ಪಾಕಿಸ್ತಾನದ 14 ಪಾಕ್, 400 ಕೆಜಿ ಆರ್‌ಡಿಎಕ್ಸ್ ಸಮೇತ ಮುಂಬೈ ಗಣೇಶೋತ್ಸವದಲ್ಲಿ ಬಾಂಬ್ ಹಾಕುವುದಕ್ಕೆ ನಗರ ಪ್ರವೇಶ ಮಾಡಿದ್ದಾರೆ. 34 ಹೂಮನ್ ಬಾಂಬ್ ಸ್ಪೋಟ ಆಗಲಿದ್ದು, ಗಣೇಶ ವಿಸರ್ಜನೆ ವೇಳೆ 1 ಕೋಟಿ ಜನರು ಸಾವಾಗುತ್ತೆಂದು ಪುಂಗಿದ್ದ ಜ್ಯೋತಿಷಿ. ಈಗ ಆತನ ಸ್ಥಿತಿ ಏನಾಗಿದೆ ನೋಡಿ!
ಮುಂಬೈ (ಸೆ.06): ಮುಂಬೈ ಗಣೇಶೋತ್ಸವದ ವೇಳೆ ಸ್ಫೋಟ ನಡೆಸಿ ಒಂದು ಕೋಟಿ ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬೆದರಿಕೆ ಸಂದೇಶ ಕಳುಹಿಸಿದವರನ್ನು ಮತ್ತು ಆತನಿಗೆ ಸಿಮ್ ಕಾರ್ಡ್ ನೀಡಿದವರನ್ನು ಬಂಧಿಸಲಾಗಿದೆ. ಪಾಟ್ನಾ ಮೂಲದ ಅಶ್ವಿನಿಕುಮಾರ್ ಸುಪ್ರ (51) ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಯ್ಡಾದಿಂದ ಆತನನ್ನು ಬಂಧಿಸಲಾಗಿದೆ.
ತನ್ನ ಹಳೆಯ ಸ್ನೇಹಿತ ಫಿರೋಜ್‌ನನ್ನು ಪೊಲೀಸ್ ಕೇಸಿನಲ್ಲಿ ಸಿಲುಕಿಸಲು ಜ್ಯೋತಿಷಿ ಅಶ್ವಿನಿಕುಮಾರ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಫಿರೋಜ್ ನೀಡಿದ ದೂರಿನ ಮೇರೆಗೆ ಅಶ್ವಿನಿಕುಮಾರ್ 3 ತಿಂಗಳು ಜೈಲುವಾಸ ಅನುಭವಿಸಿದ್ದನು. ಹೀಗಾಗಿ, ಫಿರೋಜ್‌ನನ್ನು ಭಯೋತ್ಪಾದಕ ಪ್ರಕರಣದಲ್ಲಿ ಸಿಲುಕಿಸಲು ಅಶ್ವಿನಿಕುಮಾರ್ ಯೋಜನೆ ರೂಪಿಸಿದ್ದನು. ಫಿರೋಜ್ ಹೆಸರನ್ನು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಿ, ಮುಂಬೈನಲ್ಲಿ ಬಾಂಬ್ ಸ್ಪೋಟ ಮಾಡುವುದಾಗಿ ಬೆದರಿಕೆ ಹಾಕಿ ಪೊಲೀಸರಿಗೆ ಸಂದೇಶ ಕಳಿಸಿದ್ದನು.
ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಹೆಲ್ಪ್‌ಲೈನ್‌ಗೆ ಗುರುವಾರ ಸಂದೇಶ ಬಂದಿತ್ತು. 14 ಪಾಕಿಸ್ತಾನಿ ಭಯೋತ್ಪಾದಕರು 400 ಕೆಜಿ ಆರ್‌ಡಿಎಕ್ಸ್‌ನೊಂದಿಗೆ ಮುಂಬೈ ಮಹಾನಗರವನ್ನು ಪ್ರವೇಶಿಸಿದ್ದಾರೆ. ಅವರು ಒಟ್ಟು 34 ಮಾನವ ಬಾಂಬ್‌ಗಳನ್ನು ಸ್ಫೋಟ ಮಾಡಲಿದ್ದಾರೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. 10 ದಿನಗಳ ಗಣೇಶ ಚತುರ್ಥಿ ಮುಗಿಯುವ ಹೊತ್ತಿಗೆ ಪೊಲೀಸರಿಗೆ ಈ ಸಂದೇಶ ಬಂದಿತ್ತು. ಬಳಿಕ ಪೊಲೀಸರು ತನಿಖೆ ಆರಂಭಿಸಿದರು. ಪಾಟ್ನಾ ಮೂಲದ ಅಶ್ವಿನಿಕುಮಾರ್ ಸುರೇಶ್ ಕುಮಾರ್ ಸುಪ್ರ ಈ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅಶ್ವಿನಿಕುಮಾರ್‌ನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ನೋಯ್ಡಾ ಸೆಕ್ಟರ್ 79 ರಿಂದ ಬಂಧಿಸಿದ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅಶ್ವಿನಿಕುಮಾರ್ ಜ್ಯೋತಿಷಿ ಮತ್ತು ವ್ಯಾಪಾರಿ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಆತನಿಗೆ ಸಿಮ್ ಕಾರ್ಡ್ ನೀಡಿದ ಆರೋಪಿಯನ್ನು ಸೋರಾಖ್‌ನಿಂದ ಬಂಧಿಸಲಾಗಿದೆ. ಸಂಚಾರ ಪೊಲೀಸರಿಗೆ ಈ ಹಿಂದೆಯೂ ಇಂತಹ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಜನರು ಗಣೇಶ ಹಬ್ಬದ ಆಚರಣೆ ವೇಳೆ ಭಯಪಡುವ ಅಗತ್ಯವಿಲ್ಲ. ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಸುಳ್ಳು ವದಂತಿಗಳನ್ನು ನಂಬದೆ, ಸಂಶಯಾಸ್ಪದ ಏನಾದರೂ ಕಂಡುಬಂದರೆ ವರದಿ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಬೆದರಿಕೆ ಸಂದೇಶದಲ್ಲಿ 'ಲಷ್ಕರ್-ಎ-ಜಿಹಾದಿ' ಎಂಬ ಹೆಸರನ್ನು ಉಲ್ಲೇಖಿಸಲಾಗಿತ್ತು. ಬೆದರಿಕೆ ಸಂದೇಶದ ಬಗ್ಗೆ ಭಯೋತ್ಪಾದನಾ ನಿಗ್ರಹ ದಳಕ್ಕೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಣೇಶೋತ್ಸವದ ಮೂರ್ತಿ ವಿಸರ್ಜನೆ ವೇಳೆ 21,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ.
