Indian Man Anil Kumar Bolla Wins ₹240 Crore UAE Lottery Jackpot ಅಬುದಾಭಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಅನಿಲ್‌ ಕುಮಾರ್‌ ಬೊಲ್ಲಾ, ತಮ್ಮ ತಾಯಿಯ ಜನ್ಮದಿನದ ನಂಬರ್ ಬಳಸಿ ಖರೀದಿಸಿದ ಲಾಟರಿಯಲ್ಲಿ 240 ಕೋಟಿ ರೂಪಾಯಿ ಗೆದ್ದಿದ್ದಾರೆ. 

ಬೆಂಗಳೂರು (ಅ.28): ಭಾರತೀಯ ಮೂಲದ 29 ವರ್ಷದ ವ್ಯಕ್ತಿಗೆ ಅಮ್ಮ ದೊಡ್ಡ ಅದೃಷ್ಟವನ್ನೇ ತಂದಿದ್ದಾಳೆ. ಅಮ್ಮನ ಜನ್ಮದಿನದ ನಂಬರ್‌ನ ಲಾಟರಿ ಖರೀದಿ ಮಾಡಿದ್ದ ವ್ಯಕ್ತಿ ಬರೋಬ್ಬರಿ 240 ಕೋಟಿ ರೂಪಾಯಿ ಗೆಲುವು ಕಂಡಿದ್ದಾರೆ. ಅಬುದಾಭಿಯಲ್ಲಿ ನೆಲೆಸಿರುವ ಭಾರತೀಯ ಮೂಲದ 29 ವರ್ಷದ ವ್ಯಕ್ತಿ, ಯುಎಇ ಲಾಟರಿಯ ಮೊಟ್ಟಮೊದಲ 100 ಧೀರಾಮ್‌ ಮಿಲಿಯನ್‌ (ಅಂದಾಜು 240 ಕೋಟಿ ರೂಪಾಯಿ) ಜಾಕ್‌ಪಾಟ್‌ನಲ್ಲಿ ಗೆಲುವು ಕಂಡಿದ್ದಾರೆ. ವ್ಯಕ್ತಿಯನ್ನು ಆಂಧ್ರದ ಅನಿಲ್‌ ಕುಮಾರ್‌ ಬೊಲ್ಲಾ ಎಂದು ಗುರುತಿಸಲಾಗಿದೆ. ಅಕ್ಟೋಬರ್‌ 18 ರಂದು ನಡೆದ 23ನೇ ಲಕ್ಕಿ ಡೇ ಡ್ರಾದಲ್ಲಿ ಅನಿಲ್‌ ಕುಮಾರ್‌ ಈ ಬೃಹತ್‌ ಬುಹುಮಾನ ಜಯಿಸಿದ್ದಾರೆ.

ಯುಎಇ ಲಾಟರಿ ಅನಿಲ್‌ ಕುಮಾರ್‌ ಅವರ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಅದರೊಂದಿಗೆ, 'ನಿರೀಕ್ಷೆಯಿಂದ ಸಂಭ್ರಮದವರೆಗೆ. ಈ ಜಾಕ್‌ಪಾಟ್‌ನ ರಿವಿಲ್‌ನೊಂದಿಗೆ ಎಲ್ಲವೂ ಬದಲಾಗಿದೆ. ಅನಿಲ್‌ ಕುಮಾರ್‌ ಬೊಲ್ಲಾ ಎಇಡಿ 100 ಮಿಲಿಯನ್‌ ಹಣವನ್ನು ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ. ಈ ಲಕ್ಕಿ ಡೇ ಅನ್ನು ನಾವು ಎಂದಿಗೂ ಮರೆಯೋದಿಲ್ಲ. ಅನಿಲ್‌ ಕುಮಾರ್‌ಗೆ ಅಕ್ಟೋಬರ್‌ 18 ಕೇವಲ ಸಾಮಾನ್ಯ ದಿನವಲ್ಲ. ಅವರ ಪಾಲಿಗೆ ಎಲ್ಲವೂ ಬದಲಾದ ದಿನ. ಅವರ ಜೀವನ ಈಗ ಬದಲಾಗಿದೆ. ಡೇರ್‌ ಟು ಇಮಾಜಿನ್‌ ಮಾಡಿದರೆ ಏನಾಗುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ. ಅಭಿನಂದನೆಗಳು ಅನಿಲ್‌ ಕುಮಾರ್‌' ಎಂದು ಬರೆದುಕೊಂಡಿದೆ.

Scroll to load tweet…

ಅದೃಷ್ಟ ತಂದ ಅಮ್ಮನ ಜನ್ಮದಿನದ ನಂಬರ್‌ ಇರುವ ಟಿಕೆಟ್‌

ವಿಡಿಯೋ ಕ್ಲಿಪ್‌ನಲ್ಲಿ ಅನಿಲ್‌ ಕುಮಾರ್‌ ಲಾಟರಿ ಗೆಲುವನ್ನು ಸಂಭ್ರಮಿಸುತ್ತಿರುವುದನ್ನು ತೋರಿಸಲಾಗಿದೆ. ಚಿನ್ನದ ಬಣ್ಣದ ಹಾಳೆಗಳನ್ನು ಅವರ ಮೇಲೆ ಹಾರಿಸಲಾಯಿತಲ್ಲದೆ, ಸಾಂಪ್ರದಾಯಿಕ ಚೆಕ್‌ ಕೂಡ ಅವರಿಗೆ ನೀಡಲಾಯಿತು. ಇದರ ಬೆನ್ನಲ್ಲಿಯೇ ಅವರು ತಮ್ಮ ಲಕ್ಕಿ ಟಿಕೆಟ್‌ ಆಯ್ಕೆ ಮಾಡಿದ ಹಿಂದಿನ ಕಥೆಯನ್ನು ಹೇಳಿದ್ದಾರೆ. ಹಾಗೂ ಲಾಟರಿ ಗೆದ್ದ ಬಳಿಕ ತಮ್ಮ ಪ್ರತಿಕ್ರಿಯೆ ಏನಾಗಿತ್ತು ಅನ್ನೋದನ್ನು ತಿಳಿಸಿದ್ದಾರೆ. 'ನಾನು ಯಾವುದೇ ಮ್ಯಾಜಿಕ್‌ ಅಥವಾ ಇನ್ನೇನನ್ನೂ ಮಾಡಲಿಲ್ಲ. ನಾನು ಅತ್ಯಂತ ಸುಲಭದ ಪಿಕ್‌ಅನ್ನು ಮಾಡಿದೆ. ಆದರೆ, ಅದರ ಕೊನೆಯ ನಂಬರ್‌ ನನನಗೆ ವಿಶೇಷವಾಗಿತ್ತು. ಅದು ನನ್ನ ತಾಯಿಯ ಜನ್ಮದಿನದ ಸಂಖ್ಯೆಗಳು' ಎಂದು ಹೇಳಿದ್ದಾರೆ.

ಲಾಟರಿ ಗೆಲುವಿನ ಸುದ್ದಿ ಸಿಕ್ಕ ಬಳಿಕ ತಮ್ಮ ಪ್ರತಿಕ್ರಿಯೆ ಏನಾಗಿತ್ತು ಅನ್ನೋದನ್ನೂ ಅನಿಲ್‌ ಕುಮಾರ್‌ ಹೇಳಿದ್ದಾರೆ. 'ನಾನು ಶಾಕ್‌ ಆಗಿದ್ದೆ. ಸೋಫಾ ಮೇಲೆ ನಾನು ಕುಳಿತುಕೊಂಡಿದ್ದೆ. ಯೆಸ್‌..ನಾನು ಗೆದ್ದುಬಿಟ್ಟೆ ಅನ್ನೋ ಫೀಲಿಂಗ್‌ ನನ್ನಲ್ಲಿತ್ತು' ಎಂದು ಹೇಳಿದ್ದಾರೆ.

ಆ ಭಾರತೀಯ ವಲಸಿಗ, ಹಣವನ್ನು ಜವಾಬ್ದಾರಿಯುತವಾಗಿ ಬಳಸಲು ಯೋಜಿಸಿರುವುದಾಗಿ ಹಂಚಿಕೊಂಡರು. "ನಾನು ಈ ಮೊತ್ತವನ್ನು ಹೇಗೆ ಹೂಡಿಕೆ ಮಾಡಬೇಕು, ಸರಿಯಾದ ರೀತಿಯಲ್ಲಿ ಖರ್ಚು ಮಾಡಬೇಕು ಎಂಬುದರ ಕುರಿತು ಯೋಚಿಸುತ್ತಿದ್ದೆ. ಈ ಮೊತ್ತವನ್ನು ಗೆದ್ದ ನಂತರ, ನನ್ನ ಬಳಿ ಹಣವಿದೆ ಎಂದು ನನಗೆ ಅನಿಸಿತು. ಈಗ, ನನ್ನ ಆಲೋಚನೆಗಳ ಮೇಲೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ನಾನು ಏನಾದರೂ ದೊಡ್ಡದಾಗಿ ಮಾಡಲು ಬಯಸುತ್ತೇನೆ' ಎಂದಿದ್ದಾರೆ.

"ನಾನು ಸೂಪರ್‌ಕಾರ್ ಖರೀದಿಸಿ ಐಷಾರಾಮಿ ರೆಸಾರ್ಟ್ ಅಥವಾ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಆಚರಿಸಲು ಇಷ್ಟಪಡುತ್ತೇನೆ" ಎಂದು ಅವರು ಹೇಳಿದರು. ಆದರೆ, ಅವರ ಅತ್ಯಂತ ಹೃದಯಪೂರ್ವಕ ಬಯಕೆಯೆಂದರೆ ಅವರ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು. "ನಾನು ನನ್ನ ಕುಟುಂಬವನ್ನು ಯುಎಇಗೆ ಕರೆದೊಯ್ಯಲು ಬಯಸುತ್ತೇನೆ ಮತ್ತು ನನ್ನ ಇಡೀ ಜೀವನವನ್ನು ಅವರೊಂದಿಗೆ ಇರುವುದನ್ನು ಆನಂದಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಸ್ವಲ್ಪ ಮಟ್ಟದ ಹಣ ದಾನ

29 ವರ್ಷದ ಅದೃಷ್ಟಶಾಲಿ ವ್ಯಕ್ತಿ ತಮ್ಮ ಗೆಲುವಿನ ಒಂದು ಭಾಗವನ್ನು ದಾನ ಮಾಡಲು ಯೋಜಿಸಿದ್ದಾರೆ. ಅದರೊಂದಿಗೆ ಲಾಟರಿ ಟಿಕೆಟ್‌ ಖರೀದಿಸುವ ವ್ಯಕ್ತಿಗಳಿಗೆ ಒಂದು ಸಂದೇಶವನ್ನು ನೀಡಲು ಅವರು ಬಯಸಿದ್ದಾರೆ. 'ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ ಎಂದು ನಾನು ನಂಬುತ್ತೇನೆ.ಪ್ರತಿಯೊಬ್ಬ ಆಟಗಾರನು ಆಟವಾಡುವುದನ್ನು ಮುಂದುವರಿಸಬೇಕೆಂದು ನಾನು ಸೂಚಿಸುತ್ತೇನೆ ಮತ್ತು ಖಂಡಿತವಾಗಿಯೂ ಒಂದು ದಿನ ಅದೃಷ್ಟವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ' ಎಂದಿದ್ದಾರೆ.

ಕೊನೆಗೂ, ತಮಗೆ "ಬಹಳ ದೊಡ್ಡ ಅವಕಾಶ" ಒದಗಿಸಿದ್ದಕ್ಕಾಗಿ ಅವರು ಯುಎಇ ಲಾಟರಿ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಇದು ಇತರರಿಗೆ ಸಂತೋಷವನ್ನು ತರುವುದನ್ನು ಮುಂದುವರಿಸುತ್ತದೆ ಎಂದು ಆಶಿಸಿದರು.

ಸೆಪ್ಟೆಂಬರ್‌ನಲ್ಲಿ, ದುಬೈನಲ್ಲಿ ವಾಸಿಸುವ ಮತ್ತೊಬ್ಬ ಭಾರತೀಯರು ಅಬುಧಾಬಿ ಬಿಗ್ ಟಿಕೆಟ್ ಸರಣಿ 278 ಡ್ರಾದಲ್ಲಿ 15 ಮಿಲಿಯನ್ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್ (ಸುಮಾರು 35 ಕೋಟಿ ರೂ.) ಬಹುಮಾನವನ್ನು ಗೆದ್ದರು. ದುಬೈ ಡ್ರೈಡಾಕ್ಸ್‌ನಲ್ಲಿ 30 ವರ್ಷದ ತಂತ್ರಜ್ಞ ಸಂದೀಪ್ ಕುಮಾರ್ ಪ್ರಸಾದ್ ಉತ್ತರ ಪ್ರದೇಶದವರಾಗಿದ್ದು, ಮೂರು ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ.