ಹೊಸ ಹೆಲಿಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ!
ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಹಳೆಯ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಮಾರಾಟ ಮಾಡಿ, ಜರ್ಮನಿಯ ಅಗಸ್ಟಾ ಕಂಪೆನಿಯಿಂದ ಆಧುನಿಕ ಡಬಲ್ ಇಂಜಿನ್ ಹೆಲಿಕಾಪ್ಟರ್ ಖರೀದಿಸಿದ್ದಾರೆ.

ಹೊಸ ಹೆಲಿಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು, ಸೆಪ್ಟೆಂಬರ್ 19, 2025: ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಹಳೆಯ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಮಾರಾಟ ಮಾಡಿ, ಜರ್ಮನಿಯ ಅಗಸ್ಟಾ ಕಂಪೆನಿಯಿಂದ ಆಧುನಿಕ ಡಬಲ್ ಇಂಜಿನ್ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಈ ಹೊಸ ಹೆಲಿಕಾಪ್ಟರ್‌ನ ಪರಿಶೀಲನೆಯನ್ನು ಬೆಂಗಳೂರಿನ ಜಕ್ಕೂರು ಏರೋಡ್ರೋಮ್‌ನಲ್ಲಿ ನಡೆಸಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು 2028ರ ವಿಧಾನಸಭೆ ಚುನಾವಣೆಗೆ ಸಿದ್ಧತೆಗಾಗಿ ಈ ಹೆಲಿಕಾಪ್ಟರ್ ಖರೀದಿಸಲಾಗಿದೆ ಎಂಬ ಮಾತುಗಳಿವೆ.
ಆಧುನಿಕ ಸುರಕ್ಷತೆಯ ವಿಶೇಷ ಹೆಲಿಕಾಪ್ಟರ್
ಈ ಡಬಲ್ ಇಂಜಿನ್ ಹೆಲಿಕಾಪ್ಟರ್ ಆಧುನಿಕ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದ್ದು, ಐವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ಪ್ರಯಾಣಿಸಬಹುದಾಗಿದೆ. ಚಾಪರ್ ಸೀಟ್ ಸೌಲಭ್ಯವಿರುವ ಈ ಹೆಲಿಕಾಪ್ಟರ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುತ್ತದೆ. ಇದರ ಜೊತೆಗೆ, ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನೂ ಹೊಂದಿದೆ.
ಸತೀಶ್ ಜಾರಕಿಹೊಳಿ ಅವರು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ, ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದು, “ಶೀಘ್ರವೇ ನಮ್ಮ ಹೊಸ ಹೆಲಿಕಾಪ್ಟರ್ ಹಾರಾಟಕ್ಕೆ ಸಿದ್ಧವಾಗಲಿದೆ,” ಎಂದು ಬರೆದಿದ್ದಾರೆ. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನಮಣ್ಣರ ಮತ್ತು ಅಲಿ ಗೊರವನಕೊಳ್ಳ ಉಪಸ್ಥಿತರಿದ್ದರು.
ಹೆಲಿಕಾಪ್ಟರ್ ಖರೀದಿಸಿದ ಉತ್ತರ ಕರ್ನಾಟಕ ಮೊದಲ ರಾಜಕಾರಣಿ
ಜಾರಕಿಹೊಳಿ ಉತ್ತರ ಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಅಹಿಂದ ನಾಯಕರಾಗಿ ಗುರುತಿಸಿಕೊಂಡಿರುವ ಅವರು, 2028ರ ಚುನಾ ವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈಗಿನಿಂದಲೇ ಪಕ್ಷ ಸಂಘಟನೆಗೆ ತಯಾರಿ?
ಈ ಖರೀದಿಯು ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸತೀಶ್ ಜಾರಕಿಹೊಳಿ ಅವರ ಈ ಕ್ರಮವನ್ನು ಕೆಲವರು ರಾಜಕೀಯ ತಂತ್ರಗಾರಿಕೆಯಾಗಿ, ಮತ್ತೆ ಕೆಲವರು ಪಕ್ಷ ಸಂಘಟನೆಗೆ ತಯಾರಿಯಾಗಿ ನೋಡುತ್ತಿದ್ದಾರೆ.