Aditya-L1 Mission: ಶ್ರೀಹರಿಕೋಟದಿಂದ ಉಪಗ್ರಹಗಳ ಉಡಾವಣೆ ಏಕೆ?; ಇದು ಇಸ್ರೋದ ಫೆವರೇಟ್ ಆಗಿದ್ದು ಹೇಗೆ?
ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಇದೀಗ ಭಾರತದ ಸೂರ್ಯಯಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಸ್ರೋದ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಇದ್ದರೂ, ಭಾರತದ ಎಲ್ಲಾ ಉಪಗ್ರಹಗಳನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗುತ್ತದೆ. ಇದು ಇಸ್ರೋದ ನೆಚ್ಚಿನ ಲಾಂಚ್ ಪ್ಯಾಡ್ ಆಗಿದ್ದು ಏಕೆ ಎಂಬ ಮಾಹಿತಿ ಇಲ್ಲಿದೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಶ್ರೀಹರಿಕೋಟಾವಿದೆ. ಇಲ್ಲಿಯೇ ಇಸ್ರೋದ ಸತೀಶ್ ಧವನ್ ಸ್ಪೇಸ್ ಸೆಂಟರ್ ಇದೆ. ಇದು ಅತ್ಯುತ್ತಮ ಉಡಾವಣಾ ತಾಣವಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ.
ಶ್ರೀಹರಿಕೋಟವು ಭೂಮಧ್ಯರೇಖೆಯ ಸಮೀಪದಲ್ಲಿದೆ, ಇದು ಭೂಸ್ಥಿರ ಕಕ್ಷೆಗೆ ಉಡಾವಣೆ ಮಾಡಲು ಅನುಕೂಲಕರವಾಗಿದೆ. ಭೂಮಧ್ಯದ ಬಳಿ ಉಪಗ್ರಹವನ್ನು ಉಡಾವಣೆ ಮಾಡುವುದರಿಂದ ಭೂಸ್ಥಿರ ಕಕ್ಷೆಯನ್ನು ಹೆಚ್ಚು ವೇಗವಾಗಿ ಸಾಧಿಸಲು ಸಹಾಯ ಮಾಡುತ್ತದೆ. ಇದು ಇಂಧನ ಹಾಗೂ ಉಡಾವಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಶ್ರೀಹರಿಕೋಟಾದ ಹವಾಮಾನವು ಸಾಮಾನ್ಯವಾಗಿ ಉಡಾವಣೆಗಳಿಗೆ ಉತ್ತಮವಾಗಿದೆ. ಅಲ್ಲಿ ಸಾಧಾರಣ ಹಾಗೂ ಮೋಡದ ಹೊದಿಕೆಯ ವಾತವರಣ ಇರುತ್ತದೆ. ರಾಕೆಟ್ ಉಡಾವಣೆಗಳಿಗೆ ಸ್ಥಿರ ಹವಾಮಾನ ಪರಿಸ್ಥಿತಿಗಳು ಬೇಕಾಗುತ್ತವೆ. ಆದ್ದರಿಂದ ಇದು ಸೂಕ್ತ ಸ್ಥಳ.
ಶ್ರೀಹರಿಕೋಟಾ ಬಂಗಾಳ ಕೊಲ್ಲಿಗೆ ಹತ್ತಿರವಾಗಿದೆ. ಇದು ಜನ ವಸತಿ ಪ್ರದೇಶಗಳಿಂದ ತುಂಬಾ ದೂರವಿದೆ. ಇಲ್ಲಿ ಉಡಾವಣೆಯ ವೇಳೆ ಏನೇ ತೊಂದರೆ ಆದರೂ ಸ್ಫೋಟಕಗಳು ಸಮುದ್ರಕ್ಕೆ ಬೀಳುತ್ತವೆ. ಇದರಿಂದ ಯಾರಿಗೂ ತೊಂದರೆ ಆಗಲ್ಲ. ಹಾಗೂ ಇದು ಉಡಾವಣೆಯ ಕಂಪನವನ್ನು ತಡೆದುಕೊಳ್ಳುವ ಭೂಮಿ ಆಗಿದೆ.
ಶ್ರೀಹರಿಕೋಟಾವು ಲಾಂಚ್‌ಪ್ಯಾಡ್, ವಾಹನ ಜೋಡಣೆ ಕಟ್ಟಡ ಮತ್ತು ರಾಡಾರ್ ಟ್ರ್ಯಾಕಿಂಗ್ ಸ್ಟೇಷನ್‌ನೊಂದಿಗೆ ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಈ ಮೂಲಸೌಕರ್ಯವು ರಾಕೆಟ್ ಉಡಾವಣೆಗಳ ಸರಿಯಾದ ಕಾರ್ಯಾಚರಣೆಗೆ ನಿರ್ಣಾಯಕವಾಗಿದೆ. ಏಕೆಂದರೆ ಇದು ರಾಕೆಟ್ ತಯಾರಿಕೆ ಮತ್ತು ಉಡಾವಣೆಗೆ ಅಗತ್ಯವಿರುವ ಸೌಲಭ್ಯಗಳು ಮತ್ತು ಸಲಕರಣೆಗಳನ್ನು ಪೂರೈಸುತ್ತದೆ.