ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಛತ್ರಿ ಇಲ್ಲದೆ ಮಳೆಯಲ್ಲಿ ನಿಂತಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವದೆಹಲಿ (ಆ.15): ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಹಾಜರಿದ್ದರು. ಮಳೆಯಲ್ಲಿ ರಾಹುಲ್ ಛತ್ರಿ ಇಲ್ಲದೆ ಕಾಣಿಸಿಕೊಂಡರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಹುಲ್ ದೇಶಕ್ಕೆ ಶುಭ ಹಾರೈಸಿದರು. ಇನ್ನೊಂದು ಪ್ರಮುಖ ವಿಷಯವೆಂದರೆ ಕಾಂಗ್ರೆಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಎಷ್ಟು ಎತ್ತರದಲ್ಲಿ ಕಟ್ಟಲಾಗಿತ್ತು ಎಂದರೆ ಅದನ್ನು ರಿಮೋಟ್‌ನಿಂದ ಹಾರಿಸಬೇಕಾಯಿತು.
ಈ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಳೆಯಲ್ಲಿ ಛತ್ರಿಯಿಲ್ಲದೆ ಒದ್ದೆಯಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರಗಳು ರಾಹುಲ್‌ರವರ ಸರಳತೆ ಮತ್ತು ಸಮರ್ಪಣೆಯನ್ನ ತೋರಿಸುತ್ತಿದೆ. 'X' ವೇದಿಕೆಯಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಸ್ವಾತಂತ್ರ್ಯ ದಿನದಂದು ಎಲ್ಲ ದೇಶವಾಸಿಗಳಿಗೆ ಶುಭಾಶಯಗಳು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ಸಿಕ್ಕ ಈ ಸ್ವಾತಂತ್ರ್ಯವು ಸತ್ಯ, ಸಮಾನತೆ ಮತ್ತು ನ್ಯಾಯದ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯಾಗಿದೆ. ಜೈ ಹಿಂದ್, ಜೈ ಭಾರತ್! ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯ ಕೋರಿದ್ದು,ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಅದರ ತತ್ವಗಳನ್ನು ರಕ್ಷಿಸುವ ಸಂಕಲ್ಪ ದೃಢವಾಗಿದೆ. ಜೈ ಭಾರತ್! ಎಂದಿದ್ದಾರೆ.
ಇತ್ತ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ರಾಹುಲ್‌ರವರ ಮಳೆಯಲ್ಲಿ ಒದ್ದೆಯಾಗಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಇದು ಅವರ ಸರಳ ಜೀವನಶೈಲಿಯನ್ನು ಬಿಂಬಿಸುತ್ತದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಲವರು ಇದೆಲ್ಲ ಉದ್ದೇಶಿತವಾಗಿದೆ, ಒಂದು ಕಡೆ ದೇಶಭಕ್ತಿ ಪ್ರದರ್ಶನ, ಇನ್ನೊಂದುಕಡೆ ಪಾಕಿಸ್ತಾನದ ಬಗ್ಗೆ ಮೃದುಧೋರಣೆ ಎಂದು ಟೀಕಿಸಿದ್ದಾರೆ.
