ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಹಿರಿಯ ನಾಯಕ ಆನಂದ್ ಶರ್ಮಾ ರಾಜೀನಾಮೆ ನೀಡಿದ್ದಾರೆ.

ನವದೆಹಲಿ (ಆ.10) ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರ ಮುಖ್ಯಸ್ಥರಾಗಿದ್ದ ಹಿರಿಯ ನಾಯಕ ಆನಂದ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿರುವ ಆನಂದ್ ಶರ್ಮಾ, ಕಳೆದ ಕೆಲ ದಶಕಗಳಿಂದ ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೀಗ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ಪತ್ರ ರವಾನೆ

ಆನಂದ್ ಶರ್ಮಾ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆಗೆ ರವಾನಿಸಿದ್ದಾರೆ. ಕಾಂಗ್ರಸ್ ಪಕ್ಷದ ವಿದೇಶಾಂಗ ವ್ಯವಹಾರ ವಿಭಾಗದಲ್ಲಿ ಪರಿಷ್ಕರಣೆಯಾಗಬೇಕು. ಯುವ ಮನಸ್ಸುಗಳಿಗೆ ಹೆಚ್ಚಿನ ಅವಕಾಶ ನೀಡಬೇಕು. ಹೀಗಾಗಿ ತಾನು ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಆನಂದ್ ಶರ್ಮಾ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಆನಂದ್ ಶರ್ಮಾ ಕಾಂಗ್ರೆಸ್ ಪಕ್ಷದಲ್ಲಿ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮುಖ್ಯಸ್ಥರಾಗಿ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ವಿದೇಶಾಂಗ ವ್ಯವಹಾರ ವಿಭಾಗ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಬೇಕು. ಇದಕ್ಕೆ ಯುವ ಸಮೂಹಕ್ಕೆ ಹೆಚ್ಚಿನ ಅವಕಾಶ ನೀಡಬೇಕು. ಅವರ ಆಲೋಚನೆ, ಹೊಸತನಕ್ಕೆ ಪಕ್ಷ ಅವಕಾಶ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ವಿದೇಶಾಂಗ ವ್ಯವಹಾರ ವಿಭಾಗದ ಸದಸ್ಯರ ಪಟ್ಟಿ

ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರ ವಿಭಾದಲ್ಲಿ ಆನಂದ್ ಶರ್ಮಾ ಮುಖ್ಯಸ್ಥರಾಗಿದ್ದಾರೆ, ಪ್ರತಾಪ್ ಸಿಂಗ್ ಬಾಜ್ವಾ, ಮನೀಶ್ ತಿವಾರಿ, ಪಲ್ಲಮ್ ರಾಜು, ದೀಪೇಂದ್ರ ಹೂಡ, ಸಾಜೀವ್ ಜೋಸೆಫ್, ರಾಗಿಣಿ ನಾಯಕ್, ಸಂಜಯ್ ಚಂದೋಕ್ ಸದಸ್ಯರಾಗಿದ್ದಾರೆ.

ಕಾಂಗ್ರೆಸ್ ವಿದೇಶಾಂಗ ವಿಭಾಗ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವದ ಇತರ ದೇಶಗಳ ಪಕ್ಷಗಳ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡಿದೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ನಿಲುವು ಸಿದ್ಧಾಂತಕ್ಕೆ ಹೊಂದಿಕೆಯಾಗುವ ಪಕ್ಷಗಳ ಜೊತೆ ಆತ್ಮೀಯತೆ ಬೆಳೆಸಿಕೊಂಡಿದೆ. ಏಷ್ಯಾ, ಆಫ್ರಿಕಾ, ಯೂರೋಪ್, ಮಧ್ಯ ಪ್ರಾಚ್ಯ, ಲ್ಯಾಟಿನ್ ಅಮೆರಿಕ ದೇಶಗಳ ಪಕ್ಷಗಳ ಜೊತೆ ಕಾಂಗ್ರೆಸ್ ಉತ್ತಮ ಸಂಬಂಧ ಬೆಳೆಸಿಕೊಂಡಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ. ಪಕ್ಷದಲ್ಲಿ ಈ ಮಹತ್ತರ ಜವಾಬ್ದಾರಿ ನೀಡಿರುವುದಕ್ಕೆ ಧನ್ಯವಾದ ತಿಳಿಸಿರುವ ಆನಂದ್ ಶರ್ಮಾ, ಜವಾಬ್ದಾರಿ ವಹಿಕೊಳ್ಳುವ ಹೊಸ ತಂಡಕ್ಕೆ ಶುಭ ಹಾರೈಸಿದ್ದಾರೆ.