‘ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಉತ್ತೇಜಿಸಲಿದೆ ಮತ್ತು ಸಮಾಜದ ಪ್ರತಿ ವರ್ಗಕ್ಕೂ ನೇರವಾಗಿ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ನವದೆಹಲಿ : ‘ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಉತ್ತೇಜಿಸಲಿದೆ ಮತ್ತು ಸಮಾಜದ ಪ್ರತಿ ವರ್ಗಕ್ಕೂ ನೇರವಾಗಿ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.ಸೋಮವಾರ ಎಕ್ಸ್‌ ಖಾತೆಯ ಮೂಲಕ ದೇಶವಾಸಿಗಳಿಗೆ ಬಹಿರಂಗ ಪತ್ರ ಬರೆದಿರುವ ಅವರು, ಹೊಸ ಜಿಎಸ್‌ಟಿ ನೀತಿಯ ಲಾಭಗಳನ್ನು ವಿವರಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಸೆ.22ರಿಂದ, ಮುಂಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಅಸ್ತಿತ್ವಕ್ಕೆ ಬಂದಿವೆ. ಇದು ಉಳಿತಾಯ ಉತ್ಸವದ ಆರಂಭವನ್ನು ಸೂಚಿಸುತ್ತದೆ. ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಹೆಚ್ಚಿಸುತ್ತದೆ. ರೈತರು, ಮಹಿಳೆಯರು, ಯುವಕರು, ಬಡವರು, ಮಧ್ಯಮ ವರ್ಗ ಅಥವಾ ವ್ಯಾಪಾರಿಗಳು- ಹೀಗೆ ಸಮಾಜದ ಪ್ರತಿಯೊಂದು ವರ್ಗಕ್ಕೂ ನೇರವಾಗಿ ಪ್ರಯೋಜನ ನೀಡುತ್ತದೆ. ಹೆಚ್ಚಿನ ಬೆಳವಣಿಗೆ ಮತ್ತು ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಆಹಾರ, ಔಷಧಿ, ಸೋಪ್, ಟೂತ್‌ಪೇಸ್ಟ್, ವಿಮೆ ಮತ್ತು ಇನ್ನೂ ಅನೇಕ ವಸ್ತುಗಳು ಈಗ ತೆರಿಗೆಮುಕ್ತವಾಗಿವೆ ಅಥವಾ ಶೇ.5ರ ತೆರಿಗೆ ಸ್ತರಕ್ಕೆ ಇಳಿದಿವೆ. ಈ ಹಿಂದೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸರಕುಗಳು ಈಗ ಬಹುತೇಕ ಶೇ.5ಕ್ಕೆ ಬದಲಾಗಿವೆ. ವ್ಯಾಪಾರಿಗಳು ಜಿಎಸ್‌ಟಿ ಸುಧಾರಣೆಗಳ ಮೊದಲು ಮತ್ತು ನಂತರದ ತೆರಿಗೆಗಳನ್ನು ಸೂಚಿಸುವ ಫಲಕ ಹಾಕುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ’ ಎಂದಿದ್ದಾರೆ.

‘2047ರ ವೇಳೆಗೆ ವಿಕಸಿತ ಭಾರತದ ಸಾಮೂಹಿಕ ಗುರಿಯನ್ನು ಸಾಧಿಸಲು ಸ್ವಾವಲಂಬನೆಯ ಹಾದಿಯಲ್ಲಿ ನಡೆಯುವುದು ಅತ್ಯಗತ್ಯ. ನಾವು ಖರೀದಿಸುವುದು ಸ್ವದೇಶಿ, ನಾವು ಮಾರಾಟ ಮಾಡುವುದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳೋಣ. ಜಿಎಸ್‌ಟಿ ಉಳಿತಾಯ ಉತ್ಸವವನ್ನು ಆಚರಿಸೋಣ’ ಎಂದು ಕರೆ ನೀಡಿದ್ದಾರೆ.

ಆದಾಯ ತೆರಿಗೆ ಕಡಿತದ ಸಂಯೋಜಿತ ಲಾಭದಿಂದ ಜನರು ವಾರ್ಷಿಕ 2.5 ಲಕ್ಷ ಕೋಟಿ ರು. ಉಳಿಸುತ್ತಾರೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತ ಮತ್ತು ಹಿಂದಿನ ಆದಾಯ ತೆರಿಗೆ ಕಡಿತದ ಸಂಯೋಜಿತ ಲಾಭದಿಂದ ಜನರು ವಾರ್ಷಿಕ 2.5 ಲಕ್ಷ ಕೋಟಿ ರು. ಉಳಿಸುತ್ತಾರೆ. ತೆರಿಗೆ ಕಡಿತದಿಂದ ವಹಿವಾಟು ಕೂಡ ಹೆಚ್ಚಲಿದ್ದು, ದೇಶದ ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಿಎಸ್‌ಟಿ 2.0 ಜಾರಿಗೆ ಮುನ್ನ ಭಾನುವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ನವರಾತ್ರಿಯ ಮೊದಲ ದಿನದಂದು, ದೇಶವು ಆತ್ಮನಿರ್ಭರ ಭಾರತಕ್ಕಾಗಿ ಒಂದು ಮಹತ್ವದ ಮತ್ತು ದೊಡ್ಡ ಹೆಜ್ಜೆ ಇಡಲಿದೆ. ಇದೇ ಶುಭದಿನ ‘ಜಿಎಸ್‌ಟಿ ಬಚತ್ ಉತ್ಸವ’ (ಉಳಿತಾಯ ಹಬ್ಬ) ಆರಂಭವಾಗಲಿದ್ದು, ಆದಾಯ ತೆರಿಗೆ ವಿನಾಯಿತಿಯೊಂದಿಗೆ ಇದು ಹೆಚ್ಚಿನ ಜನರಿಗೆ ‘ಡಬಲ್ ಬೊನಾನ್ಜಾ’ ಆಗಲಿದೆ’ ಎಂದರು.