ಆಸ್ತಿಗಾಗಿ ಗದ್ದೆಯಲ್ಲಿ ಮಗಳನ್ನು ಬೀಳಿಸಿ, ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ; ವಿಡಿಯೋ ವೈರಲ್
ಮಂಡ್ಯ ಜಿಲ್ಲೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲತಾಯಿಯೊಬ್ಬಳು ಮಲಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಂಡ್ಯ (ಆ.25): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಡಿ. ಮಲ್ಲಿಗೆರೆ ಗ್ರಾಮದಲ್ಲಿ ಮಲತಾಯಿಯೊಬ್ಬಳು ತನ್ನ ಮಲಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ:
ಮೃತನ ತಂದೆಯ ಆಸ್ತಿಯ ವಿಚಾರದಲ್ಲಿ ಮೊದಲ ಪತ್ನಿಯ ಮಗಳಾದ ರೋಜಾ ಮೇಲೆ ಮಲತಾಯಿ ಭಾಗ್ಯ ಹಲ್ಲೆ ನಡೆಸಿದ್ದಾರೆ. ಈ ಇಬ್ಬರ ನಡುವೆ ಜಮೀನಿನ ಜಾಗದ ಕುರಿತು ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ಹೋಗಿ ಜಗಳವಾಗಿದೆ.
ಕೋಪಗೊಂಡ ಭಾಗ್ಯ, ರೋಜಾಳನ್ನು ಕೆಸರು ಗದ್ದೆಯಲ್ಲಿ ತಳ್ಳಿ ಎದೆ ಮೇಲೆ ಕುಳಿತು ಹಲ್ಲೆ ನಡೆಸಿದ್ದಾರೆ. ರೋಜಾ ಕಿರುಚಾಡಿದರೂ ಭಾಗ್ಯ ಮನಸ್ಸು ಕರಗಿಸದೆ ಕ್ರೂರವಾಗಿ ಹಲ್ಲೆ ಮುಂದುವರೆಸಿದ್ದಾರೆ. ಕೆಸರಿನಲ್ಲಿಯೇ ತನ್ನ ಮಲಮಗಳನ್ನು ಹೂತು ಹಾಕುವ ಯತ್ನವನ್ನು ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ವೈರಲ್ ಆದ ವಿಡಿಯೋ:
ಘಟನೆಯನ್ನು ಸ್ಥಳದಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಲತಾಯಿ ಭಾಗ್ಯ, ಗಂಡನ ಮೊದಲ ಹೆಂಡತಿಯ ಮಗಳು ರೋಜಾಳನ್ನು ಕೆಸರಿನಲ್ಲಿ ಕೆಡವಿ, ಕೂದಲು ಹಿಡಿದು ಎಳೆದು, ಎದೆ ಮೇಲೆ ಕುಳಿತು ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ದೃಶ್ಯವನ್ನು ಕಂಡ ಅನೇಕರು ಭಾಗ್ಯಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪೊಲೀಸ್ ದೂರು ಮತ್ತು ಕ್ರಮ:
ಈ ಘಟನೆಯ ನಂತರ, ಹಲ್ಲೆಗೊಳಗಾದ ರೋಜಾ ತನ್ನ ಮಲತಾಯಿ ಭಾಗ್ಯ ವಿರುದ್ಧ ಕೊಪ್ಪ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಆಸ್ತಿ ಕಲಹದಂತಹ ಕೌಟುಂಬಿಕ ವಿವಾದಗಳು ಹಿಂಸೆಗೆ ತಿರುಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಪ್ರಕರಣ ಸಮಾಜದಲ್ಲಿನ ಆಸ್ತಿ ಸಂಬಂಧಿತ ವಿವಾದಗಳು ಮತ್ತು ಕುಟುಂಬದೊಳಗಿನ ಸಂಬಂಧಗಳ ಬಿರುಕನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.