, ನಿಕ್ಕಿಯನ್ನು ಇನ್ನಿಲ್ಲದೆ ಕಿರುಕುಳ ನೀಡಿದ್ದಾರೆ. ದುಬಾರಿ ಖರ್ಚು ಮಾಡಿ ಮದುವೆ ಮಾಡಲಾಗಿದೆ. ಇಷ್ಟೇ ಅಲ್ಲ ಮದುವೆ ವೇಳೆ ಮಹೀಂದ್ರ ಸ್ಕಾರ್ಪಿಯೋ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್, ಚಿನ್ನ, ನಗದು ಹಣ ಸೇರಿದಂತೆ ಎಲ್ಲವನ್ನೂ ವರದಕ್ಷಿಣೆ ರೂಪದಲ್ಲಿ ಕೊಡಲಾಗಿದೆ. ಆದರೆ ಮತ್ತೆ 36 ಲಕ್ಷ ರೂಪಾಯಿ ವರದಕ್ಷಿಣೆ ರೂಪದಲ್ಲಿ ತರುವಂತೆ ಮತ್ತೆ ಕಿರುಕುಳ ನೀಡಲು ಆರಂಭಿಸಿದ ಕಾರಣ ಸಹೋದರಿ ನಿಕ್ಕಿ ದುರಂತ ಅಂತ್ಯ ಕಂಡಿದ್ದಾಳೆ ಎಂದು ನಿಕ್ಕಿ ಸಹೋದರಿ ಕಾಂಚನ್ ಕಣ್ಣೀರಿಟ್ಟಿದ್ದಾರೆ.

ನಿಕ್ಕಿ ಹಾಗೂ ಕಾಂಚನ್ ಇಬ್ಬರನ್ನೂ ಒಂದೇ ಮನೆಗೆ ಅಂದರೆ ವಿಪಿನ್ ಹಾಗೂ ರೋಹಿತ್ ಸಹೋದರರಿಗೆ ಮದುವೆ ಮಾಡಿ ಕೊಡಲಾಗಿತ್ತು. ಇದೀಗ ನಿಕ್ಕಿಗೆ ಕಿರುಕುಳ ನೀಡಿ ಆಕೆಯ ದುರಂತ ಅಂತ್ಯ ಕಾರಣವಾದ ವಿಪಿನ್ ಅರೆಸ್ಟ್ ಆಗಿದ್ದರೆ, ರೋಹಿತ್ ತಲೆಮರೆಸಿಕೊಂಡಿದ್ದಾನೆ. ನಿಕ್ಕಿ ಜೊತೆಗೆ ಸಹೋದರಿ ಕಾಂಚನ್ ಬದುಕು ಅತಂತ್ರವಾಗಿದೆ. ಡಿಸೆಂಬರ್ 10, 2016ಕ್ಕೆ ನಮ್ಮ ತಂದೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ಪ್ರತಿ ಹಬ್ಬ, ಪ್ರತಿ ವಿಶೇಷ ದಿನಕ್ಕೆ ತಂದೆ ದುಬಾರಿ ಉಡುಗೊರೆಯನ್ನು ಕೊಟ್ಟಿದ್ದಾರೆ. ಆದರೂ ಅವರ ದಾಹ ತೀರಲಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದ ನಿಕ್ಕಿ ಅಂತ್ಯಕಂಡಿದ್ದಾಳೆ ಎಂದು ಕಾಂಚನ್ ಹೇಳಿದ್ದಾರೆ.

ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಕಾಂಚನ್

ವಿಪಿನ್ ಹಾಗೂ ರೋಹಿತ್ ಹಲವು ದಿನ ರಾತ್ರಿ ಬೇರೆ ತಂಗುತ್ತಿದ್ದರು. ಬೇರೆ ಮಹಿಳೆಯರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಮನಗೆ ತಡವಾಗಿದೆ ಎಂದು ಕರೆ ಮಾಡಿದರೆ ಅದನ್ನೇ ದೊಡ್ಡ ವಿಷಯ ಮಾಡಿ ಹಲ್ಲೆ ಮಾಡುತ್ತಿದ್ದರು. ಬೇರೆ ಮಹಿಳೆಯರ ಜೊತೆ ಕಾಲ ಕಳೆಯುತ್ತಿರುವುದು ನಮ್ಮ ಗಮನಕ್ಕೆ ಬಂದು ನಾವು ಪ್ರಶ್ನಿಸಿದಾಗ, ನಮ್ಮ ಮೇಲೆ ಹಲ್ಲೆ ಮಾಡಿದ್ದರು. ನಾನು ಹಾಗೂ ನಿಕ್ಕಿ ಪ್ರತಿ ದಿನ ರಾತ್ರಿ ಕಣ್ಣೀರು ಹಾಕುತ್ತಲೇ ಮಲಗಿದ್ದೇವೆ. ನಮಗೆ ಏನು ಉಳಿದಿದೆ. ನಮ್ಮ ತಂದೆ ಎನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡಿದ್ದಾರೆ. ಆದರೆ ನನ್ನ ತಂಗಿ ಇನ್ನಿಲ್ಲ. ನಿಕ್ಕಿ ನನಗಿಂತ 2 ರಿಂದ 3 ವರ್ಷ ಚಿಕ್ಕವಳು ಎಂದು ಕಾಂಚನ್ ಕಣ್ಣೀರಿಟ್ಟಿದ್ದಾರೆ.

ಬೆಂಕಿಯಲ್ಲಿ ನರಳಾಡುತ್ತಿದ್ದ ನನ್ನ ತಂಗಿಯನ್ನು ಕಾಪಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನನ್ನ ತಂಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲೇ ದಿಟ್ಟ ನಿರ್ಧಾರ ತೆಗೆದುಕೊಂಡು ಹೊರಬಂದಿದ್ದರೆ ನಮ್ಮ ಜೀವನ ಸಾಗುತ್ತಿತ್ತು. ಆದರೆ ತಂಗಿ ಮಗ ತಾಯಿ ಇಲ್ಲದೆ ನರಳಾಡುತ್ತಿದ್ದಾನೆ. ನಮ್ಮ ತಂದೆ ಇಷ್ಟೆಲ್ಲಾ ಮಾಡಿ ಈ ವಯಸ್ಸಿನ ನೋವು ಅನುಭವಿಸುವಂತಾಯಿತು ಎಂದು ಕಾಂಚನ್ ಕಣ್ಣೀರಿಟ್ಟಿದ್ದಾಳೆ.

ತಾಯಿ ಹತ್ಯೆ ಕಣ್ಣಾರೆ ಕಂಡು ಆಘಾತಕ್ಕೊಳಗಾಗಿರುವ 6 ವರ್ಷದ ಮಗ

ನಿಕ್ಕಿ ಮಗನಿಗೆ 6 ವರ್ಷ. ಆತನ ಎದುರೆ ತಾಯಿ ನಿಕ್ಕಿಗೆ ತಂದೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಬೆಂಕಿಯಲ್ಲಿ ನರಳಾಡುತ್ತಾ ಬೆಂದು ಹೋದ ತಾಯಿಯನ್ನು, ಘಟನೆ ನೋಡಿ ಮಗ ಆಘಾತಕ್ಕೊಳಗಾಗಿದ್ದಾನೆ. ನನ್ನ ತಾಯಿ ಮೇಲೆ ಪಪ್ಪಾ ಹೊಡೆದರು, ಬೆಂಕಿ ಹಚ್ಚಿದರು ಎಂದು ಕಣ್ಣೀರಿಡುತ್ತಿದ್ದಾನೆ.