ಕರುನಾಡಿನ ಗೃಹಲಕ್ಷ್ಮೀಯರಿಗೆ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಯಲ್ಲಿ ತಿಳಿಸಿದ್ದಾರೆ. ಫಲಾನುಭವಿಗಳ ಖಾತೆಗೆ ಶೀಘ್ರದಲ್ಲೇ ಹಣ ಜಮೆಯಾಗಲಿದೆ. ಗಣೇಶ ಚತುರ್ಥಿ ಒಳಗೆ ಜುಲೈ ತಿಂಗಳ ಹಣ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮಿಯ ಹಣ ಜೂನ್ ಜುಲೈ ತಿಂಗಳಿನದ್ದು ಬಿಡುಗಡೆಯಾಗಿರಲಿಲ್ಲ. ಈಗ ಆ ಹಣವನ್ನ ಬಿಡುಗಡೆ ಮಾಡಿ ಉಡುಪಿಗೆ ಬಂದಿದ್ದೇನೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಹಣ ಬಿಡುಗಡೆಯಾಗಿ ಸರಿಸುಮಾರು ಐದು ಆರು ದಿನಗಳು ಕಳೆದಿವೆ. ಶೀಘ್ರದಲ್ಲಿಯೇ ಎಲ್ಲಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಲಿದೆ. ಜೂನ್ ತಿಂಗಳಿನ ಬಾಕಿ ಹಣ ಸಂದಾಯವಾಗಿದೆ ಜುಲೈ ಹಣ ಕೆಲವೇ ದಿನಗಳಲ್ಲಿ ಖಾತೆಗೆ ಬರಲಿದೆ. ಮುಂದಿನ ಗಣೇಶ ಚತುರ್ಥಿಯ ಒಳಗೆ ಗೃಹಲಕ್ಷ್ಮಿಯ ಜುಲೈ ಹಣ ಬಿಡುಗಡೆ ಮಾಡಬೇಕೆನ್ನುವ ಆಸೆ ಇದೆ ಎಂದು ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಹೇಳಿದರು.
ಇದೇ ವೇಳೆ ನಟ ದರ್ಶನ & ಗ್ಯಾಂಗ್‌ನ ಏಳು ಜನ ಅರೋಪಿಗಳಿಗೆ ಕೋರ್ಟ್ ಜಾಮೀನು ರದ್ದುಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನ್ಯಾಯಾಲಯ ತೀರ್ಪು ಕೊಟ್ಟ ನಂತರ ನಾವೆಲ್ಲರೂ ಅದಕ್ಕೆ ತಲೆಬಾಗಲೇಬೇಕು.ಸಂವಿಧಾನದಲ್ಲಿ ವಿಶ್ವಾಸ ಇರಿಸಿಕೊಂಡಿರುವ ನಾವೆಲ್ಲರೂ ತೀರ್ಪಿಗೆ ತಲೆಬಾಗಲೇಬೇಕು ಎಂದರು
ಇನ್ನು ಮಾಜಿ ಸಚಿವ ಕೆ.ಎನ್.ರಾಜಣ್ಣ ಪುತ್ರನಿಗೆ ಸಚಿವ ಸ್ಥಾನ ನೀಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಆದ್ರೆ ನಮ್ಮದು ಹೈಕಮಾಂಡ್ ಇರುವ ಪಕ್ಷ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತವೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದೇ ಫೈನಲ್ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 5 ಗ್ಯಾರಂಟಿಗಳನ್ನು ಜಾರಿಗೆ ತಂದಿತ್ತು. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಲಾಗುತ್ತದೆ.