ಜೀ ವಾಹಿನಿಯ 'ತುಮ್‌ ಸೆ ತುಮ್‌ ತಕ್‌' ಧಾರಾವಾಹಿ ವಿರುದ್ಧ ದೂರು ನೀಡಿದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಛೀಮಾರಿ ಹಾಕಿದೆ. ಧಾರಾವಾಹಿಯ ಕಥಾವಸ್ತುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರರಿಗೆ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡುವಂತೆ ಕೋರ್ಟ್ ಆದೇಶಿಸಿದೆ.

ಮುಂಬೈ (ಆ.13): ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತುಮ್‌ ಸೆ ತುಮ್‌ ತಕ್‌' ಧಾರಾವಾಹಿಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬನಿಗೆ ಬಾಂಬೆ ಹೈಕೋರ್ಟ್‌ ಛೀಮಾರಿ ಹಾಕಿದ್ದು, ಈ ದೂರು ಸಲ್ಲಿಸಿರುವ ವ್ಯಕ್ತಿಯ ಮುಂಬೈನ ಆಸ್ಪತ್ರೆಯ ಒಂದರಲ್ಲಿ ಸ್ವಚ್ಛತಾ ಕೆಲಸವನ್ನು ಮಾಡಲು ಆದೇಶ ನೀಡುವುದಾಗಿ ತಿಳಿಸಿದೆ. ಇತ್ತೀಚೆಗೆ ಜೀ ವಾಹಿನಿಯಲ್ಲಿ ಈ ಧಾರವಾಹಿ ಪ್ರಸಾರ ಆರಂಭವಾಗಿದೆ. 46 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಹುಡುಗಿಯ ಪ್ರೇಮಕಥೆಯ ಸುತ್ತ ಕಳೆ ಸುತ್ತುತ್ತದೆ. ಈ ಸೀರಿಯಲ್‌ನ ವಿರುದ್ಧ ವ್ಯಕ್ತಿಯೊಬ್ಬ ಎಫ್‌ಐಆರ್‌ ಹಾಕಿದ್ದ. ಈ ಎಫ್‌ಐಆರ್‌ಅನ್ನು ರದ್ದು ಮಾಡುವಂತೆ ಜೀ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಬಾಂಬೆ ಹೈಕೋರ್ಟ್‌ ಇತ್ಯರ್ಥ ಮಾಡಿದೆ.

ಧಾರವಾಹಿಯ ಕಥೆ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ದೂರುದಾರ ಹೇಳಿದ್ದ. ಅದರೊಂದಿಗೆ ಎಫ್‌ಐಆರ್‌ನಲ್ಲಿ ದೂರುದಾರ ತನ್ನ ನಿಜವಾದ ಗುರುತನ್ನು ಬಹಿರಂಗ ಮಾಡದೇ ಇದ್ದ ಕಾರಣಕ್ಕಾಗಿ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕಡ್ ಅವರ ವಿಭಾಗೀಯ ಪೀಠವು ದೂರುದಾರ ಸುನೀಲ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿತು.

ಸೀರಿಯಲ್‌ನಲ್ಲಿ ನಿಮಗೆ ಸಮಸ್ಯೆ ಏನು ಕಂಡಿದೆ? ನಿಮ್ಮ ಆಲೋಚನೆಯ ಪ್ರಕಾರವೇ ಮುಂದುವರಿದಲ್ಲಿ ಟಿವಿಯನ್ನು ನಾವು ಆಫ್‌ ಮಾಡಿಕೊಂಡು ಕುಳಿತುಕೊಳ್ಳಬೇಕಾಗು್ತದೆ. ಟಿವಿಯನ್ನು ಸ್ವಿಚ್‌ ಆಫ್‌ ಮಾಡಿ, ಸೀರಿಯಲ್‌ ನೋಡೋದನ್ನೇ ನಿಲ್ಲಿಸಿಬಿಡೋಣವೇ? 46 ವರ್ಷದ ವ್ಯಕ್ತಿ 19 ವರ್ಷದ ಹುಡುಗಿಯ ಪ್ರೀತಿಯಲ್ಲಿ ಬೀಳುತ್ತಾನೆ ಎನ್ನುವುದು ನಿಮ್ಮ ಭಾವನೆಗಳಿಗೆ ಹರ್ಟ್‌ ಮಾಡಿದೆ ಎಂದಿದ್ದೀರಿ. ಆದರೆ, ಈ ಶೋನಿಂದ ಯಾವುದೇ ಕೋಮು ಸೌಹಾರ್ದ ಹಾಳಾಗುತ್ತದೆಯೇ? ಎಂದು ಪ್ರಶ್ನೆ ಮಾಡಿದೆ. ಜಸ್ಟೀಸ್‌ ಲೋಧಾ ಅವರ ತೀರ್ಪು ಸ್ಪಷ್ಟವಾಗಿ ಹೇಳಿದೆ. ನೀವು ಯಾವುದಾದರೂ ಸಿನಿಮಾ ಅಥವಾ ಶೋಅನ್ನು ಇಷ್ಟಪಡದೇ ಇದ್ದಲ್ಲಿ, ಅದನ್ನು ನೋಡದೇ ಇರುವುದು ಒಳ್ಳೆಯದು ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ತಿಳಿಸಿದ್ದಾರೆ.

ದೂರುದಾರನಿಗೆ ಸ್ವಚ್ಛತಾ ಕಾರ್ಯದ ಶಿಕ್ಷೆ ನೀಡುತ್ತೇವೆ

ಅದರೊಂದಿಗೆ, ದೂರುದಾರನ ವರ್ತನೆಯ ಬಗ್ಗೆ ಪೀಠವು ಬೇಸರ ವ್ಯಕ್ತಪಡಿಸಿದೆ/ ಅವರು ಆರಂಭದಲ್ಲಿ ಸೈಬರ್ ಸೆಲ್‌ಗೆ ತಮ್ಮ ಹೆಸರನ್ನು 'ಸುನಿಲ್ ಶರ್ಮಾ' ಎಂದು ನೀಡಿದ್ದರು ಮತ್ತು ಕಳೆದ ತಿಂಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ಅವರು ತಮ್ಮ ಹೆಸರನ್ನು 'ಸುನಿಲ್ ಮಹೇಂದ್ರ ಶರ್ಮಾ' ಎಂದು ಹೇಳಿದ್ದರು, ಆದರೆ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳಲ್ಲಿ ಅವರ ಹೆಸರು 'ಮಹೇಂದ್ರ ಸಂಜಯ್ ಶರ್ಮಾ' ಎಂದಿದೆ.

ಶರ್ಮಾ ಪರ ಹಾಜರಿದ್ದ ವಕೀಲರು ಅವರ ನಡವಳಿಕೆಯನ್ನು 'ಸಮರ್ಥನೆ' ಮಾಡಿಕೊಳ್ಳುವಂತೆ ನ್ಯಾಯಾಧೀಶರು ಕೇಳಿದರು, ದೂರುದಾರರಿಗೆ ದೂರು ನೀಡುವ ಹಕ್ಕಿದೆ ಮತ್ತು ದೊಡ್ಡ ಮಾಧ್ಯಮ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿರುವುದರಿಂದ ಅವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಅವರು ದೂರಿನಲ್ಲಿ ಹೆಸರನ್ನು ಬದಲಾಯಿಸಿದ್ದಾರೆ ಎಂದು ವಾದಿಸಲಾಯಿತು.

ನಿಮ್ಮ ದೂರುದಾರನಲ್ಲಿಯೇ ಸಮಸ್ಯೆ ಇದೆ. ಕೋರ್ಟ್‌ ಆವರಣದಲ್ಲಿ ಈ ತಪ್ಪು ಮಾಡಿದ್ದಾರೆ.ಈತನೇ ವಿರುದ್ಧವೇ ಎಫ್‌ಐಆರ್‌ ದಾಖಲು ಮಾಡಲು ನಾವು ಪೊಲೀಸರಿಗೆ ಹೇಳಬಹುದು. ಆದರೆ, ಬೇರೊಬ್ಬನನ್ನು ಬಂಧಿಸುವಲ್ಲಿ ನಮಗೆ ಖುಷಿ ಸಿಗೋದಿಲ್ಲ.ಅದಲ್ಲದೆ, ಆರ್ಥರ್‌ ರೋಡ್‌ ಜೈಲು ಕೂಡ ಈಗಾಗಲೇ ಭರ್ತಿಯಾಗಿದೆ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ದೂರುದಾರರ ನಡವಳಿಕೆಯು ಅವರ ಕಡೆಯಿಂದ ದುಷ್ಕೃತ್ಯ ಮತ್ತು ದುರುದ್ದೇಶವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಪೀಠವು ಗಮನಿಸಿದೆ. ನಂತರ ಅಡ್ವೊಕೇಟ್ ಜನರಲ್ ಡಾ. ಬೀರೇಂದ್ರ ಸರಾಫ್ ಅವರ ಸಲಹೆಯ ಮೇರೆಗೆ ನ್ಯಾಯಾಧೀಶರು, ಶರ್ಮಾ ಅವರಿಗೆ ಕನಿಷ್ಠ ಒಂದು ತಿಂಗಳ ಕಾಲ ಸಮುದಾಯ ಸೇವೆ ಮಾಡಲು ಆದೇಶಿಸಬಹುದು ಎಂದು ಸೂಚಿಸಿದರು.