Iಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ನಾಗಾರ್ಜುನ್ ಗೌಡ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಖಂಡ್ವಾ ಜಿಲ್ಲೆ ಪಂಚಾಯತ್ ಸಿಇಒ ಆಗಿರುವ ನಾಗಾರ್ಜುನ್ ಗೌಡ ಅವರ ವಿರುದ್ಧ ಲಂಚ ಪಡೆದು ಸಂಸ್ಥೆಯೊಂದರ ಪರ ಕೆಲಸ ಮಾಡಿದ ಆರೋಪ ಕೇಳಿ ಬಂದಿದೆ.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಕಂಪನಿ ಮೇಲಿನ ದಂಡ ಇಳಿಕೆ ಮಾಡಿದ ಆರೋಪ
ಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ನಾಗಾರ್ಜುನ್ ಗೌಡ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಧ್ಯಪ್ರದೇಶ ಖಂಡ್ವಾ ಜಿಲ್ಲೆ ಪಂಚಾಯತ್ ಸಿಇಒ ಆಗಿರುವ ನಾಗಾರ್ಜುನ್ ಗೌಡ ಅವರ ವಿರುದ್ಧ ಲಂಚ ಪಡೆದು ಸಂಸ್ಥೆಯೊಂದರ ಪರ ಕೆಲಸ ಮಾಡಿದ ಆರೋಪ ಕೇಳಿ ಬಂದಿದೆ. ಹರ್ದಾದಲ್ಲಿ ಸಹಾಯಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿ ಪರವಹಿಸಿ ಕಂಪನಿಗೆ ಹಾಕಿದ್ದ 51 ಕೋಟಿ ಮೊತ್ತದ ದಂಡವನ್ನು 4 ಸಾವಿರ ರೂಪಾಯಿಗೆ ಇಳಿಸಿದ ಆರೋಪ ಕೇಳಿ ಬಂದಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಆನಂದ್ ಜಾಟ್ ಎಂಬುವವರು ಈ ಆರೋಪ ಮಾಡಿದ್ದಾರೆ. ಈ ಆರೋಪ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದು, ಅನೇಕರು ಅಧಿಕಾರಿಯ ನಿರ್ಧಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಐಎಎಸ್ ಅಧಿಕಾರಿ ನಾಗಾರ್ಜುನ್ ಅವರು ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾರೆ.
ಕನ್ನಡಿಗ ಐಎಎಸ್ ಅಧಿಕಾರಿ ವಿರುದ್ಧ ಆರ್‌ಟಿಐ ಕಾರ್ಯಕರ್ತನ ಆರೋಪ
ಇಂದೋರ್-ಬೇತುಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡ ಪಾತ್ ಇಂಡಿಯಾ ಕಂಪನಿಗೆ ಸಂಬಂಧಿಸಿದ ವಿವಾದ ಇದಾಗಿದೆ. ಕಂಪನಿಯು ಅಂಧೇರಿಖೇಡಾದಲ್ಲಿ ಅನುಮತಿಯಿಲ್ಲದೆ 3.11 ಲಕ್ಷ ಘನ ಮೀಟರ್ ಮುರ್ರಮ್ ಮಣ್ಣನ್ನು ಅಗೆದಿದೆ ಎಂದು ಆರೋಪಿಸಲಾಗಿದೆ. ಈ ಅನಧಿಕೃತ ಗಣಿಗಾರಿಕೆ ಚಟುವಟಿಕೆಗಾಗಿ ಮಾಜಿ ಎಡಿಎಂ ಪ್ರವೀಣ್ ಫುಲ್ಪಗರೆ ಅವರು ಈ ಪಾಥ್ ಇಂಡಿಯಾ ಕಂಪನಿಗೆ 51,67,64,502 ರೂ.ಗಳ ದಂಡದ ನೋಟಿಸ್ ನೀಡಿದ್ದರು.
ಆದರೆ ಪ್ರವೀಣ್ ಪುಲ್ಪಗೆರೆ ಅವರು ರಾಜೀನಾಮೆ ವರ್ಗಾವಣೆಯಾಗುತ್ತಿದ್ದಂತೆ ಈ ಎಡಿಎಂ ಜಾಗಕ್ಕೆ ನಾಗಾರ್ಜುನ್ ಬಿ ಗೌಡ ಅವರು ಬಂದಿದ್ದರು. ಆದರೆ ಪಾತ್ ಇಂಡಿಯಾ ಕಂಪನಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳು ಮತ್ತು ಪುರಾವೆಗಳು ಇಲ್ಲದ ಕಾರಣ, ದಂಡವನ್ನು ತೀವ್ರವಾಗಿ ಕಡಿಮೆ ಮಾಡಲಾಯಿತು. ಕೇವಲ 2,688 ಘನ ಮೀಟರ್ ಅಗೆದ ಮಣ್ಣಿನ ಆಧಾರದ ಮೇಲೆ ದಂಡವನ್ನು ಮರು ಲೆಕ್ಕಾಚಾರ ಮಾಡಲಾಯಿತು, ಇದರ ಪರಿಣಾಮವಾಗಿ 4,032 ರೂ.ಗಳ ಸಾಂಕೇತಿಕ ದಂಡ ವಿಧಿಸಲಾಯಿತು.
ಆದರೆ ಈಗ ಆರ್‌ಟಿಐ ಕಾರ್ಯಕರ್ತ ಆನಂದ್ ಜಾಟ್ ಅವರು ಆರ್‌ಟಿಐ ದಾಖಲೆಗಳ ಪ್ರತಿಗಳನ್ನು ಬಿಡುಗಡೆ ಮಾಡಿ ಪ್ರಕರಣದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ಛಾಯಾಚಿತ್ರ ಅಥವಾ ವಿಡಿಯೋ ಪುರಾವೆಗಳ ಕೊರತೆಯನ್ನು ತೀರ್ಪು ಉಲ್ಲೇಖಿಸಿದ್ದರೂ, ಗ್ರಾಮಸ್ಥರ ಬಳಿ ಅಂತಹ ಪುರಾವೆಗಳಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಇತ್ಯರ್ಥಪಡಿಸಲು ಒಪ್ಪಂದ ಮಾಡಿಕೊಂಡಿರಬಹುದು ಎಂದು ಜಾಟ್ ಆನಂದ್ ಜಾಟ್ ದೂರಿದ್ದಾರೆ.
ಆರೋಪ ನಿರಾಕರಿಸಿದ ನಾಗಾರ್ಜುನ್ ಗೌಡ
ಆರೋಪಗಳಿಗೆ ಪ್ರತಿಕ್ರಿಯಿಸಿದ ನಾಗಾರ್ಜುನ್ ಗೌಡ, ಹಿಂದಿ ದಿನಪತ್ರಿಕೆ ನವಭಾರತ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ನ್ಯಾಯಾಲಯದಲ್ಲಿ ತಮ್ಮ ಮುಂದೆ ಹಾಜರುಪಡಿಸಿದ ದಾಖಲೆಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಿವಾದಿತ ಭೂಮಿಯಲ್ಲಿ ಅರ್ಧಕ್ಕಿಂತ ಹೆಚ್ಚು ಭೂಮಿಗೆ ಸರಿಯಾದ ಅನುಮತಿಗಳಿವೆ ಮತ್ತು ಕೆಲವು ಅನುಮತಿಗಳನ್ನು ಹತ್ತು ವರ್ಷಗಳ ಕಾಲ ಇನ್ನೊಬ್ಬ ವ್ಯಕ್ತಿಗೆ ನೀಡಲಾಗಿದೆ ಹಾಗೆಯೇ ತಹಶೀಲ್ದಾರ್ ನೀಡಿದ ವರದಿಯಲ್ಲಿ ಸರಿಯಾದ ಮಾಹಿತಿ ಇಲ್ಲ ಮತ್ತು ಗಣಿಗಾರಿಕೆಯಲ್ಲಿ ಕಂಪನಿಯ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸಲು ಪಂಚನಾಮ ವಿಫಲವಾಗಿದೆ. ಎಲ್ಲವನ್ನೂ ಕಾನೂನುಬದ್ಧವಾಗಿ ನಿರ್ವಹಿಸಲಾಗಿದೆ. ಹಾಗೂ ಎರಡು ವರ್ಷಗಳಲ್ಲಿ ಅವರ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
2019 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ನಾಗಾರ್ಜುನ್ ಬಿ ಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರಸಿದ್ಧ ಆಡಳಿತಾಧಿಕಾರಿ ಎಂದು ಹೆಸರು ಗಳಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ನಾಗಾರ್ಜುನ್ ಬಿ ಗೌಡ ಅವರು ಎಂಬಿಬಿಎಸ್ ಮಾಡಿರುವ ವೈದ್ಯರು ಆಗಿದ್ದಾರೆ.
ಇದನ್ನೂ ಓದಿ: ಅಪರಿಚಿತ ಯುವತಿಯ ಪ್ಲೈಯಿಂಗ್ ಕಿಸ್‌ಗೆ ಪುರುಷರ ರಿಯಾಕ್ಷನ್ ಹೇಗಿತ್ತು: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಮಳೆಯಿಂದ ರಕ್ಷಿಸಿಕೊಳ್ಳಲು ಮರ್ಲಿನ್ ಮನ್ರೋ ಸ್ಕರ್ಟ್ ಕೆಳಗೆ ಆಶ್ರಯ ಪಡೆದ ಜನ: ಫೋಟೋ ಭಾರಿ ವೈರಲ್
