ಒಂದೆಡೆ ರಾಹುಲ್ ಗಾಂಧಿ ಮತಕಳ್ಳತನ ನಡೆದಿದೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಮಧ್ಯಪ್ರದೇಶದಲ್ಲಿ ನಾಯಕರು ಸಮೂಹಿಕ ರಾಜೀನಾಮೆ ನೀಡಿದ್ದಾರೆ.
ಇಂದೋರ್ (ಆ.17) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಮತಕಳ್ಳತನ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗದ ಅಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿದೆ. ಇದರ ನಡುವೆ ಮಧ್ಯ ಪ್ರದೇಶ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನ 71 ಜಿಲ್ಲಾಧ್ಯಕ್ಷರ ನೇಮಕ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದೆ. ಇಷ್ಟೇ ಅಲ್ಲ ಹಲವು ನಾಯಕರು ರಾಜೀನಾಮೆ ನೀಡಿದ್ದಾರೆ.
ದಿಗ್ವಿಜಯ್ ಸಿಂಗ್ ಪುತ್ರನ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ಮಧ್ಯ ಪ್ರದೇಶದಲ್ಲಿ ಸುದೀರ್ಘ ದಿನಗಳಿಂದ ಬಾಕಿ ಉಳಿದಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಅಂತಿಮಗೊಳ್ಳುತ್ತಿದ್ದಂತೆ ಕೋಲಾಹಲವೇ ನಡೆದಿದೆ. ಭೋಪಾಲ್, ಇಂದೋರ್, ಉಜ್ಜೈನ್, ಬುರ್ಹನ್‌ಪುರ್ ಸೇರದಂತೆ ಹಲೆವೆಡೆ ನಾಯಕರು ರಾಜೀನಾಮೆ ನೀಡಿದ್ದಾರೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಜೈವರ್ಧನ್ ಸಿಂಗ್ ನಾಯಕತ್ವ, ಪ್ರಾಬಲ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಜೈವರ್ಧನ್ ಸಿಂಗ್ ಅವರನ್ನೂ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಜೈವರ್ಧನ್ ಸಿಂಗ್‌ಗೆ ರಾಜ್ಯದ ಪ್ರಮುಖ ಜವಾಬ್ದಾರಿ ನೀಡಬೇಕು, ಅವರನ್ನು ಜಿಲ್ಲಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೋರಾಟ ನಡೆಯುತ್ತಿದೆ.
ಭೋಪಾಲ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪ್ರವೀಣ್ ಸಕ್ಸೇನಾ ಅವರನ್ನು ಮರು ಆಯ್ಕೆ ಮಾಡಲಾಗಿದೆ. ಇದು ಜಿಲ್ಲಾಧ್ಯಕ್ಷ ಅಕಾಂಕ್ಷಿಯಾಗಿದ್ದ ಮೋನು ಸಕ್ಸೇನಾ ಅಸಮಾಧಾನಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ. ಹೊಸಬರ ಆಯ್ಕೆ, ಬೇರೆಯವರಿಗೆ ಅವಕಾಶ ನೀಡಲು ಸೂಚಿಸಿದ್ದಾರೆ. ಆದರೆ ಭೋಪಾಲ್‌ನಲ್ಲಿ ಮರು ಆಯ್ಕೆಯಾಗಿದೆ ಎಂದು ಆರೋಪಿಸಿ ಮೋನು ಸಕ್ಸೇನಾ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರು, ಮಾಜಿ ಸಚಿವರಿಗೆ ಸ್ಥಾನ
71 ಜಿಲ್ಲಾಧ್ಯಕ್ಷರ ಪೈಕಿ 21 ಜಿಲ್ಲಾಧ್ಯಕ್ಷರು ಮರು ಆಯ್ಕೆಯಾಗಿದ್ದಾರೆ. ಇನ್ನು 37 ಸ್ಥಾನಗಳು ಮೀಸಲು ಸ್ಥಾನಗಳಾಗಿತ್ತು. 6 ಹಾಲಿ ಶಾಸಕರು, 8 ಮಾಜಿ ಶಾಸಕರು ಹಾಗೂ ಮೂವರು ಮಾಜಿ ಸಚವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಮೂಲಕ ಸ್ಥಳೀಯ ನಾಯಕರ ಬೆಳವಣಿಗೆಗೆ ಅಡ್ಡಿ ಮಾಡಲಾಗಿದೆ. ಇಷ್ಟೇ ಅಲ್ಲ ಹೊಸ ನಾಯಕರಿಗೆ ಅವಕಾಶ ನೀಡಲು ಕಾಂಗ್ರೆಸ್ ನಿರಾಕರಿಸಿದೆ ಎಂದು ಆರೋಪ ಕೇಳಿಬಂದಿದೆ. ಹೀಗಾಗಿ ಹಲವು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಕಾಂಕ್ಷಿಗಳು ರಾಜೀನಾಮೆ ನೀಡುತ್ತಿದ್ದಾರೆ. ಹಲವು ಬೆಂಬಲಿಗರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.
ಓಂಕರ್ ಸಿಂಗ್ ಮರ್ಕಾಮ್, ಜೈವರ್ಧನ್ ಸಿಂಗ್, ನಿಲಯ್ ದಾ, ಪ್ರಿಯಾವ್ರತ್ ಸಿಂಗ್ ಸೇರಿದಂತೆ ಕೆಲ ಪ್ರಮುಖ ನಾಯಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಸ್ಥಳೀಯ ಜಿಲ್ಲಾಧ್ಯಕ್ಷ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಶಾಸಕರು, ಮಾಜಿ ಶಾಸಕರು, ಮಂತ್ರಿಗಳಾಗಿರುವ ನಾಯಕರನ್ನು ಜಿಲ್ಲೆಗೆ ತರಲಾಗುತ್ತಿದೆ. ಇದರಿಂದ ಜಿಲ್ಲೆಯ ಸ್ಥಳೀಯ ನಾಯಕರಿಗೆ ಅವಕಾಶವೇ ಇಲ್ಲದಾಗಿದೆ ಎಂದು ಆರೋಪ ಕೇಳಿಬಂದಿದೆ.
