ಹಾಕಿ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಮಣಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿದೆ. ಜೊತೆಗೆ ಹಾಕಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.

ಪಾಟ್ನಾ (ಸೆ.07) ಭಾರತ ಹಾಗೂ ದಕ್ಷಿಣ ಕೊರಿಯಾ ನಡುವೆ ನಡೆದ ರೋಚಕ ಏಷ್ಯಾಕಪ್ ಹಾಕಿ ಫೈನಲ್ ಪಂದ್ಯ ಭಾರತೀಯ ಹಾಕಿ ಅಭಿಮಾನಿಗಳ ಮನತಣಿಸಿದೆ. 4-1 ಅಂತರದಲ್ಲಿ ದಕ್ಷಿಣ ಕೊರಿಯಾ ಮಣಿಸಿದ ಭಾರತ, ಏಷ್ಯಾಕಪ್ ಹಾಕಿ ಟ್ರೋಫಿ ಗೆದ್ದುಕೊಂಡಿದೆ.ಬಿಹಾರದ ರಾಜ್‌ಗಿರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿತ್ತು. ಆಕ್ರಮಣಕಾರಿ ಆಟದ ಮೂಲಕ ನಾಲ್ಕು ಗೋಲುಗಳಿಸಿತ್ತು. ಕೊರಿಯಾ ಕೇವಲ 1 ಗೋಲು ಗಳಿಸಿ ತೃಪ್ತಿಪಟ್ಟುಕೊಂಡಿತು. ಈ ಮೂಲಕ ಭಾರತ ನಾಲ್ಕನೇ ಭಾರಿಗೆ ಏಷ್ಯಾಕಪ್ ಹಾಕಿ ಟ್ರೋಫಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ಹಾಕಿ ವಿಶ್ವಕಪ್ ಟೂರ್ನಿಗೂ ಅರ್ಹತೆ ಪಡೆದುಕೊಂಡಿದೆ. ಇತ್ತ ಸೌತ್ ಕೊರಿಯಾ ಅರ್ಹತಾ ಸುತ್ತಿನ ಪಂದ್ಯ ಆಡಬೇಕಿದೆ.

31ನೇ ಸೆಕೆಂಡ್‌ನಲ್ಲಿ ಭಾರತದ ಗೋಲು ಖಾತೆ

4,000 ಸಾಮರ್ಥ್ಯದ ಹಾಕಿ ಕ್ರೀಡಾಂಗಣ ಭರ್ತಿಯಾಗಿತ್ತು. ಅಭಿಮಾನಿಗಳು ಚಪ್ಪಾಳೆಯ ನಡುವೆ ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯ ಆರಂಭಗೊಂಡ 31 ಸೆಕೆಂಡ್‌ನಲ್ಲಿ ಭಾರತ ಗೋಲು ಖಾತೆ ತೆರೆದಿತ್ತು. 28 ಹಾಗೂ 45ನೇ ನಿಮಿಷದಲ್ಲಿ ಮತ್ತೆರೆಡು ಗೋಲು ದಾಖಲಾಗಿತ್ತು. ಇನ್ನು 50ನೇ ನಿಮಿಷದಲ್ಲಿ ನಾಲ್ಕನೇ ಗೋಲು ಕೂಡ ದಾಖಲಾಗಿತ್ತು. ಈ ಮೂಲಕ ಭಾರತ ಆರಂಭದಲ್ಲೇ ಕೊರಿಯಾಗೆ ಶಾಕ್ ನೀಡಿತ್ತು.

ಸೋಲಿನ ಅಂತರ ಕಡಿಮೆ ಮಾಡಿದ ಸೌತ್ ಕೊರಿಯಾ

ಭಾರತ ನಾಲ್ಕನೇ ಗೋಲು ದಾಖಲಿಸಿ ಕೊಂಚ ರಿಲ್ಯಾಕ್ಸ್ ಮೂಡ್‌ಗೆ ಜಾರಿತ್ತು. ಇದೇ ಸಂದರ್ಭ ನೋಡಿದ ಸೌತ್ ಕೊರಿಯಾ ಒಂದು ಗೋಲು ಬಾರಿಸಿತ್ತು. ಅಷ್ಟರಲ್ಲೇ ಹಾಕಿ ಇಂಡಿಯಾ ಅಲರ್ಟ್ ಆಗಿತ್ತು. ಬಳಿಕ ಸೌತ್ ಕೊರಿಯಾಗೆ ಅವಕಾಶ ನೀಡಲಿಲ್ಲ. ಇತ್ತ ಸೌತ್ ಕೊರಿಯಾ 1 ಗೋಲು ಬಾರಿ ಸೋಲಿನ ಅಂತರ ಕಡಿಮೆ ಮಾಡಿಕೊಂಡಿತ್ತು. ಭಾರತದ ಆಕ್ರಮಣಕಾರಿ ಆಟಕ್ಕೆ ಕೊರಿಯಾ ಒತ್ತಡಕ್ಕೆ ಸಿಲುಕಿತ್ತು.

Scroll to load tweet…

ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ಲಗ್ಗೆ

ಏಷ್ಯಾಕಪ್ ಹಾಕಿಯಲ್ಲಿ ಭಾರತ ಅಭೂತಪೂರ್ವ ಗೆಲುವು ದಾಖಲಿಸಿದೆ. ಭರ್ಜರಿ 4-1 ಅಂತರದ ಗೆಲುವು ದಾಖಲಿಸಿ ಹಾಕಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಭಾರತದ ಐತಿಹಾಸಿಕ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಕಿ ಮಾಜಿ ಆಟಗಾರರು ಸೇರಿದಂತೆ ಹಲವು ಸೆಲೆಬ್ರೆಟಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಭಾರತ ಚಾಂಪಿಯನ್

  • 2003: ಚಾಂಪಿಯನ್
  • 2007: ಚಾಂಪಿಯನ್
  • 2017: ಚಾಂಪಿಯನ್
  • 2025: ಚಾಂಪಿಯನ್

ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ಹಾಕಿಯಲ್ಲಿ ಏಷ್ಯಾಕಪ್ ಚಾಂಪಿಯನ್ ಕಿರೀಟ ಗೆದ್ದುಕೊಂಡಿದೆ. ಈ ಮೂಕ ಭಾರತದ ಹಾಕಿ ಗತವೈಭವ ಮರುಕಳಿಸುತ್ತಿದೆ. ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಸೌತ್ ಕೊರಿಯಾ ಭಾರತಕ್ಕಿಂತ ಹೆಚ್ಚು ಅಂದರೆ 5 ಬಾರಿ ಚಾಂಪಿಯನ್ ಆಗಿದೆ. ಹೀಗಾಗಿ ಇಂದಿನ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು.