ಕಾರಿನೊಳಗೆ ಸಿಲುಕಿಕೊಂಡ ಬಾಲಕಿಯನ್ನು ಉಪಾಯವಾಗಿ ಹೊರತೆಗೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಆಟವಾಡುತ್ತಾ ಮಕ್ಕಳು ಪೋಷಕರ ಗಮನಕ್ಕೆ ಬಾರದೇ ಕಾರಿನೊಳಗೆ ಕುಳಿತು ಲಾಕ್ ಮಾಡಿಕೊಳ್ಳುವುದು ನಂತರ ಪೋಷಕರು ಪರದಾಡಿದಂತಹ ಹಲವು ಘಟನೆಗಳು ನಡೆದಿವೆ. ಮಕ್ಕಳು ಕಾರಿನಲ್ಲಿ ಲಾಕ್ ಆದ ವಿಚಾರವೇ ತಿಳಿಯದೇ ಪೋಷಕರು ಊರೆಲ್ಲಾ ಹುಡುಕಾಡಿದ ನಂತರ ಮಕ್ಕಳು ಕಾರಿನೊಳಗೆ ಶವವಾಗಿ ಪತ್ತೆಯಾದಂತಹ ಘಟನೆಗಳು ನಡೆದಿರುವುದು ನಿಮಗೆ ತಿಳಿದಿರಬಹುದು. ಆದರೆ ಇಲ್ಲೊಂದು ಕಡೆ ಕಾರಿನೊಳಗೆ ಸಿಲುಕಿದ ಮಗುವನ್ನು ಮೊಬೈಲ್‌ನಲ್ಲಿ ವೀಡಿಯೋ ತೋರಿಸಿ ಮಗುವೇ ಕಾರಿನ ಲಾಕ್ ತೆರೆದು ವಾಪಸ್ ಬರುವಂತೆ ಮಾಡಿದ ಘಟನೆ ನಡೆದಿದ್ದು ವೈರಲ್ ಆಗಿದೆ.
ಕಾರಿನೊಳಗೆ ಹೋಗಿ ಲಾಕ್ ಮಾಡಿಕೊಂಡ ಮಗು:
ಅಂದಹಾಗೆ ಈ ಘಟನೆ ನಡೆದಿರುವುದು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಇಲ್ಲಿನ ಸುಲ್ತಾನ್‌ಬಾದ್‌ಗೆ ಕುಟುಂಬವೊಂದು ವಿಹಾರಕ್ಕೆಂದು ಬಂದಿತ್ತು. ಈ ವೇಳೆ ಆ ಕುಟುಂಬದ ಪುಟ್ಟ ಮಗಳೊಬ್ಬಳು ಆಕಸ್ಮಿಕವಾಗಿ ಕಾರಿನ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಕಾರಿನ ಕೀ ಒಳಗೆ ಇತ್ತು. ಕಾರು ಸ್ವಯಂಚಾಲಿತವಾಗಿ ಲಾಕ್ ಅಗಿದ್ದರಿಂದ ಬಾಲಕಿ ಒಳಗೆ ಸಿಲುಕಿದ್ದು, ಇತ್ತ ಪೋಷಕರಿಗೂ ತೊಳಲಾಟ ಶುರುವಾಗಿತ್ತು. ಈ ಘಟನೆ ನಡೆಯುವ ವೇಳೆ ಬಾಲಕಿಯ ಕುಟುಂಬ ಸಮೀಪದ ಸ್ವೀಟ್ ಶಾಪೊಂದಕ್ಕೆ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಯುವಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ:
ಇತ್ತ ಮಗು ಕಾರಿನ ಒಳಗೆ ಇರುವ ವಿಚಾರ ತಿಳಿದ ಸ್ಥಳೀಯರು ಅಲ್ಲಿ ಸೇರಿದ್ದು, ಕಾರಿನ ಬಾಗಿಲನ್ನು ತೆಗೆಯುವುದಕ್ಕೆ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಅವರೆಲ್ಲಾ ಪ್ರಯತ್ನಗಳು ವಿಫಲಗೊಂಡಿವೆ. ಈ ವೇಳೆ ಬಾಲಕಿ ಗೊಂದಲದ ಜೊತೆ ಭಯ ಆತಂಕಕ್ಕೆ ಒಳಗಾಗಿದ್ದಾಳೆ. ಈ ರೀತಿಯ ಆತಂಕದ ಸ್ಥಿತಿಯಲ್ಲಿದ್ದ ವೇಳೆ ಯುವಕನೋರ್ವ ಹೊಸ ಐಡಿಯಾದೊಂದಿಗೆ ಮುಂದೆ ಬಂದಿದ್ದಾನೆ. ಆತ ತನ್ನ ಮೊಬೈಲ್‌ನಲ್ಲಿ ಹೇಗೆ ಕಾರನ್ನು ಒಳಗಿನಿಂದ ಲಾಕ್ ತೆಗೆಯುವುದು ಎಂಬುದನ್ನು ಹುಡುಕಾಡಿದ್ದಾನೆ. ಈ ವೇಳೆ ಬಂದ ವೀಡಿಯೋವನ್ನು ಕಾರಿನ ಕಿಟಕಿ ಗಾಜುಗಳ ಮೂಲಕ ಒಳಗಿದ್ದ ಪುಟ್ಟ ಬಾಲಕಿಗೆ ತೋರಿಸಿದ್ದಾನೆ. ಅದರಂತೆ ಒಳಗಿದ್ದ ಬಾಲಕಿ ವೀಡಿಯೋ ನೋಡಿದ್ದು, ವೀಡಿಯೋದಲ್ಲಿ ನೀಡಿದ ಮಾಹಿತಿ ಪ್ರಕಾರವೇ ಆಕೆ ಕಾರಿನ ಲಾಕನ್ನು ಆಕೆಯೇ ಸ್ವತಃ ತೆಗೆದು ಹೊರಬಂದಿದ್ದಾಳೆ. ಆಕೆ ಕಾರಿನಿಂದ ಹೊರಬಂದಿದ್ದು ನೋಡಿ ಅಲ್ಲಿದ್ದವರು ನಿಟ್ಟುಸಿರುಬಿಟ್ಟಿದ್ದಾರೆ.
ಹೀಗೆ ಕಾರಿನ ಬಾಗಿಲನ್ನು ತೆಗೆದು ಹೊರಬರುತ್ತಿದ್ದಂತೆ ಅಲ್ಲಿದ್ದ ಜನ ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಅನೇಕರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯುವಕನ ಸಮಯಪ್ರಜ್ಞೆ ಹಾಗೂ ತಕ್ಷಣದ ಚಿಂತನೆಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. againinthefeed ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಟೆಕ್ನಲಾಜಿಯಾ ಎಂದಿದ್ದರೆ, ಇಂಟರನ್‌ನೆಟ್‌ನ ಶಕ್ತಿಯ ಸರಿಯಾದ ಬಳಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಕ್ಕಳಿಗೆ ಮೊಬೈಲ್ ಒಳ್ಳೆಯ ವಿಷಯಕ್ಕೆ ನೀಡಿ ಹಾಗೂ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಅಪ್ಪ ಅಂದ್ರೆ ಆಕಾಶ ಅನ್ನೋದನ್ನಾ ನಿಜ ಮಾಡಿದ ತಂದೆ : ಕ್ಯಾನ್ಸರ್‌ನಿಂದ ಚೇತರಿಸಿದ ಮಗನ ಆಸೆ ಈಡೇರಿಸಿದ್ದು ಹೀಗೆ...
ಇದನ್ನೂ ಓದಿ: ಅಪಘಾತದ ನಂತರ ರಸ್ತೆಯಲ್ಲೇ ಒಂದಕ್ಕೊಂದು ಅಂಟಿಕೊಂಡು ನೆಲಚಕ್ರದಂತೆ ತಿರುಗಿದ ಸ್ಕೂಟಿ ಬೈಕ್
