ಒಡಿಶಾದ ಭುವನೇಶ್ವರದಲ್ಲಿ ಥಾರ್ ಗಾಡಿ ಡಿಕ್ಕಿ ಹೊಡೆದು ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲೂ ಇದೇ ರೀತಿಯ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರೋಪಿಯಿಂದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.
ಭುವನೇಶ್ವರ್: ಥಾರ್ ಗಾಡಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಮ್ಮ ಮಗಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆದಿದೆ. ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳ ಮೇಲೆ ಥಾರ್ ಗಾಡಿ ಹರಿದಿತ್ತು. ಪರಿಣಾಮ 8 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಮ್ಮ ಹಾಗೂ ಪುಟ್ಟ ಮಗ ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಯಿಯೂ ಮೃತಪಟ್ಟಿದ್ದಾರೆ. ಇವರ ಪುಟ್ಟ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಭುವನೇಶ್ವರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ವಾರ ಈ ಘಟನೆ ನಡೆದಿದೆ. ಬಿಳಿ ಬಣ್ಣದ ಥಾರ್ ಗಾಡಿ ಕಪ್ಪು ಬಣ್ಣದ ಸ್ಕಾರ್ಪಿಯೋ ಗಾಡಿಯನ್ನು ಹಿಂದಿಕ್ಕುವ ಭರದಲ್ಲಿ ರೇಸ್‌ಗಿಳಿದಾಗ ಥಾರ್ ಗಾಡಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಮ್ಮ ಮಕ್ಕಳ ಮೇಲೆ ಹರಿದಿದೆ. ಈ ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ರೇಬತಿ ರೌಲ್ ಹಾಗೂ ಅವರ 8 ವರ್ಷದ ಮಗಳು ರೇಷ್ಮಾ ಎಂದು ಗುರುತಿಸಲಾಗಿದೆ.
ಸ್ಕಾರ್ಪಿಯೋ ಜೊತೆ ರೇಸ್‌ಗಿಳಿದಾಗ ನಡೆದ ದುರಂತ
ಈ ವಾಹನವೂ ಖುರ್ದಾ ಪ್ರದೇಶದ ಉದ್ಯಮಿಯೋರ್ವನಿಗೆ ಸೇರಿದ್ದಾಗಿದ್ದು, ಈ ವಾಹನವನ್ನು ಘಟನೆಗೂ ಮೊದಲು ಉದ್ಯಮಿಯ ಪುತ್ರ ಚಲಾಯಿಸುತ್ತಿದ್ದ ಎಂಬ ಮಾಹಿತಿ ಇದ್ದು, ಘಟನೆ ಬಳಿಕ ಆತ ಪರಾರಿಯಾಗಿದ್ದಾನೆ. ಆದರೆ ಅಪಘಾತ ನಡೆದ ಸಮಯದಲ್ಲಿ ಯಾರು ಡ್ರೈವಿಂಗ್ ಸೀಟ್‌ನಲ್ಲಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗೆ ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಘಟನೆಯ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆಯಲ್ಲಿ ರೇಸ್ ಮಾಡಿದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಇಬ್ಬರ ಬಲಿ ಪಡೆದ ಥಾರ್ ಗಾಡಿಯಲ್ಲಿ ಕೋಕೇನ್, ಗಾಂಜಾ ಪತ್ತೆ
ಹಾಗೆಯೇ ದೆಹಲಿಯಲ್ಲಿ ನಿನ್ನೆ ಥಾರ್ ಗಾಡಿಯೊಂದು ವೇಗವಾಗಿ ಬಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗಳಿದ ಪೊಲೀಸರು ಆರೋಪಿ 26 ವರ್ಷದ ಆಶಿಶ್ ಬಚ್ಚಾಸ್ ಎಂಬಾತನನ್ನು ಬಂಧಿಸಿದ್ದಾರೆ. ಈ ವಾಹನವನ್ನು ತಪಾಸಣೆ ನಡೆಸಿದಾಗ ಕಾರಿನೊಳಗೆ ಕೊಕೇನ್, ಎಲ್‌ಎಸ್‌ಡಿ ಮತ್ತು ಇತರ ಮಾದಕ ದ್ರವ್ಯಗಳು ಪತ್ತೆಯಾಗಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ನಿನ್ನೆ ಈ ದುರಂತ ಸಂಭವಿಸಿತ್ತು.
ಆರೋಪಿ ಅಶೀಶ್ ಪೂರ್ವ ದೆಹಲಿಯ ಶಕರ್ಪುರ ನಿವಾಸಿಯಾಗಿದ್ದು, ಆತನನ್ನುಸ್ಥಳದಲ್ಲೇ ಬಂಧಿಸಲಾಗಿದೆ. ಆತ ಮಾದಕ ವ್ಯಸನಿಯಾಗಿದ್ದು, ಅಪಘಾತ ಸಂಭವಿಸಿದಾಗ ಆತ ಕುಡಿದು ವಾಹನ ಚಲಾಯಿಸುತ್ತಿದ್ದನೆಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ನೋಂದಣಿಯ ಈ ಕಾರಿನಲ್ಲಿ ಕೊಕೇನ್ (0.30 ಗ್ರಾಂ), ಎಲ್‌ಎಸ್‌ಡಿ (2.6 ಗ್ರಾಂ), ಎಂಡಿ (23.47 ಗ್ರಾಂ), ಗಾಂಜಾ (21.26 ಗ್ರಾಂ), ಚರಸ್ (4.17 ಗ್ರಾಂ), ತಂಬಾಕು (15.49 ಗ್ರಾಂ), 25,000 ರೂ. ನಗದು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತದಲ್ಲಿ ಮೃತರಾದ ಸುಜೇಶ್ ಕ್ಷೇತ್ರಿ ಸಿಕ್ಕಿಂ ನಿವಾಸಿಯಾಗಿದ್ದಾನೆ ಮತ್ತೊಬ್ಬ ಗುರುತು ಪತ್ತೆಯಾಗಿಲ್ಲ, ಅಪಘಾತ ನಂತರ ಇಬ್ಬರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆತರಲಾಗಿತ್ತು. ಆದರೆ ಸುಜೇಶ್ ದಾರಿಮಧ್ಯೆಯೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಗಂಭೀರ ಗಾಯಗಳಿಂದಾಗಿ ಕೆಲ ಸಮಯದ ನಂತರ ತೀರಿಕೊಂಡ ಒಟ್ಟಿನಲ್ಲಿ ಥಾರ್ ಗಾಡಿ ಚಾಲಕರ ಅವಾಂತರಕ್ಕೆ ಒಟ್ಟು 4 ಜೀವ ಬಲಿಯಾಗಿದೆ.
ಜಮ್ಮುವಿನಲ್ಲೂ ನಡೆದಿತ್ತು ಥಾರ್ ಸವಾರನ ಅವಾಂತರ
ಥಾರ್ ಗಾಡಿಯಿಂದ ಅವಾಂತರಗಳಾಗುತ್ತಿರುವುದು ಇದೇ ಮೊದಲಲ್ಲ, ಇದು ಥಾರ್ ಗಾಡಿಯ ಅವಾಂತರವೋ ಅಥವಾ ಥಾರ್ ವಾಹನವನ್ನು ಹೊಂದಿರುವ ಮಾಲೀಕರ ಅವಾಂತರವೂ ತಿಳಿಯುತ್ತಿಲ್ಲ, ಕೆಲ ದಿನಗಳ ಹಿಂದೆ ಥಾರ್ ಗಾಡಿಯನ್ನು ಚಲಾಯಿಸುತ್ತಿದ್ದ ಯುವಕನೋರ್ವ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದ, ಸ್ಕೂಟರ್ ಸವಾರ ಬಿದ್ದ ಜಾಗದಿಂದ ಎದ್ದು ನಿಲ್ಲುತ್ತಿದ್ದಂತೆ ಮತ್ತೆ ರಿವರ್ಸ್ ಬಂದು ಅವರ ಮೇಲೆ ಕಾರು ಚಲಾಯಿಸಿ ಎಸ್ಕೇಪ್ ಆಗಿದ್ದಂತಹ ಘಟನೆ ಜಮ್ಮು ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಇದರ ವೀಡಿಯೋ ಸಿಸಿಟಿವಿಯಲ್ಲಿ ವೈರಲ್ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
