ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿತನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ. ಉತ್ಖನನದಲ್ಲಿ ಏನೂ ಸಿಗದ ಕಾರಣ ಸಿಎಂ ಸಿದ್ದರಾಮಯ್ಯ ಈಗ ವರಸೆ ಬದಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಸ್‌ಐಟಿ ರಚಿಸಿದ್ದು ತಾವೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ (ಆ.14): ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಏನೊಂದೂ ಸಿಗದಿದ್ದಕ್ಕೆ ಸಿಎಂ ಈಗ ವರಸೆ ಬದಲಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಲ್‌ಪಿ ಸಭೆಯಲ್ಲಿ ಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ ಸಿಎಂ, ಈಗ ಸರ್ಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ. ಪರ-ವಿರೋಧ ಚರ್ಚೆಯ ನಡುವೆಯೇ ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಉತ್ಖನನಕ್ಕೆ ಆದೇಶ ನೀಡಿದ್ದು, ತಾವೇ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನ ಮಾಡಿದ ಜಾಗಗಳಲ್ಲಿ ಈವರೆಗೂ ಮಣ್ಣು ಅಗೆದಿದ್ದೊಂದೇ ಬಂತು. ಅನಾಮಿಕ ಆರೋಪಿಸಿದಂತೆ ಏನೊಂದೂ ಗುರುತರ ಸಾಕ್ಷಿ, ಶವಗಳ ಅವಶೇಷ ಸಿಗದಾಯಿತು ಎಂದು ಟೀಕಿಸಿದ್ದಾರೆ.

ಹೀಗಾಗಿ, ಸಿಎಂ ಈಗ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆಂಬ ಕಾರಣಕ್ಕೆ ಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎನ್ನುತ್ತಿದ್ದಾರೆ ಎಂದು ಸಚಿವ ಜೋಶಿ ಟೀಕಿಸಿದ್ದಾರೆ.