ಅಮ್ಮ ಸುಧಾ ಮೂರ್ತಿ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿಸಿದ ಅಕ್ಷತಾ ಮೂರ್ತಿ
ಸುಧಾ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಅಮ್ಮನ ಜೊತೆಗೆ ಫೋಟೊ ಶೂಟ್ ಮಾಡಿಸಿ, ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇನ್ಪೋಸಿಸ್ ನಂತಹ (Infosys) ಬೃಹತ್ ಸಂಸ್ಥೆಯ ಒಡೆತಿಯಾದರೂ, ಕೋಟ್ಯಾಂತರ ಮೌಲ್ಯದ ಆಸ್ತಿ ಹೊಂದಿದ್ದರೂ,ದೇಶ ಕಂಡ ಸರಳ ಸಜ್ಜನಿಕೆಯ ಮೂರ್ತಿ, ಬರಹಗಾರ್ತಿ, ಸಮಾಜ ಸೇವಕಿ ಅಂದರೆ ಅದು ಸುಧಾ ಮೂರ್ತಿ (Sudha Murthy). ಸದಾ ಸರಳವಾಗಿ ಸೀರೆಯುಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು, ಹೂ ನಗು ಚೆಲ್ಲುತ್ತಾ ಓಡಾಡುವ ಸುಧಾ ಮೂರ್ತಿ ಎಂದರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.
ನಾವೆಷ್ಟು ಜೀವನದಲ್ಲಿ ಸರಳತೆ ರೂಢಿಸಿಕೊಳ್ಳುತ್ತೇವೋ ಅಷ್ಟೇ ನಮ್ರತೆಯನ್ನೂ ಕಲಿತು ಬಿಟ್ಟರೆ ಮಾನಸಿಕ ದೃಢತೆ ಸಾಧಿಸೋದು ಸುಲಭ. ಲೌಕಿಕ ವಸ್ತುಗಳೆಡೆಗೆ ಒಂದು ರೀತಿಯ ವಿಕರ್ಷಣೆ ಇದ್ದರೆ ಬದುಕು ಒಂದೇ ರೀತಿಯಲ್ಲಿ ಇರುತ್ತದೆ. ಪ್ರಕೃತಿಯೊಂದಿಗೆ ನಂಟು ಬೆಳೆಸಿಕೊಂಡು, ಇನ್ನೊಬ್ಬರಿಗೆ ಸಹಾಯ ಮಾಡ್ಕೊಂಡು ಜೀವನ ನಡೆಸುವಷ್ಟು ಸುಖ ಮತ್ಯಾವುದರಲ್ಲಿಯೂ ಇಲ್ಲ ಎನ್ನುವ ಸುಧಾ ಮೂರ್ತಿ ತಮ್ಮ ಮಕ್ಕಳಿಗೂ ಅದನ್ನೇ ಕಲಿಸಿದ್ದಾರೆ.
ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಹಿರಿಯ ಮಗಳು ಅಕ್ಷತಾ ಮೂರ್ತಿ (Akshatha Murthy) ನಿಮಗೆ ಗೊತ್ತೇ ಇದೆ. ಬ್ರಿಟನ್ ಪ್ರಧಾನಿಯಾಗಿದ್ದ ರಿಷಿ ಸನಕ್ ಅವರನ್ನು ಪ್ರೀತಿಸಿ ಮದುವೆಯಾಗಿ, ಗಂಡನಿಗೆ ಬೆನ್ನೆಲುಬಾಗಿ ನಿಂತ ಅಕ್ಷತಾ, ಜೀವನ ಮೌಲ್ಯಗಳನ್ನು, ಜೀವನ ಪಾಠಗಳನ್ನು ಕಲಿತದ್ದು ತಮ್ಮ ತಾಯಿ ಸುಧಾ ಮೂರ್ತಿಯವರಿಂದಲೇ.
ಅಕ್ಷತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಮ್ಮನ ಜೊತೆಗೆ ಫೋಟೊ ಶೂಟ್ ಮಾಡಿಸಿ, ಹಂಚಿಕೊಂಡಿದ್ದು, ಈ ಫೋಟೋಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಉನ್ನತ ಸ್ಥಾನದಲ್ಲಿದ್ದರೂ ಕೂಡ ತಾಯಿ ಮತ್ತು ಮಗಳ ಸರಳತೆಯನ್ನು ನೋಡಿ ಜನ ಮೆಚ್ಚಿದ್ದು, ಶುಭ ಹಾರೈಸಿದ್ದಾರೆ.
ಸುಧಾ ಮೂರ್ತಿ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿರುವ ಅಕ್ಷತಾ ತಾಯಿ-ಮಗಳ ಸಂಬಂಧ ವಿಶೇಷವಾದದ್ದು. ನಾನು ನನ್ನ ಅಮ್ಮನಿಂದ ಕಲಿಯುವುದನ್ನು ಮುಂದುವರಿಸುತ್ತೇನೆ ಮತ್ತು ಅದೇ ಮೌಲ್ಯಗಳನ್ನು ನನ್ನ ಮಕ್ಕಳಿಗೆ ರವಾನಿಸಬೇಕೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. (The mother-daughter relationship is a special one. I continue to learn from my mum and hope for those same values being passed on to my girls )
ಅಕ್ಷತಾ ಮೂರ್ತಿ ಅಮ್ಮನ ಜೊತೆಗಿನ ಬಾಲ್ಯದ ಸುಂದರವಾದ ಫೋಟೋ ಹಾಗೂ ಅಮ್ಮನ ಜೊತೆ ಅಮೇರಿಕಾದಲ್ಲಿ ವಾಕ್ ಮಾಡುತ್ತಾ, ಮಾತನಾಡುತ್ತಾ, ಮುದ್ದಿನ ನಾಯಿ ಜೊತೆ ಆಟವಾಡುತ್ತಾ, ಇರುವಂತಹ ವಿಡೀಯೋ ಕೂಡ ಹಂಚಿಕೊಂಡಿದ್ದಾರೆ. ಈ ಅಮ್ಮ ಮಗಳ ಜೋಡಿ ತುಂಬಾನೆ ಮುದ್ದಾಗಿದೆ ಅಲ್ವಾ? ಏನಂತೀರಾ ನೀವು?