ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ ೩೧ಕ್ಕೂ ಹೆಚ್ಚು ಯಾತ್ರಿಕರು ಮೃತಪಟ್ಟಿದ್ದಾರೆ. ಪಂಜಾಬ್, ಹಿಮಾಚಲ ಪ್ರದೇಶದಲ್ಲೂ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಶ್ರೀನಗರ: ದೇಶದೆಲ್ಲೆಡೆ ರಕ್ಕಸ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಪೋಟದಿಂದಾಗಿ ಜನರು ಕಂಗಾಲಾಗಿದ್ದಾರೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವರುಣ ರಣಕೇಕೆ ಹಾಕಿದ್ದು, ಅವಾಂತರಗಳ ಸರಮಾಲೆಯೇ ಸೃಷ್ಟಿ ಆಗಿದೆ. ನದಿಗಳ ರೌದ್ರನರ್ತನ, ಭೂಕುಸಿತ,ಸಂಚಾರ ಬಂದ್, ಗ್ರಾಮಗಳಿಗೆ ಜಲದಿಗ್ಬಂಧನ, ಜನಜೀವನ ಅಸ್ತವ್ಯಸ್ತ. ಎಲ್ಲಿ ನೋಡಿದ್ರಲ್ಲಿ ಜಲತಾಂಡವ. ರೌದ್ರರೂಪ ತಾಳಿದ ನದಿಗಳು. ಕಣ್ಮುಂದೆ ಮನೆಗಳು ಕೊಚ್ಚಿಹೋಗ್ತಿವೆ ಸಾವು ನೋವು ಲೆಕ್ಕಕ್ಕೇ ಸಿಗ್ತಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ನದಿಗಳು ಉಕ್ಕೇರಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಹಳ್ಳ, ಕೊಳ್ಳಗಳು ಕೊಚ್ಚಿ ಹೋಗಿದ್ದು, ಹಲವು ಕಡೆ ಭೂಕುಸಿತ ಉಂಟಾಗಿ ಭಾರಿ ಸಾವು-ಸಂಭವಿಸಿದೆ. ಅದ್ರಲ್ಲೂ ಜಮ್ಮು & ಕಾಶ್ಮೀರ ಮಳೆಯಿಂದ ಕಣ್ಣೀರು ಹಾಕುತ್ತಿದೆ.
ಮೇಘಸ್ಪೋಟಕ್ಕೆ ಪಂಜಾಬ್‌ನ 7 ಜಿಲ್ಲೆಗಳು ಕಂಗಾಲು
ಪಂಜಾಬ್‌ನ ಏಳು ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. 150ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿವೆ. ಪಠಾಣ್ ಕೋಟ್ ಮಾಧೋಪುರ ಬಳಿ ಕುಸಿಯುವ ಹಂತದಲ್ಲಿದ್ದ ಕಟ್ಟಡದ ಮೇಲಿದ್ದ 22 CRPF ಸಿಬ್ಬಂದಿ ಹಾಗೂ ಮೂವರು ನಾಗರಿಕರನ್ನ ಭಾರತೀಯ ಸೇನೆ ರಕ್ಷಿಸಿದೆ.
ಬ್ರಿಡ್ಜ್ ಕುಸಿತ ಭಾರತೀಯ ಸೇನೆ ರಕ್ಷಣಾ ಕಾರ್ಯ
ಜಮ್ಮುವಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಜಮ್ಮುವಿನ ಭಗವತಿ ನಗರದ ಬಳಿಯ ತಾವಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಒಂದು ಭಾಗ ಕುಸಿದು ಬಿದ್ದಿದೆ. ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಸೇನೆ ಕಾರ್ಯಾಚರಣೆ ನಡೆಸಿ ಹಲವರನ್ನ ರಕ್ಷಿಸಿದೆ.
ಹಿಮಾಚಲ ಪ್ರದೇಶದಲ್ಲಿ ಮಳೆ ರಣಕೇಕೆ
ಇನ್ನು ಹಿಮಾಚಲ ಪ್ರದೇಶದಲ್ಲಿ ಮಳೆರಾಯನ ಅಬ್ಬರಕ್ಕೆ ಪ್ರವಾಹ ಸೃಷ್ಟಿಯಾಗಿದೆ. ಮನಾಲಿ ಬಳಿಯ ರೈಸನ್ ಟೋಲ್ ಪ್ಲಾಜ್ಗೆ ನೀರು ನುಗ್ಗಿದೆ. ಅಲ್ಲದೇ ಪ್ರಸಿದ್ಧ ಶೇರ್-ಎ- ಪಂಜಾಬ್ ರೆಸ್ಟೋರೆಂಟ್‌ನ ಹೆಚ್ಚಿನ ಭಾಗವು ನಿರಂತರ ಮಳೆಗೆ ಕೊಚ್ಚಿ ಹೋಗಿದೆ. ರಸ್ತೆ ಕುಸಿದು ಮಿನಿ ಟ್ರಕ್ ಬಿದ್ದ ದೃಶ್ಯ ಮೈ ಜುಮ್ ಎನ್ನಿಸುತ್ತೆ.
ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ 31 ಭಕ್ತರು ಸಾವು, ಮೋದಿ ಸಂತಾಪ
ಮಹಾ ಮಳೆಗೆ ಜಮ್ಮು ಮತ್ತು ಕಾಶ್ಮೀರ ಅಲ್ಲೋಲ ಕಲ್ಲೋಲವಾಗಿದೆ. ನಾಲ್ಕು ದಿನದಿಂದ ಭಾರಿ ಮಳೆ ಸುರಿಯುತ್ತಿದೆ. ಜಮ್ಮುವಿನ ಕತ್ರಾದ ಅರ್ಧಕುಮಾರಿ ಬಳಿ ಭೂಕುಸಿತ ಸಂಭವಿಸಿದ್ದು, ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ 31 ಅಧಿಕ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 23ಕ್ಕೂ ಅಧಿಕ ಯಾತ್ರಾರ್ಥಿಗಳು ಗಾಯಗೊಂಡಿದ್ದು, ಅವಶೇಷಗಳಡಿ ಸಿಲುಕಿದವರಿಗೆ ಶೋಧ ಕಾರ್ಯ ಮುಂದುವರಿದಿದೆ. ಭೂಕುಸಿತ ಬೆನ್ನಲ್ಲೇ ವೈಷ್ಣೋದೇವಿ ಯಾತ್ರೆಯನ್ನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ವೈಷ್ಣೋದೇವಿಯ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಭೂಕುಸಿತ ಉಂಟಾಗಿ ಯಾತ್ರಾರ್ಥಿಗಳು ಜೀವ ಕಳೆದುಕೊಂಡಿದ್ದು ಅತ್ಯಂತ ದುಃಖಕರ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ನೆರೆಯ ಪಾಕಿಸ್ತಾನದಲ್ಲಿ ಮೇಘಸ್ಫೋಟ ಮುಂದುವರಿದಿದ್ದು ಸಾಹಿಬ್ ನೀರಿನಲ್ಲಿ ಮುಳುಗಿದೆ. ರಾವಿ ನದಿಯ ಆರ್ಭಟದಿಂದ ಶ್ರೀ ಕರ್ತಾರ್ಪುರ್ ಸಾಹಿಬ್ ಗುರುದ್ವಾರ ನೀರಿನಲ್ಲಿ ಬಹುತೇಕ ಮುಳುಗಡೆ ಆಗಿದೆ.
