ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆ ಆಗಸ್ಟ್ 24 ಅಥವಾ 25 ರಂದು ಜಾರಿಯಾಗುವ ಸಾಧ್ಯತೆಯಿದೆ. ಡಾ. ಕೆ.ಎ. ಪಾಲ್ ಪ್ರಕರಣದ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಸೋಮವಾರಕ್ಕೆ ನಿಗದಿಯಾಗಿದೆ.

ದೆಹಲಿ (ಆ.22): ಯೆಮೆನ್ ದೇಶದ ಪ್ರಜೆಯನ್ನು ಕೊಲೆ ಮಾಡಿ ಮರಣದಂಡನೆಗೆ ಗುರಿಯಾಗಿರುವ ಮಲೆಯಾಳಿ ನರ್ಸ್ ಕೇರಳದ ನಿಮಿಷಾ ಪ್ರಿಯಾ ಅವರಿಗೆ ಇದೇ ಆಗಸ್ಟ್ ತಿಂಗಳ 24 ಅಥವಾ 25ನೇ ತಾರೀಖಿನಿಂದು ಮರಣದಂಡನೆ ಜಾರಿಯಾಗಲಿದೆ. ಆದ್ದರಿಂದ ಪ್ರಕರಣದ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ಇವಾಂಜಲಿಸ್ಟ್ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕ ಡಾ. ಕೆ.ಎ. ಪಾಲ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಸುವಾರ್ತಾಬೋಧಕ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್‌ನ ಸಂಸ್ಥಾಪಕ ಡಾ. ಕೆ.ಎ. ಪಾಲ್ ಅವರು, ಇದೇ ತಿಂಗಳ 24 ಅಥವಾ 25 ರಂದು ನಿಮಿಷಾ ಪ್ರಿಯಾ ಅವರ ಮರಣದಂಡನೆ ಜಾರಿಯಾಗಲಿದೆ. ಹೀಗಾಗಿ, ಮೂರು ದಿನಗಳ ಕಾಲ ಈ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಿಮಿಷಾ ಪ್ರಿಯಾ ಹೇಳಿಕೆಯ ಮೇರೆಗೆ ತಾವು ಕೋರ್ಟ್ ಮೊರೆ ಹೋಗಿರುವುದಾಗಿ ಪಾಲ್ ತಿಳಿಸಿದ್ದಾರೆ. ಅರ್ಜಿಯ ಕುರಿತು ಅಟಾರ್ನಿ ಜನರಲ್‌ಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.

ನಿಮಿಷಾ ಪ್ರಿಯಾ ಪ್ರಕರಣದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಕೆ.ಎ. ಪಾಲ್, ತಮ್ಮ ಪ್ರಯತ್ನದಿಂದ ನಿಮಿಷಾ ಪ್ರಿಯಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದರು. ಮುಂದುವರೆದು, ನಿಮಿಷಾ ಪ್ರಿಯಾ ಬಿಡುಗಡೆಗೆ ಹಣ ಸಂಗ್ರಹಿಸಲು ಪಾಲ್ ಮುಂದಾಗಿದ್ದರು. ಇದಕ್ಕಾಗಿ ವಿದೇಶಾಂಗ ಸಚಿವಾಲಯದ ಹೆಸರಿನಲ್ಲಿ ಬ್ಯಾಂಕ್ ಖಾತೆ ಹಂಚಿಕೊಂಡು 8.3 ಕೋಟಿ ರೂ. ಅಗತ್ಯವಿದೆ ಎಂದು ಸಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡು ಪ್ರಚಾರವನ್ನೂ ಮಾಡಿದ್ದರು. ಆದರೆ, ಈ ಪ್ರಚಾರ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ವಿದೇಶಾಂಗ ಸಚಿವಾಲಯ ಕೂಡ ಈ ಹೇಳಿಕೆಯನ್ನು ಅಲ್ಲಗಳೆದಿತ್ತು. ಆದರೆ, ಈ ವೇಳೆ ಪಾಲ್ ಅವರಿಗೆ ವಿದೇಶಾಂಗ ಸಚಿವಾಲಯದ ಪೇ ಅಂಡ್ ಅಕೌಂಟ್ಸ್ ಅಧಿಕಾರಿಯ ಖಾತೆ ವಿವರಗಳು ಪಾಲ್‌ಗೆ ಹೇಗೆ ಸಿಕ್ಕವು ಎಂಬ ಪ್ರಶ್ನೆ ಎದ್ದಿತ್ತು.

ಇದಾದ ನಂತರ ಪಾಲ್ ಅವರು, ಕೆಲವು ವಾರಗಳ ಹಿಂದೆ ನಿಮಿಷಾ ಪ್ರಿಯಾ ಅವರ ಪತಿ ಟೋಮಿ ಮತ್ತು ಮಗಳು ಓಮನ್‌ನಲ್ಲಿ ಪಾಲ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ತೆಗೆದ ವಿಡಿಯೋಗಳನ್ನು ಪಾಲ್ ಪೋಸ್ಟ್ ಮಾಡಿದ್ದರು. ಇದರ ಮಧ್ಯೆ ಸೌದಿ ಅರೇಬಿಯಾದಲ್ಲಿರುವ ಮಲೆಯಾಳಿ ಉದ್ಯಮಿಯೊಬ್ಬರು ನಿಮಿಷಾ ಪ್ರಿಯಾ ಬಿಡುಗಡೆಗೆ 5.5 ಮಿಲಿಯನ್ ಡಾಲರ್ ದಂಡ ನಿಗದಿಯಾಗಿದೆ ಎಂದು ಹೇಳಿದ್ದರು.

ಪ್ರಕರಣದ ಹಿನ್ನೆಲೆಯೇನು?

ನರ್ಸ್ ಆಗಿ ಕೆಲಸ ಮಾಡುವುದಕ್ಕೆಂದು ಯೆಮೆನ್ ದೇಶಕ್ಕೆ ತೆರಳಿದ್ದ ಕೇರಳ ಮೂಲದ ಮಲೆಯಾಳಿ ನರ್ಸ್ ನಿಮಿಷಾ ಪ್ರಿಯಾ, ಕುಟುಂಬ ಸಮೇತವಾಗಿ ಅಲ್ಲಿ ವಾಸವಾಗಿದ್ದಳು. ಆದರೆ, ಜಾಗತಿಕ ಮಟ್ಟದ ಬೆಳವಣಿಗೆಯಿಂದ ಗಂಡ ಮತ್ತು ಮಗಳು ವಾಪಸ್ ಬಂದರೂ, ನರ್ಸ್ ನಿಮಿಷಾ ಪ್ರಿಯಾ ಮಾತ್ರ ವಾಪಸಾಗಲು ಸಾಧ್ಯವಾಗಿರಲಿಲ್ಲ. ಆದರೆ, ಅಲ್ಲಿಯೇ ಒಂದು ಕ್ಲಿನಿಕ್ ಆರಂಭಿಸಲು ಯೆಮೆನ್ ದೇಶದ ಪ್ರಜೆ ತಲಾಲ್‌ನ ಸಹಕಾರ ಪಡೆದು ಉದ್ಯಮ ಪಾಲುದಾರನನ್ನಾಗಿ ಮಾಡಿಕೊಂಡಿದ್ದಳು. ಇದಾದ ನಂತರ ಯೆಮೆನ್ ಪ್ರಜೆ ಆಕೆಯೊಂದಿಗೆ ಭಾರತಕ್ಕೂ ಬಂದು ಹೋಗಿದ್ದನು. ಉದ್ಯಮದಲ್ಲಿ ಸ್ವ-ಹಿಡಿತ ಸಾಧಿಸಲೆತ್ನಿಸಿದ ಸಹೋದ್ಯಮಿ ತಲಾಲ್‌ನ ಕಿರುಕುಳ ಸಹಿಸಲಾಗದೇ, ಆತನನ್ನು ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಳು.

ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಯೆಮೆನ್ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈಗಾಗಲೇ ಕಳೆದ 2 ತಿಂಗಳ ಹಿಂದೆಯೇ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ನಿಗದಿಯಾಗಿತತು. ಭಾರತ ಸರ್ಕಾರ, ಭಾರತದ ನ್ಯಾಯಾಲಯ ಹಾಗೂ ಮೌಲ್ವಿಗಳ ನಿರಂತರ ಪ್ರಯತ್ನದಿಂದಾಗಿ ಮರಣದಂಡನೆ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿತ್ತು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೊಲೆಗೀಡಾದ ತಲಾಲ್ ಸಹೋದರ ನಮಗೆ ಯಾವುದೇ ಧನ ಪರಿಹಾರ ಬೇಡ. ನಮ್ಮ ಸಹೋದರನನ್ನು ಕೊಲೆಗೈದ ನಿಮಿಷಾ ಪ್ರಿಯಾಳಿಗೆ ಮರಣದಂಡನೆ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಅಲ್ಲಿನ ಕಾನೂನಿನಂತೆ ಸಂತ್ರಸ್ತ ಕುಟುಂಬಸ್ಥರ ಒತ್ತಾಸೆಯಂತೆ ಮರಣದಂಡನೆ ಕೊಡಲು ದಿನಾಂಕ ನಿಗದಿ ಮಾಡಿದೆ.