ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತ್ರಿಸದಸ್ಯ ಸಮಿತಿ ರಚಿಸಿ, ತನಿಖೆಗೆ ಆದೇಶಿಸಿದ್ದಾರೆ.
ನವದೆಹಲಿ (ಆ.13): ಮನೆಯಲ್ಲಿ ಕಂತೆ ಕಂತೆ ನೋಟು ಸಿಕ್ಕ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ನ್ಯಾಯಾಧೀಶ ರಾಗಿದ್ದ ಯಶವಂತ್ ವರ್ಮಾ ಅವರ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಗೆ ಇದೀಗ ಅಧಿಕೃತ ಚಾಲನೆ ಸಿಕ್ಕಿದೆ. ಸಂಸದರ ಒತ್ತಾಯದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆಗೆ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ.ಅರವಿಂದ್ ಕುಮಾರ್ ಹಾಗೂ ಕರ್ನಾಟಕದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿ ಲೋಕಸಭಾ ಸೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.
ನ್ಯಾ.ವರ್ಮಾ ಅವರ ವಾಗ್ದಂಡನೆಗೆ 146 ಸಂಸದರ ಸಹಿಯನ್ನೊಳಗೊಂಡ ವಾಗಂಡನೆಯ ನಿರ್ಣಯ ಅಂಗೀಕರಿಸಿದ ಬಳಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಚಾರ್ಯ, ನ್ಯಾ| ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಹೀಂದ್ರ ಮೋಹನ್ ಶ್ರೀವಾಸ್ತವ ಅವರು ಈ ಸಮಿತಿಯಲ್ಲಿ ಇರಲಿದ್ದಾರೆ.

ಸಮಿತಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತನ್ನ ವರದಿ ಸಲ್ಲಿಸಲಿದೆ. ಅಲ್ಲಿಯವರೆಗೆ ನ್ಯಾ.ವರ್ಮಾ ವಿರುದ್ಧದ ವಾಗ್ದಂಡನೆ ಪ್ರಸ್ತಾಪ ತಡೆಹಿಡಿಯಲಾಗುವುದು ಎಂದು ಬಿರ್ಲಾ ಹೇಳಿದ್ದಾರೆ. ಬಹುಶಃ ಮುಂದಿನ ಅಧಿವೇಶನದ ವೇಳೆಗೆ ಸಮಿತಿ ವರದಿ ನೀಡುವ ನಿರೀಕ್ಷೆ ಇದೆ.
'ಸಂವಿಧಾನದ ಪರಿಚ್ಛೇದ 124, 217 ಮತ್ತು 218ರ ಪ್ರಕಾರ ಈ ವಿಚಾರಕ್ಕೆ ಸಂಬಂಧಿಸಿ ಸಂಸತ್ತು ಒಂದೇ ಧ್ವನಿಯಲ್ಲಿ ಮಾತನಾಡಬೇಕಿದೆ. ಹೀಗಾಗಿ ನ್ಯಾ. ವರ್ಮಾ ಅವರ ವಾಗ್ದಂಡನೆಯ ಪ್ರಸ್ತಾಪ ಸ್ವೀಕರಿಸಿದ್ದೇನೆ. ಈ ಸಂಬಂಧ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಸದ್ಯ ಅಲಹಾಬಾದ್ ಹೈಕೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವನ್ಯಾ.ವರ್ಮಾ ಅವರ ವಜಾ ಕೋರಿ ಬಿಜೆಪಿಯ ರವಿಶಂಕರ್ ಪ್ರಸಾದ್, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ 146 ಸಂಸದರ ಸಹಿಯನ್ನೊಳಗೊಂಡ ಪ್ರಸ್ತಾಪವನ್ನು ಜು.21ರಂದೇ ಸಲ್ಲಿಸಲಾಗಿದೆ.
ಮಾ.14ರಂದು ಸಿಕ್ಕಿದ್ದ ಕಂತೆ ಕಂತೆ ಹಣ: ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾಗ ನ್ಯಾ.ವರ್ಮಾ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ಮಾ.14ರಂದು ಬೆಂಕಿ ಬಿದ್ದಿದ್ದು, ಈ ವೇಳೆ ಅವರ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ 500 ರು. ಮೌಲ್ಯದ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು.
