ನವದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆಯಾಗಿದ್ದು, ವಿಮಾನ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ, ವಿಮಾನವನ್ನು ಬೇಗನೆ ಇಳಿಸಿದ್ದಾರೆ. ಈ ಕಾರ್ಯಕ್ಕೆ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಕೆಲ ದಿನಗಳಿಂದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಬರೀ ನೆಗೆಟಿವ್ ವಿಚಾರಗಳ ಕಾರಣಕ್ಕೆ ನಿರಂತರ ಸುದ್ದಿಯಾಗಿತ್ತು. ವಿಮಾನದಲ್ಲಿ ಎಸಿ ಸರಿ ಇಲ್ಲ ಸೀಟುಗಳು ಸರಿ ಇಲ್ಲ, ವಿಮಾನ ವಿಳಂಬವಾದರೂ ಪ್ರಯಾಣಿಕರ ಬಗ್ಗೆ ಸರಿಯಾಗಿ ಕಾಳಜಿ ಮಾಡಿಲ್ಲ ಎಂದು ವಿಮಾನ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ದೂರಿಕೊಂಡಿದ್ದರು. ಆದರೆ ಈಗ ಪ್ರಯಾಣಿಕರೊಬ್ಬರು, ಮಧ್ಯ ಆಗಸದಲ್ಲಿ ಸಂಭವಿಸಿದ ವೈದ್ಯಕೀಯ ತುರ್ತು ಪರಿಸ್ಥಿತಿ ಹಾಗೂ ಅದನ್ನು ಏರ್ ಇಂಡಿಯಾ ವಿಮಾನಯಾನ ಸಿಬ್ಬಂದಿಯ ನಿರ್ವಹಿಸಿದ ರೀತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗಿದ್ದರೆ ವಿಮಾನದಲ್ಲಿ ನಡೆದಿದ್ದು ಏನು?
ನವದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೂ ಮಧ್ಯ ಆಗಸದಲ್ಲಿ ಹಾರುತ್ತಿದ್ದಾಗಲೇ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮಹಿಳೆಯೊಬ್ಬರ ಮೂಗಿನಿಂದ ನಿರಂತರ ರಕ್ತಸ್ರಾವ ಆಗಲು ಶುರುವಾಗಿದೆ. ಈ ವೇಳೆ ಧೃತಿಗೆಡದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿ ಕೂಡಲೇ ಜಾಗರೂಕಾಗಿ ಅಸ್ವಸ್ಥ ಮಹಿಳೆಯ ನೆರವಿಗೆ ಧಾವಿಸಿ ಬಂದಿದ್ದಾರೆ. ವಿಮಾನ ನಿಗದಿತ ಸಮಯಕ್ಕಿಂತ ಮೊದಲೇ ತುರ್ತು ಲ್ಯಾಂಡ್ ಆಗುವಂತೆ ಮಾಡಿದ್ದಲ್ಲದೇ ವಿಮಾನದಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ಕೆಲ ಅಮೂಲ್ಯ ಕ್ಷಣವನ್ನು ತುಂಬಾ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾರೆ.
ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ:
ಈ ಬಗ್ಗೆ ವಿಮಾನದಲ್ಲಿದ್ದ ಮಾರಿಯೋ ಡ ಪೆನ್ಹಾ(Mario da Penha)ಎಂಬ ಪ್ರಯಾಣಿಕರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ರಾತ್ರಿ ನವದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ನನ್ನ @airindia ವಿಮಾನ AI 2807 ಅತ್ಯಂತ ದುಃಖಕರವಾದ ವೈದ್ಯಕೀಯ ಪರಿಸ್ಥಿತಿಗೆ ಸಾಕ್ಷಿಯಾಯಿತು. ನನ್ನ ಹಿಂದಿನ ಸೀಟಿನಲ್ಲಿದ್ದ ಮಹಿಳೆಯೊಬ್ಬಳಿಗೆ ಮೂಗಿನ ಮೂಲಕ ನಿರಂತರವಾಗಿ ರಕ್ತಸ್ರಾವವಾಗಲು ಆರಂಭವಾಯ್ತು. ಈ ಆತಂಕದ ಕ್ಷಣವನ್ನು ವಿಮಾನ ಸಿಬ್ಬಂದಿ ಚೆನ್ನಾಗಿ ನಿರ್ವಹಿಸಿದರು, ರೋಗಿಗೆ ವೈದ್ಯಕೀಯವಾಗಿ ಚಿಕಿತ್ಸೆ ನೀಡಿದರು. ಸಂದರ್ಭದಲ್ಲಿ ಆತಂಕಗೊಳ್ಳದೇ ಎಲ್ಲದರಲ್ಲೂ ಸಮತೋಲನ ಮತ್ತು ಶಾಂತತೆಯನ್ನು ಕಾಯ್ದುಕೊಂಡರು.
ಈ ವೇಳೆ ವಿಮಾನ ಸಿಬ್ಬಂದಿ ಶಸ್ತ್ರಚಿಕಿತ್ಸೆ ವೇಳೆ ಬಳಸುವ ಕೈಗವಸುಗಳನ್ನು ಧರಿಸಿದ್ದರು ಮತ್ತು ಮಹಿಳೆಯ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಿಶೇಷ ಚೀಲದಲ್ಲಿ ಸಂಗ್ರಹಿಸಿದರು. ಹಾಗೆಯೇ ವಿಮಾನದ ಪೈಲಟ್‌ಗಳು ವಿಮಾನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಂಡರು, ಇದರಿಂದಾಗಿ ವೈದ್ಯರು ವಿಮಾನ ಲ್ಯಾಂಡ್ ಆದ ನಂತರ ಬೆಂಗಳೂರಿನಲ್ಲಿ ಅವಳನ್ನು ಪರೀಕ್ಷಿಸಲು ಸಾಧ್ಯವಾಯಿತು. ತಡವಾಗಿದ್ದರೂ, ಪ್ರಯಾಣಿಕರು ಸಹ ಸಹಕರಿಸಿದರು, ತಮ್ಮ ಆಸನಗಳಲ್ಲಿಯೇ ಇದ್ದರು ಮತ್ತು ವೈದ್ಯರು ತಮ್ಮ ಕೆಲಸವನ್ನು ಮಾಡಲು ಅವರಿಗೆ ಅವಕಾಶ ಮಾಡಿಕೊಟ್ಟರು. ವಿಮಾನಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ತಾಳ್ಮೆ ಮತ್ತು ಕೌಶಲ್ಯವನ್ನು ಬಳಸಲಾಗುತ್ತದೆ, ಅವುಗಳಲ್ಲಿ ಹೆಚ್ಚಿನವು ಕಾಣುವುದೇ ಇಲ್ಲ ಮತ್ತು ಹೆಚ್ಚಾಗಿ ಪ್ರಶಂಸಿಸುವುದು ಇಲ್ಲ.
ಹೀಗಾಗಿ ಏರ್ ಇಂಡಿಯಾ ಮತ್ತು @BLRAirport ಸಿಬ್ಬಂದಿ ಆ ರಾತ್ರಿಯ ಘಟನೆಯನ್ನು ನಿರ್ವಹಿಸಿದ ರೀತಿಗೆ ನನ್ನದೊಂದು ಸೆಲ್ಯೂಟ್ ಹಾಗೂ ಅವರ ಒಳ್ಳೆಯ ಕೆಲಸವನ್ನು ಗುರುತಿಸುವುದಕ್ಕಾಗಿ ಇದೊಂದು ಪೋಸ್ಟ್ ಎಂದು ಅವರು ಬರೆದುಕೊಂಡಿದ್ದು, ವಿಮಾನದಲ್ಲಿ ಅಸ್ವಸ್ಥಗೊಂಡ ಮಹಿಳೆ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮಾರಿಯೋ ಡ ಪೆನ್ಹಾ ಅವರ ಈ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಕ್ಷಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಸಿಬ್ಬಂದಿಗಳು ಕೂಡ ತ್ವರಿತವಾಗಿ ಅಷ್ಟೇ ಸೂಕ್ಷ್ಮವಾಗಿ ವರ್ತಿಸಿದ ರೀತಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ಏರ್ ಇಂಡಿಯಾ ವಿಮಾನ ಸಿಬ್ಬಂದಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ಕನ ಪ್ರೀತಿಸ್ತಿದ್ದವನ ಕೊಂದ ತಮ್ಮ: ಮತ್ತೊಂದೆಡೆ ಗರ್ಭಿಣಿ ಪತ್ನಿಯ ಕೊಂದು ಶವ ಪೀಸ್ ಪೀಸ್ ಮಾಡಿ ನದಿಗೆಸೆದ ಗಂಡ
ಇದನ್ನೂ ಓದಿ: ಗಂಡನಿಗೆ ಲಿವರ್ ನೀಡಿದ ಹೆಂಡತಿ: ಅಂಗಾಂಗ ಕಸಿ ಬಳಿಕ ಇಬ್ಬರೂ ಸಾವು: ಆಸ್ಪತ್ರೆಗೆ ನೊಟೀಸ್
