ಮನೆ ಕ್ಲೀನ್ ಮಾಡುವಾಗ ಸಿಕ್ತು ಅಜ್ಜನ 2.5 ಕೋಟಿ ರೂ ಷೇರು, ಮೊಮ್ಮಗನ ಕನಸಿಗೆ ಕೊಳ್ಳಿ ಇಟ್ಟ ಕುಟುಂಬ, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಮೊಮ್ಮಗ ಹಾಗೂ ಕುಟುಂಬ ಇನ್ನೇನು ಸಮಸ್ಯೆ ದೂರವಾಯಿತು ಅನ್ನೋವಷ್ಟರಲ್ಲೇ ಇಡೀ ಕುಟುಂಬ ಕನಸಿಗೆ ಕೊಳ್ಳಿ ಇಟ್ಟಿದೆ.
ಅಹಮ್ಮದಾಬಾದ್ (ಅ.31) ಅಜ್ಜ ನಿಧನರಾಗಿ ಹಲವು ತಿಂಗಳು ಉರುಳಿದೆ. ತಂದೆ ಹಾಗೂ ಅಜ್ಜನ ಸಂಬಂಧ ಉತ್ತಮವಾಗಿರಲಿಲ್ಲ. ಆದರೆ ಮೊಮ್ಮಗ ಅಜ್ಜನ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಕೆಲಸದ ನಿಮಿತ್ತ ಮೊಮ್ಮಗ ದೂರದ ಊರು ಸೇರಿಕೊಂಡರೆ, ಅಜ್ಜ ಏಕಾಂಗಿಯಾಗಿ ಮನೆಯಲ್ಲಿದ್ದರು. ಇದರ ನಡುವೆ ಅಜ್ಜ ನಿಧನರಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಮಗ, ಮೊಮ್ಮಗ, ಕುಟುಂಬಸ್ಥರು ಸೇರಿ ಅಂತ್ಯಸಂಸ್ಕಾರ ಮಾಡಿದ್ದಾರೆ. ದಿನಗಳ ಉರುಳಿದೆ. ದೂರದ ನಗರದಿಂದ ಮರಳಿದ ಮೊಮ್ಮಗ, ಅಜ್ಜನ ಪಾಳು ಬಿದ್ದ ಮನೆ ಕ್ಲೀನ್ ಮಾಡಲು ಮುಂದಾಗಿದ್ದಾನೆ. ಹೀಗೆ ಶುಚಿಗೊಳಿಸುವಾಗ ಕಸದ ಬುಟ್ಟಿಯಲ್ಲಿ ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ ಷೇರುಗಳ ಪತ್ರಗಳು ಸಿಕ್ಕಿದೆ. ಮೊಮ್ಮಗನ ಖುಷಿಗೆ ಪಾರವೇ ಇರಲಿಲ್ಲ. ತನ್ನ ಎಲ್ಲಾ ಕಷ್ಟಗಳು ದೂರವಾಗಲಿದೆ. ಆರ್ಥಿಕ ಸಮಸ್ಯೆ ಬಗೆ ಹರಿಯಲಿದೆ ಎಂದು ಕನಸು ಕಂಡಿದ್ದ. ಆದರೆ ಈ ಮಾಹಿತಿ ತಿಳಿಯುತ್ತಿದ್ದಂತೆ ಇಡೀ ಕುಟುಂಬಸ್ಥರು ನಮ್ಮ ಅಜ್ಜ ನಮ್ಮ ಪಾಲು ಎಂದು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇದೀಗ ಈ ಷೇರುಗಳು ಹರಿದು ಹಂಚಿಹೋಗುವ ಆತಂಕ ಮೊಮ್ಮನಿಗೆ ಶುರುವಾಗಿದೆ.
ಸಾವ್‌ಜಿ ಪಟೇಲ್ ಖರೀದಿಸಿದ್ದ 2.5 ಕೋಟಿ ಮೌಲ್ಯದ ಷೇರು
ಸಾವ್‌ಜಿ ದಿಯು ನಗರದಲ್ಲಿ ಹೊಟೆಲ್ ವೈಟರ್ ಆಗಿ ಕೆಲಸ ಮಾಡಿ ಬಳಿಕ ಬಂಗಲೆ ಒಂದರ ಮನೆಕೆಲಸ ಮಾಡುತ್ತಾ ಜೀವನ ಸಾಗಿಸಿದ್ದಾರೆ. ಹೀಗೆ ಸಾವ್‌ಜಿ ಪುತ್ರನಿಗೆ ಮದುವೆ ಮಾಡಿಸಿದ್ದರು. ತಮ್ಮ ಉಳಿತಾಯ ಹಣವನ್ನು ನೀಡಿ ಉನಾದಲ್ಲಿ ಜಮೀನು ಖರೀದಿಸಲು ನೆರವಾಗಿದ್ದರು. ಸಾವ್‌ಜಿ ಮಗನಿಗೆ ಸಾಕಷ್ಟ ಜಮೀನು ಖರೀದಿಸಲು ಇದೇ ಸಾವ್‌ಜಿ ನೆರವಾಗಿದ್ದರು. ಆದರೆ ಸಾವ್‌ಜಿ ಬಳಿ ಇದ್ದ ಉಳಿತಾಯ ಹಣ ಖಾಲಿಯಾಗುತ್ತಿದ್ದಂತೆ ಮಗ ರೈತನಾಗಿ ದೂರನಾಗಿದ್ದ. ಇತ್ತ ರೈತನ ಮಗ ಅಂದರೆ ಸಾವ್‌ಜಿ ಮೊಮ್ಮಗ ಶಾಲೆ, ಕಾಲೇಜು ಮುಗಿಸಿದ್ದ. ಸಾವ್‌ಜಿಗೆ ಮೊಮ್ಮಗನ ಮೇಲೆ ಪ್ರೀತಿ. ಇತ್ತ ಮೊಮ್ಮಗನಿಗೂ ಅಷ್ಟೇ ಪ್ರೀತಿ. ತನ್ನ ತಂದೆ ಅಜ್ಜನ ನೋಡಲು ಹೋಗದಿದ್ದರೂ, ಮೊಮ್ಮಗ ಮಾತ್ರ ತೆರಳಿ ಮಾತನಾಡಿಸುತ್ತಿದ್ದ. ಇದರ ನಡುವೆ ಸಾವ್‌ಜಿ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ.
ತಿಂಗಳು ಕಳೆದರೂ ಸಾವ್‌ಜಿ ಮನೆಯತ್ತ ತಿರುಗಿ ನೋಡದ ಕುಟುಂಬ
ಸಾವ್‌ಜಿ ಪಟೇಲ್ ನಿಧನದ ಬಳಿಕ ಮನೆ ಪಾಳು ಬಿದ್ದಿತ್ತು. ಇತ್ತ ಸಾವ್‌ಜಿ ಮೊಮ್ಮಗ ಕೆಲಸ ಮಾಡುತ್ತಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಇತ್ತ ಅಜ್ಜನ ಮನೆ ಶುಚಿಗೊಳಿಸಿ ಮನೆ ತಾನು ಬಳಕೆ ಮಾಡಲು ಮೊಮ್ಮಗ ನಿರ್ಧರಿಸಿದ್ದ. ತನ್ನ ತಂದೆಯಿಂದ ಆರ್ಥಿಕ ನೆರವು ಸಿಗಲಿಲ್ಲ. ಇಷ್ಟೇ ಅಲ್ಲ ತಂದೆ ಕೂಡ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಮನೆ ಶುಚಿಗೊಳಿಸುವಾಗ ಕಸದ ಬುಟ್ಟಿ, ಕೆಲ ಪೆಟ್ಟಿಗೆಯಲ್ಲಿ ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಪತ್ತೆಯಾಗಿದೆ.
ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಸಾವ್‌ಜಿ ಪಟೇಲ್ ಮೊಮ್ಮಗ ತನ್ನ ಎಲ್ಲಾ ಕಷ್ಟಗಳು ದೂರವಾಗಲಿದೆ ಎಂಬ ಖುಷಿಯಲ್ಲಿದ್ದ. ಆದರೆ ಈ ಷೇರುಗಳ ಮಾಹಿತಿ ಕುಟುಂಬಸ್ಥರಿಗೆ ಸಿಕ್ಕಿದೆ. ನನ್ನ ತಂದೆ, ನನ್ನ ಅಜ್ಜ ಎಂದು ಕುಟುಂಬಸ್ಥರು ಮುಂದೆ ಬಂದಿದ್ದಾರೆ. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಎಲ್ಲರೂ ತಮ್ಮ ತಮ್ಮ ಪಾಲು ಕೇಳಿದ್ದಾರೆ. ಬದುಕಿರುವಾಗ ಅಜ್ಜನ ನೋಡದ ಇವರಿಗೆ ಪಾಲೇಕೆ ಅನ್ನೋದು ಮೊಮ್ಮಗನ ವಾದ. ಇದೀಗ ನವೆಂಬರ್ 3 ರಂದು ಕೋರ್ಟ್ ಈ ಪ್ರಕರಣ ವಿಚಾರಣೆ ನಡೆಸಲಿದೆ. ಕೋರ್ಟ್ ಕೋಟ್ಯಾಧಿಪತಿ ಯಾರು ಅನ್ನೋದು ನಿರ್ಧರಿಸಲಿದೆ.
