ಮುಂಬೈನಿಂದ ಬೈಕ್ ಮೂಲಕ 17 ದೇಶ ಸುತ್ತಿ 24,000 ಕಿಲೋಮೀಟರ್ ರೈಡ್ ಮಾಡಿದ ಭಾರತೀಯ ಲಂಡನ್ ತಲುಪುತ್ತಿದ್ದಂತೆ ಕಂಗಾಲಾಗಿದ್ದಾನೆ. ಕಾರಣ ಈತನ ಬೈಕ್ ಕಾಣದಾಗಿದೆ.

ಲಂಡನ್ (ಸೆ.02) ಬೈಕ್ ಮೂಲಕ ಹಲವು ದೇಶ ಸುತ್ತುವುದು ಹೊಸದೇನಲ್ಲ. ಲಡಾಖ್ ಟ್ರಿಪ್, ನೇಪಾಳ ಟ್ರಿಪ್ ಸೇರಿದಂತೆ ಹಲವು ದೇಶಗಳಿಗೆ ಬೈಕ್ ರೈಡ್ ತೆರಳುವವರ ಸಂಖ್ಯೆ ಹೆಚ್ಚಿದೆ. ಹೀಗೆ ಮುಂಬೈ ಮೂಲದ ರೈಡರ್ ಯೋಗೇಶ್ ಅಲೆಕಾರಿ ತನ್ನ ಕೆಟಿಎಂ ಬೈಕ್ ಮೂಲಕ ವಿದೇಶಗಳ ಬೈಕ್ ರೈಡ್ ಆರಂಭಿಸಿದ್ದಾರೆ. ಬರೋಬ್ಬರಿ 17 ದೇಶಗಳನ್ನು ಸುತ್ತಾಡಿದ್ದಾನೆ. 24,000 ಕಿಲೋಮೀಟರ್ ರೈಡ್ ಮಾಡಿದ ಈ ಯೋಗೇಶ್ ಲಂಡನ್ ತಲುಪಿದ್ದಾನೆ. ಬೈಕ್ ಪಾರ್ಕ್ ಮಾಡಿ ತಿಂಡಿ ತಿಂದು ವಾಪಾಸ್ಸಾದ ವೇಳೆ ಬೈಕ್ ಕಾಣೆಯಾದ ಘಟನೆ ನಡೆದಿದೆ. ಇದೀಗ ಲಂಡನ್‌ನಲ್ಲಿ ಭಾರತೀಯ ಬೈಕ್ ರೈಡರ್ ಕಂಗಾಲಾಗಿದ್ದಾನೆ. ನೆರವಿಗೆ ಅಂಗಲಾಚಿದ್ದಾನೆ.

ರೋಮಿಂಗ್ ವೀಲ್ಸ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯವಾಗಿರುವ 34 ವರ್ಷದ ಯೋಗೇಶ್ ಹಲವು ದೇಶಗಳಿಗೆ, ಭಾರತದ ಮೂಲೆ ಮೂಲೆಗಳಿಗೆ ಬೈಕ್‌ನಲ್ಲೇ ತೆರಳಿ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದ. ಈ ಬಾರಿ ಅತೀ ದೊಡ್ಡಪ್ಲಾನ್ ಮೂಲಕ ವಿದೇಶಗಳ ಟ್ರಿಪ್ ಮಾಡಿದ್ದ. ಒಂದೊಂದೆ ದೇಶದ ಮೂಲಕ ಸಾಗಿದ ಯೋಗೇಶ್ ಲಂಡನ್ ಬಳಿಕ ಆಫ್ರಿಕಾ ದೇಶಗಳಿಗೆ ಭೇಟಿ ನೀಡುವ ಪ್ಲಾನ್ ಮಾಡಿಕೊಂಡಿದ್ದ. ಆದರೆ ಲಂಡನ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ರೈಡ್ ಅಂತ್ಯಗೊಂಡಿದೆ.

ಆಗಸ್ಟ್ 28 ರಂದು ನಾಟಿಂಗ್‌ಹ್ಯಾಮ್ ತಲುಪಿದ ಯೋಗೇಶ್, ಗೆಳೆಯನ ಭೇಟಿಯಾಗಲು ತರಳಿದ್ದಾರೆ. ಈ ವೇಳೆ ವೊಲಾಟನ್ ಪಾರ್ಕ್‌ನಲ್ಲಿ ಬೈಕ್ ಪಾರ್ಕ್ ಮಾಡಿ ತಿಂಡಿಗೆ ತೆರಳಿದ ಯೋಗೇಶ್ ತಿಂಡಿ ಸವಿದು ಮರಳಿದ್ದಾನೆ. ಆದರೆ ಮರಳಿ ಬಂದಾಗ ಈತನ ಬೈಕ್, ಅದರಲ್ಲಿದ್ದ ಪಾಸ್‌ಪೋರ್ಟ್, ನಗದು ಹಣ, ದಾಖಲೆ, ಕ್ಯಾಮೆರಾ ಸೇರಿದಂತೆ ಎಲ್ಲವೂ ನಷ್ಟವಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾರ್ಕಿಂಗ್ ಸ್ಥಳದ ಸಿಸಿಟಿವಿಯಲ್ಲಿ ಬೈಕ್ ಕಳ್ಳತನ ಮಾಡುವುದು ಪತ್ತೆಯಾಗಿದೆ. ಆದರೆ ಕಳ್ಳರುು ಪತ್ತೆಯಾಗಿಲ್ಲ. ಬೈಕ್ ನನ್ನ ಸರ್ವಸ್ವವಾಗಿತ್ತು. ಆದರೆ ಇದೀಗ ಎಲ್ಲವೂ ನಷ್ಟವಾಗಿದೆ. ನಾನು ಇಲ್ಲಿಂದ ಮರಳಲು ಪಾಸ್‌ಪೋರ್ಟ್ ಕೂಡ ಇಲ್ಲ. ಎಲ್ಲವೂ ಕಳ್ಳತನವಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ. ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಿಡಿಯೋ ಮೂಲಕ ಸಹಾಯಕ್ಕೆ ಬೇಡಿಕೊಂಡಿದ್ದಾನೆ.

View post on Instagram