ಹೆಂಗಳೆಯರೇ ಕೇಳಿ.. ಮುಖದ ಮೇಲಿನ ಕಪ್ಪು ಕಲೆಗೆ ಮೊಬೈಲ್, ಕಂಪ್ಯೂಟರ್ ಕಾರಣವಂತೆ!
ಮುಖದ ಅಂದ ಕಾಪಾಡಿಕೊಳ್ಳುವುದು ಹೆಂಗಳೆಯರಿಗೆ ದೊಡ್ಡ ತಲೆನೋವು. ಚರ್ಮದ ವಿಚಾರದಲ್ಲಿ ಒಂದಲ್ಲ, ಒಂದು ಸಮಸ್ಯೆಯನ್ನು ಹೆಣ್ಣು ಮಕ್ಕಳು ಅನುಭವಿಸುತ್ತಾರೆ. ಅದರಲ್ಲೂ ಕಲೆ ರಹಿತ ಚರ್ಮ ಪಡೆಯಲು ಹವಣಿಸುತ್ತಾರೆ. ಮುಖದ ಮೇಲಿನ ಕಲೆಯಾಗದಂತೆ ಅಥವಾ ಇರೋ ಕಲೆ ಹೋಗಿಸಲು ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಆದರೆ ಮುಖದಲ್ಲಿ ಇನ್ನೂ ಸಣ್ಣ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಕಪ್ಪು ಕಲೆಗಳನ್ನು ತೆಗೆದು ಹಾಕಲು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ.
ಚರ್ಮಕ್ಕಾಗಿ ಏನೆಲ್ಲಾ ಮಾಡಿದರೂ ಕಪ್ಪು ಕಲೆಗಳಿಂದ ಮುಕ್ತಿ ಪಡೆಯುವುದು ಸುಲಭವಲ್ಲ. ಆದ್ದರಿಂದ, ಕಪ್ಪು ಕಲೆಗೆ ಕಾರಣವೇನೆಂದು ತಿಳಿಯುವುದು ಇಲ್ಲಿ ಪ್ರಮುಖ. ಕಪ್ಪು ಕಲೆಗಳ ಬಗ್ಗೆ ಮಾಹಿತಿ ಇದ್ದಾಗ ಅವುಗಳು ಬರದಂತೆ ತಪ್ಪಿಸಬಹುದು.
ಮೆಲನಿನ್ ಎಂಬ ವರ್ಣದ್ರವ್ಯದಿಂದ ಚರ್ಮ ತನ್ನ ನೈಸರ್ಗಿಕ ಬಣ್ಣವನ್ನು ಪಡೆಯುತ್ತದೆ. ಹಾರ್ಮೋನ್ ಏರಿಳಿತಗಳು, ಔಷಧಗಳು, ಸೂರ್ಯನ ಪ್ರಭಾವ ಮೆಲನಿನ್ ಉತ್ಪಾದನೆಯಲ್ಲಿ ಬದಲಾವಣೆ ಉಂಟುಮಾಡಬಹುದು, ವಿಶೇಷವಾಗಿ ಮುಖದ ಮೇಲೆ. ಇದು ಹೈಪರ್ಪಿಗ್ಮೆಂಟೇಶನ್ ಕಲೆಗಳನ್ನು ಉಂಟುಮಾಡುತ್ತದೆ.
ಹಾಗಾದರೇ ಚರ್ಮದ ಮೇಲಿನ ಕಪ್ಪು ಕಲೆಗಳಿಗೆ ಕಾರಣವೇನು?
ಹೆಚ್ಚು ಕಂಪ್ಯೂಟರ್ ಬಳಕೆ: ಮೊಬೈಲ್ ಪರದೆ, ಲ್ಯಾಪ್ ಟಾಪ್ ಮತ್ತು ಟಿವಿ ಮುಂದೆ ಇದ್ದರೆ, ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಬೆಳಕನ್ನು ದೀರ್ಘಕಾಲದವರೆಗೆ ಒಡ್ಡುವುದು ಚರ್ಮದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಹಲವು ಸಮಸ್ಯೆ ಕಾಡುತ್ತದೆ.
ಚರ್ಮದ ಮೇಲೆ ಹೈಪರ್ಪಿಗ್ಮೆಂಟೇಶನ್ ಕಲೆಗಳನ್ನು ಗಮನಿಸಿರಬಹುದು. ಆ ಕಲೆಗಳಿಗೆ ಹೆಚ್ಚು ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯೂ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಮನೆಯಲ್ಲಿ SPF ನೊಂದಿಗೆ ಲೋಷನ್ ಬಳಸಿ.
ಅತಿಯಾಗಿ ಸತ್ತ ಚರ್ಮ ತೆಗೆಯುವುದು: ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಎಫ್ಫೋಲಿಯೇಟ್ ಮಾಡುವುದು ಎಂದು ಕರೆಯಲಾಗುತ್ತದೆ. ಅತಿಯಾದ ಸಿಪ್ಪೆ ತೆಗೆಯುವುದು ಅಥವಾ ಸತ್ತ ಚರ್ಮ ತೆಗೆಯುವುದು ಹೈಪರ್ಪಿಗ್ಮೆಂಟೇಶನಿಗೆ ಕಾರಣವಾಗಬಹುದು ಮತ್ತು ಮುಖದ ಚರ್ಮವನ್ನು ಹಾನಿ ಮಾಡುತ್ತದೆ.
ಮೊಡವೆಗಳನ್ನು ಮುಟ್ಟುವುದು: ಜನರು ತಮ್ಮ ಮುಖದ ಮೇಲೆ ಮೊಡವೆ ಆದಾಗ ಅದನ್ನು ಪದೇ ಪದೇ ಮುಟ್ಟುವುದನ್ನು ಸಾಮಾನ್ಯವಾಗಿ ಗಮನಿಸಬಹುದು. ಈ ಅಭ್ಯಾಸ ಚರ್ಮಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಮತ್ತು ಮುಖದ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ.ಹಾಗಾಗಿ ಮೊಡವೆಗಳನ್ನು ಮುಟ್ಟದೇ ಅದಕ್ಕೆ ಮನೆ ಮದ್ದು ಮಾಡಿ, ಇಲ್ಲದಿದ್ದರೆ ಹಾಗೆಯೇ ಬಿಡಿ.
ಸನ್ ಸ್ಕ್ರೀನ್ ಹಚ್ಚದಿರುವುದು: ಬಿಸಿಲಿನಲ್ಲಿ ಹೋಗುವುದು ಸಾಮಾನ್ಯ. ಆದರೆ ಹೋಗುವಾಗ ಮಾತ್ರ ಸನ್ಸ್ ಸ್ಕ್ರೀನ್ ಬಳಸಬೇಕು ಎಂಬ ತಪ್ಪು ಕಲ್ಪನೆ ಇದೆ. ಮನೆಯಲ್ಲಿ ಇದ್ದಾಗ ಸಹ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಇದು ಮಾತ್ರವಲ್ಲ, 3-4 ಗಂಟೆಗಳಲ್ಲಿ ಸನ್ಸ್ಕ್ರೀನ್ ಅನ್ನು ಪುನಃ ಹಚ್ಚಿಕೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ವಿಶೇಷವಾಗಿ ಕಣ್ಣುಗಳ ಕೆಳಗೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಚರ್ಮದ ಮೇಲಿನ ಪದರವನ್ನು ಬಿಸಿಲಿನ ತಾಪದಿಂದ ರಕ್ಷಿಸಬಹುದು.
ಮಲಗುವ ಮುನ್ನ ಸರಿಯಾಗಿ ಮುಖ ತೊಳೆಯದಿರುವುದು: ಮಲಗುವ ಮುನ್ನ ಅನೇಕ ಜನರು ಸರಿಯಾಗಿ ಮುಖ ತೊಳೆಯುವುದಿಲ್ಲ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಅದು ಚರ್ಮದ ಹಾನಿಗೆ ಕಾರಣವಾಗುತ್ತದೆ. ಚಿಕ್ಕ ಕೊಳಕು ಕಣಗಳು ಚರ್ಮಕ್ಕೆ ಅಂಟಿಕೊಂಡಿರುತ್ತದೆ ಹಾಗಾಗಿ ಹೈಪರ್ಪಿಗ್ಮೆಂಟೇಶನ್ ಉಂಟುಮಾಡುತ್ತವೆ. ಆರೋಗ್ಯಕರ ಚರ್ಮಕ್ಕಾಗಿ ಮಲಗುವ ಮುನ್ನ ಪ್ರತಿಯೊಬ್ಬರು ತಮ್ಮ ಮುಖವನ್ನು ಸರಿಯಾಗಿ ತೊಳೆಯಬೇಕು.