ಚಿಕ್ಕಮಗಳೂರು: ಕಳಪೆ ಬೀಜ ಮಾರಾಟ; ಬಿತ್ತನೆ ಮಾಡಿದ ರೈತನ ಬದುಕು ಮೂರಾಬಟ್ಟೆ!
ಸಾಲ ಮಾಡಿ ಕಲ್ಲಂಗಡಿ ಬೆಳೆದ ರೈತ ಕಣ್ಣೀರು ಹಾಕುವ ಪರಿಸ್ಥಿತಿ ಚಿಕ್ಕಮಗಳೂರು ಬಯಲುಸೀಮೆ ಭಾಗದಲ್ಲಿ ಎದುರಾಗಿದೆ.ಬಯಲುಸೀಮೆಭಾಗವಾದ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ನಾಗರಾಳ ಗ್ರಾಮದ ರೈತ ಗುರುಶಾಂತಪ್ಪ ಕಲ್ಲಂಗಡಿ ಬೆಳೆದು ಸಂಕಷ್ಟಕ್ಕೆ ಒಳಾಗಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಇದ್ದ ಎರಡು ವರೆ ಎಕರೆಯಲ್ಲಿ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ರು. ಕಲ್ಲಂಗಡಿ ಬೆಳೆ 60 ದಿನಗಳ ಕಾಲ ಅಕ್ಕಪಕ್ಕದ ಜಮೀನಿಗಿಂತ ಹುಲುಸಾಗಿ, ಸಲೀಸಾಗಿ ಬೆಳೆದಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬಳ್ಳಿಯಲ್ಲಿ ಗಿಡದ ತುಂಬಾ ಹೂ. ಆ ರೈತ ಕೂಡ ಹಾಕಿದ ಹಣಕ್ಕೆ ಮೋಸ ಇಲ್ಲ ಎಂದೇ ಭಾವಿಸಿದ್ದ. ಆದ್ರೆ, ಹೂವಾದ ಕಲ್ಲಂಗಡಿ ಕಾಯಾಗಲೇ ಇಲ್ಲ. ವಿಜ್ಞಾನಿಗಳು ಸ್ಥಳಕ್ಕೆ ಬಂದು ನೋಡಿದಾಗ ಕನ್ಫರ್ಮ್ ಆಯ್ತು. ಅದು ನಕಲಿ ಬೀಜ ಅಂತ. ರೈತನಿಗೆ ಒಂದೇ ಕ್ಷಣಕ್ಕೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ
ಬೀಜದ ಕಂಪನಿ ವಿರುದ್ಧ ಆಕ್ರೋಶ
ಕಡೂರು ಪಟ್ಟಣದ ಓಂಕಾರೇಶ್ವರ ಅಂಗಡಿಯಿಂದ ಓಡೋಪಸ್ ಕಲ್ಲಂಗಡಿ ಬೀಜವನ್ನ ತಂದು ಉಳುಮೆ ಮಾಡಿದ್ದರು. ರೈತ ಗುರುಶಾಂತಪ್ಪ ಸುಪ್ರಿತಾ ಹೆಸರಿನ ಬೀಜ ತರಲು ಹೋಗಿದ್ದರು. ಆದರೆ, ಅಂಗಡಿ ಮಾಲೀಕ ಓಡೋಪಸ್ ತೆಗೆದುಕೊಳ್ಳಿ ತುಂಬಾ ಚೆನ್ನಾಗಿದೆ. ಕಲ್ಲಂಗಡಿ 18-20 ಕೆಜಿ ಬರುತ್ತೆ ಎಂದು ಹೇಳಿ ಕೊಟ್ಟಿದ್ದರು. ಆದರೆ, ತಂದು ನೆಟ್ಟು ಗೊಬ್ಬರ, ನೀರು, ಔಷಧಿ ಸಿಂಪಡಿಸಿದ ಬಳಿಕ ಸಮೃದ್ಧವಾಗಿ ಬೆಳೆದಿತ್ತು. ಹೂವು ಆಗಿತ್ತು. ಆದರೆ, ಹೂವು ಕಾಯಾಗದೆ 4 ಲಕ್ಷದ 30 ಸಾವಿರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದೀಗ, ನೊಂದ ರೈತ ಸರ್ಕಾರ, ಗೊಬ್ಬರ ವ್ಯಾಪಾರಿ, ಬೀಜದ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಡಿಸಿ ಕಚೇರಿ ಮುಂಭಾಗ ಪ್ರತಿಭಟನೆಯ ಎಚ್ಚರಿಕೆ :
ರೈತರ ಹೊಲಕ್ಕೆ ಭೇಟಿ ನೀಡಿದ ವಿಜ್ಞಾನಿಗಳು ಕಳಪೆ ಬೀಜ. ಗಂಡು ಬೀಜ. ಹೂವಾಗಿದೆ, ಕಾಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ, ರೈತರ ಹೊಲಕ್ಕೆ ಭೇಟಿ ನೀಡ್ತಿರೊ ರೈತ ಮುಖಂಡರು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ರೈತರ ಆಕ್ರೋಶ
ಸಾವಿರಾರು ರೂಪಾಯಿ ಹಣ ನೀಡಿ ಬೀಜ ತಂದು, ಗೊಬ್ಬರ ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರು ಬೆಳೆ ಈ ರೀತಿಯಾದ್ರೆ ರೈತ ಏನು ಮಾಡಬೇಕು. ಅತಿವೃಷ್ಟಿ-ಅನಾವೃಷ್ಟಿಯಾದ್ರೆ ಹಣೆಬರಹ ಎಂದು ಸುಮ್ಮನಾಗಬಹುದು. ಆದ್ರೆ, ರೈತರ ಮೇಲೆ ಸರ್ಕಾರ ಹಾಗೂ ಬೀಜದ ಕಂಪನಿಗಳು ಈ ರೀತಿ ಸವಾರಿ ಮಾಡಿದರೆ ಏನಾಗಬೇಕು. ಅನ್ನ ನೀಡುವ ಕೈ ಮಣ್ಣಾಗಲಿದೆ. ಕೂಡಲೇ ಸರ್ಕಾರ ಕುಲಾಂತರಿ ಬೀಜಗಳ ಬಗ್ಗೆ ಎಚ್ಚರ ವಹಿಸಬೇಕು. ನಷ್ಟದಿಂದ ಕಣ್ಣೀರಿಡ್ತಿರೋ ರೈತನಿಗೆ ಸರ್ಕಾರ, ಕಂಪನಿ, ಏಜೆನ್ಸ್ ಹಾಗೂ ಮಾರಾಟಗಾರರಿಂದ ನಷ್ಟ ಭರಿಸಿಕೊಡಬೇಕು. ಇಲ್ಲವಾದರೆ, ಜಿಲ್ಲಾಧಿಕಾರಿ ಕಚೇರಿ ಬಳಿಕ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾಫಿನಾಡು ರೈತರ ಪರಿಸ್ಥಿತಿ
ಒಟ್ಟಾರೆ, ಈಗ್ಲೇ ಹೊಲಗದ್ದೆ-ತೋಟಗಳಲ್ಲಿ ಕೆಲಸ ಮಾಡೋದಕ್ಕೆ ಜನ ಸಿಗ್ತಿಲ್ಲ. ದಿನಕ್ಕೆ 750 ರೂಪಾಯಿ ಕೂಲಿ ಒಂದು ಹೊತ್ತು ಊಟ ಅಂದ್ರು ಜನ ಬರ್ತಿಲ್ಲ. ಮಳೆ ನಂಬಿ ಕೃಷಿ ಮಾಡಲಾಗದೆ ಅನ್ನ ನೀಡೋ ಗದ್ದೆಗಳು ಸೈಟ್-ಲೇಔಟ್ ಆಗುತ್ತಿವೆ. ಈ ಮಧ್ಯೆ ಗೊಬ್ಬರದ ಕಂಪನಿ, ಮಾರಾಟಗಾರರು ಹಾಗೂ ಸರ್ಕಾರ ಈ ರೀತಿ ಮಾಡಿದ್ರೆ ರೈತ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಾನೆ.