ಶಾಸಕರೊಬ್ಬರು ಪಂಚಾಯತ್ ಕಾರ್ಯದರ್ಶಿಯೊಬ್ಬರಿಗೆ ಬೂಟಿನಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಶಾಸಕರನ್ನು ಗುರುತಿಸದ ಕಾರಣಕ್ಕೆ ಈ ಘಟನೆ ನಡೆದಿದ್ದು, ಆಡಿಯೋ ಕ್ಲಿಪ್ ವೈರಲ್ ಆಗಿದೆ. ಅಧಿಕಾರಿಯೂ ಸಹ ಶಾಸಕರಿಗೆ ಖಡಕ್ ಉತ್ತರ ನೀಡಿದ್ದಾರೆ.
ಪಾಟ್ನಾ: ಪಂಚಾಯತ್ ವೆಬ್ ಸಿರೀಸ್ ನೋಡಿದ್ರೆ ನಿಮಗೆ ಅಲ್ಲಿ ಜನಪ್ರತಿನಿಧಿ ಮತ್ತು ಸ್ಥಳೀಯ ಪಂಚಾಯತ್ ಕಾರ್ಯದರ್ಶಿ ನಡುವೆ ನಡೆಯುವ ಗಲಾಟೆ ನೆನಪಿರುತ್ತದೆ. ಇದೀಗ ಅದೇ ರೀತಿಯಲ್ಲೊಂದು ಘಟನೆ ನಡೆದಿದ್ದು, ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶಾಸಕರೊಬ್ಬರು, ಪಂಚಾಯತ್ ಕಾರ್ಯದರ್ಶಿಯನ್ನು ನಿಂದಿಸಿದ್ದಾರೆ. ಬೂಟ್‌ನಿಂದ ನಿನ್ನನ್ನು ಹೊಡೆಯವೆ ಎಂದು ಬೆದರಿಕೆ ಸಹ ಹಾಕಿದ್ದಾರೆ. ಶಾಸಕರು ಮತ್ತು ಪಂಚಾಯತ್ ಕಾರ್ಯದರ್ಶಿ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಧಿಕಾರಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ
ಮನೇರ್‌ನ ಆರ್‌ಜೆಡಿ ಶಾಸಕ ಭಾಯಿ ವೀರೇಂದ್ರ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ವೀರೇಂದ್ರ ಭಾಯಿ ಕರೆ ಮಾಡಿದ್ದಾಗ ಪಂಚಾಯ್ತಿ ಕಾರ್ಯದರ್ಶಿ ಗುರುತಿಸಿರಲಿಲ್ಲ. ತಮ್ಮನ್ನು ಗುರುತಿಸದ ಕಾರಣ ಶಾಸಕ ವೀರೆಂದ್ರ ಭಾಯಿ ಕೆಂಡಮಂಡಲರಾಗಿ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕುತ್ತಿರೋದನ್ನು ಆಡಿಯೋದಲ್ಲಿ ಕೇಳಿಸಿಕೊಳ್ಳಬಹುದು.
ನಿನಗೆ ವೀರೇಂದ್ರ ಭಾಯಿ ಯಾರು ಎಂದು ಗೊತ್ತಿಲ್ಲವೇ?
ಮನೇರ್ ವಿಧಾನಸಭಾ ಕ್ಷೇತ್ರದ ಶಾಸಕ ವೀರೇಂದ್ರ, ಪಂಚಾಯ್ತಿ ಕಾರ್ಯದರ್ಶಿಗೆ ಕರೆ ಮಾಡಿ ರಿಂಕಿ ದೇವಿ ಎಂಬವರ ಮರಣ ಪ್ರಮಾಣ ಪತ್ರದ ಬಗ್ಗೆ ವಿಚಾರಿಸುತ್ತಾರೆ. ಕರೆ ಮಾಡಿದ ಕೂಡಲೇ ನಾನು ವೀರೇಂದ್ರ ಭಾಯಿ ಎಂದು ಶಾಸಕರು ಹೇಳುತ್ತಾರೆ. ಆದ್ರೆ ಪಂಚಾಯ್ತಿ ಕಾರ್ಯದರ್ಶಿ ಶಾಸಕರನ್ನು ಗುರುತಿಸಲ್ಲ. ಇದರಿಂದ ಕೋಪಗೊಂಡ ಶಾಸಕರು, ನಿನಗೆ ವೀರೇಂದ್ರ ಭಾಯಿ ಯಾರು ಎಂದು ಗೊತ್ತಿಲ್ಲವೇ? ನಾನು ನನ್ನನ್ನು ಪರಿಚಯಿಸಿಕೊಳ್ಳಬೇಕೆಂದು ಬಯಸುತ್ತೀರಾ? ಇಡೀ ದೇಶಕ್ಕೆ ನಾನು ಯಾರೆಂದು ಗೊತ್ತಿದೆ. ಪ್ರೋಟೋಕಾಲ್ ಫಾಲೋ ಮಾಡೋದು ಗೊತ್ತಿಲ್ಲವೇ? ಬೂಟ್‌ನಿಂದ ಹೊಡೆಯುವೆ (I will hit you with a shoe) ಎಂದು ಶಾಸಕರು ಜೋರು ಧ್ವನಿಯಲ್ಲಿ ಹೇಳುತ್ತಾರೆ.
ಶಾಸಕ ವೀರೇಂದ್ರ ಭಾಯಿ ಮಾತುಗಳಿಗೆ ಪ್ರತಿಕ್ರಿಯಿಸಿದ ಪಂಚಾಯ್ತಿ ಕಾರ್ಯದರ್ಶಿ, ನೀವು ಗೌರವಯುತವಾಗಿ ಮಾತನಾಡಿದರೆ, ನಾನು ಅದೇ ರೀತಿ ಮಾಡುತ್ತೇನೆ. ನಿಮ್ಮ ಮಾತುಗಳು ಹೇಗಿದ್ದವು ಎಂಬುದರ ಮೇಲೆ ನಮ್ಮ ಪ್ರತಿಕ್ರಿಯೆ ಇರುತ್ತದೆ. ನಾನು ನಿಮಗೆ ಹೆದರಲ್ಲ. ನನಗೆ ಕ್ಷೇತ್ರದ ಶಾಸಕರ ಗೊತ್ತಿರಲಿಲ್ಲ ಎಂದು ಹೇಳುತ್ತಾರೆ.
ನಾನು ಯಾವುದಕ್ಕೂ ಹೆದರಲ್ಲ: ಅಧಿಕಾರಿಯ ಖಡಕ್ ಉತ್ತರ
ನಿಮಗೆ ನಮಸ್ಕಾರ ಮಾಡಬೇಕೇ? ತೆಗೆದುಕೊಳ್ಳಿ ನಮಸ್ಕಾರ. ರಿಂಕಿ ದೇವಿ ಅವರ ಅರ್ಜಿ ಬಂದಿದೆ. ಎಲ್ಲಾ ಸರ್ಕಾರಿ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮರಣ ಪ್ರಮಾಣಪತ್ರ ಬರುತ್ತದೆ. ನೀವು ಸರಿಯಾಗಿ ಮಾತಾಡಿದ್ರೆ ನಾನು ಸಹ ಸರಿಯಾಗಿಯೇ ಮಾತನಾಡುತ್ತಿದ್ದೆ. ನಾನು ಯಾವುದಕ್ಕೂ ಹೆದರಲ್ಲ ಎಂದು ಪಂಚಾಯ್ತಿ ಕಾರ್ಯದರ್ಶಿ ಖಡಕ್ ಆಗಿಯೇ ಹೇಳುತ್ತಾರೆ.
ಸ್ಥಳೀಯ ಶಾಸಕರನ್ನು ನೀವು ತಿಳಿದಿಲ್ಲದಿದ್ದರೆ ನಿಮಗೆ ಈ ಕೆಲಸ ಮಾಡುವ ಹಕ್ಕಿಲ್ಲ. ನೀನು ಎಲ್ಲಿಯವನು? ಎಂದು ಶಾಸಕರು ಕೇಳುತ್ತಾರೆ. ಹಾಗಾದ್ರೆ ನನ್ನನ್ನು ವರ್ಗಾವಣೆ ಮಾಡಿ. ನಿಮ್ಮ ಬೆದರಿಕೆಗೆಲ್ಲಾ ಹೆದರಲ್ಲ. ಇದನ್ನೆಲ್ಲಾ ಬಿಟ್ಟು ಕೆಲಸದ ಬಗ್ಗೆ ಮಾತನಾಡಿ ಎಂದು ಪಂಚಾಯ್ತಿ ಕಾರ್ಯದರ್ಶಿ ಹೇಳುತ್ತಾರೆ.
ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ಶಾಸಕ ವೀರೇಂದ್ರ ಭಾಯಿ ಯಾವುದೇ ಪ್ರತಿಕ್ರಿಯೆಯನ್ನು ಸಹ ನೀಡಿಲ್ಲ. ಶಾಸಕರ ವಿರುದ್ಧ ಮಾತನಾಡಿದ ಪಂಚಾಯ್ತಿ ಕಾರ್ಯದರ್ಶಿ ಯಾರು ಎಂದು ತಿಳಿದು ಬಂದಿಲ್ಲ. ವಿರೋಧ ಪಕ್ಷದ ನಾಯಕರು, ಆರ್‌ಜೆಡಿ ಶಾಸಕ ಭಾಯಿ ವೀರೇಂದ್ರ ಆಕ್ರೋಶ ಹೊರಹಾಕಿದ್ದು, ಅಧಿಕಾರದ ದರ್ಪದಿಂದ ಈ ರೀತಿ ಮಾತುಗಳು ಬರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
