ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಅಫ್ಘಾನ್ ಬಾಲಕ, ಬದುಕುಳಿದಿದ್ದೇ ಪವಾಡ, ಕಾಬೂಲ್‌ನಿಂದ ದೆಹಲಿಗೆ 94 ನಿಮಿಷಗಳ ಪ್ರಯಾಣ ಮಾಡಿದ್ದಾನೆ. ವೇಗ, ಗಾಳಿ, ಹವಾಮಾನ ಸೇರಿದಂತೆ ಅತ್ಯಂತ್ಯ ಪ್ರತಿಕೂಲ ಸ್ಥಿತಿಯಲ್ಲಿ 13 ವರ್ಷದ ಬಾಲಕ ಬದುಕುಳಿದಿದ್ದೇ ಹಲವರ ಅಚ್ಚರಿಗೆ ಕಾರಣವಾಗಿದೆ.

ನವದೆಹಲಿ (ಸೆ.22) ವಿಮಾನದ ರೆಕ್ಕೆ ಮೇಲೆ ಸೇರಿದಂತೆ ವಿಮಾನದ ಹೊರಭಾಗದಲ್ಲಿ ಕುಳಿತು ಪ್ರಯಾಣ ಮಾಡಲು ಅಸಾಧ್ಯ. ಆಪ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವೇಳೆ ಹಲವರು ಅಮೆರಿಕ ಯುದ್ಧ ವಿಮಾನದ ರಕ್ಕೆ ಮೇಲೆ ಸಿಕ್ಕ ಸಿಕ್ಕ ಕಡೆ ಕುಳಿತಿದ್ದರು. ಆದರೆ ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ಎಲ್ಲರೂ ನೆಲಕ್ಕಪ್ಪಳಿಸಿದ್ದರು. ಆದರೆ ಇದೀಗ ಪವಾಡವೊಂದು ನಡೆದಿದೆ. ಆಫ್ಘಾನಿಸ್ತಾನದ 13 ವರ್ಷದ ಬಾಲಕ ವಿಮಾನದ ಲ್ಯಾಡಿಂಗ್ ಗೇರ್ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಘಟನೆ ನಡೆದಿದೆ. 94 ನಿಮಿಷಗಳ ಪ್ರಯಾಣದಲ್ಲಿ ಬಾಲಕ ಬದುಕುಳಿದಿದ್ದೇ ಪವಾಡವಾಗಿದೆ.

ದೆಹಲಿಯಲ್ಲಿ ಬಾಲಕ ವಶಕ್ಕೆ

ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಬಾಲಕ ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದಿದ್ದಾರೆ. ಅಪ್ಘಾನಿಸ್ತಾನ ಕಾಮ್ ಏರ್ ವಿಮಾನ RQ4401ದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8.46ಕ್ಕ ಕಾಬೂಲ್‌ನಿಂದ ಹೊರಟ ವಿಮಾನ, ಬೆಳಗ್ಗೆ 10.20ಕ್ಕೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಪೈಜಾಮ ತೊಟ್ಟಿದ್ದ ಬಾಲಕ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತಿರುವುದನ್ನು ಸಿಬ್ಬಂದಿಗಳು ಗಮನಿಸಿದ್ದಾರೆ. ಟಿ3 ಟ್ಯಾಕ್ಸಿವೇ ಸಿಬ್ಬಂದಿ ಬಾಲಕನ ಗಮನಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಕ್ಷಣವೇ ಬಾಲಕನ ವಶಕ್ಕೆ ಪಡೆಯಲಾಗಿದೆ.

ಇರಾನ್‌ಗೆ ತೆರಳಲು ಪ್ಲಾನ್ ಮಾಡಿದ್ದ ಬಾಲಕ

ಆಫ್ಘಾನಿಸ್ತಾನದಿಂದ ಇರಾನ್‌ಗೆ ತೆರಳಲು ಬಾಲಕ ಪ್ಲಾನ್ ಮಾಡಿದ್ದ. ಇದಕ್ಕಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಡುವೆ ನಿಂತು ಯಾರಿಗೂ ಕಾಣದಂತೆ ಭದ್ರತಾ ತಪಾಸಣೆ ಕಣ್ತಪ್ಪಿಸಿ ಪ್ರವೇಶ ಮಾಡಿದ್ದ. ಎಲ್ಲರ ಕಣ್ತಪ್ಪಿಸಿ ತೆರಳಿ ಬಾಲಕ ಎದುರಿಗಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತಿದ್ದಾನೆ. ಆದರೆ ಬಾಲಕ ಅಡಗಿ ಕುಳಿತ ವಿಮಾನ ದೆಹಲಿಗೆ ಹೊರಟ್ಟಿದ್ದ ವಿಮಾನವಾಗಿತ್ತು. ಬಾಲಕನ ವಶಕ್ಕೆ ಪೊಲೀಸರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅಪ್ರಾಪ್ತ ಬಾಲಕನಾಗಿರುವ ಕಾರಣ ಕಾನೂನು ಪ್ರಕ್ರಿಯೆಗಳಿಂದ ಕೆಲ ವಿನಾಯಿತಿ ನೀಡಲಾಗುತ್ತದೆ.

30 ಸಾವಿರ ಅಡಿ ಎತ್ತರ, ಹವಾಮಾನದಿಂದ ಬದುಕವ ಸಾಧ್ಯತೆಗಳೇ ಇಲ್ಲ

ಏವಿಯೇಶನ್ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಪ್ರಕಾರ, ವಿಮಾನದ ಹೊರಭಾಗದಲ್ಲಿ ಕುಳಿತು, ಅಥವಾ ನಿಂತು ಪ್ರಯಾಣ ಅಸಾಧ್ಯ. ಬದುಕುವ ಸಾಧ್ಯತೆಗಳೇ ಇಲ್ಲ. ಅತೀರೇಖದ ಹವಾಮಾನ, 30,000 ಸಾವಿರ ಅಡಿ ಎತ್ತರದಲ್ಲಿ ಈ ಬಾಲಕ ಬದುಕುಳಿದಿದ್ದೇ ಪವಾಡ ಎಂದಿದ್ದಾರೆ. ಈತ ಬದುಕುಳಿದಿದ್ದು ಹೇಗೆ ಎಂದು ಕೆಲ ತಜ್ಞರು ಊಹಿಸಿದ್ದಾರೆ. ಬಾಲಕ ವಿಮಾನದ ಹಿಂಭಾಗದ ಚಕ್ರದ ಬಳಿ ಅಡಗಿ ಕುಳಿತಿದ್ದಾನೆ. ಗಟ್ಟಿಯಾಗಿ ಹಿಡಿದು ಅಡಗಿ ಕುಳಿತಿರುವ ಸಾಧ್ಯತೆ ಇದೆ. ವಿಮಾನ ಟೇಕ್ ಆಫ್ ಆದ ಬಳಿಕ ಚಕ್ರಗಳು ಒಳಭಾಗಕ್ಕೆ ತಳ್ಳಲ್ಪಡುತ್ತದೆ. ಬಳಿಕ ಲ್ಯಾಂಡಿಂಗ್ ಗೇರ್ ಬಳಿಯ ಬಾಗಿಲು ಮುಚ್ಚಿಕೊಳ್ಳಲಿದೆ. ಈ ವೇಳೆ ಬಾಲಕ ಹೇಗೋ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಯಾವುದೇ ಗಾಯವಾಗದೇ ಸೇರಿಕೊಂಡಿದ್ದಾನೆ. ಬಾಗಿಲು ಮುಚ್ಚಿದ ಕಾರಣ ಇಲ್ಲಿಯ ವಾತಾವರಣ ಕ್ಯಾಬಿನ್ ವಾತಾವರಣಕ್ಕೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಆದರೆ ಚಕ್ರಗಳು ಮಡಚಿಕೊಳ್ಳುವಾಗ ಗಾಯವಾಗು ಸಾಧ್ಯತೆ ಹೆಚ್ಚು.ಇಲ್ಲೂ ಕೂಡ ಬಾಲಕ ಬಚಾವ್ ಆಗಿದ್ದಾನೆ ಎಂದಿದ್ದಾರೆ.