- Home
- Entertainment
- Sandalwood
- ಕಾಂತಾರ ಮೊದಲ ಅಧ್ಯಾಯ ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ! ಯಾವೆಲ್ಲ ಭಾಷೆಯಲ್ಲಿ ಲಭ್ಯ
ಕಾಂತಾರ ಮೊದಲ ಅಧ್ಯಾಯ ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ! ಯಾವೆಲ್ಲ ಭಾಷೆಯಲ್ಲಿ ಲಭ್ಯ
ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ 'ಕಾಂತಾರ ಎ ಲೆಜೆಂಡ್ ಚಾಪ್ಟರ್ 1' ಚಿತ್ರವು ಅಕ್ಟೋಬರ್ 31 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಚಿತ್ರವು ಪಂಜುರ್ಲಿ ದೈವದ ದಂತಕಥೆಯ ಮೂಲವನ್ನು ಅನಾವರಣಗೊಳಿಸುತ್ತದೆ.

ಒಟಿಟಿಗೆ ಬರಲು ಸಿದ್ಧವಾದ ಕಾಂತಾರ
ಬೆಂಗಳೂರು: ಕನ್ನಡ ಚಲನಚಿತ್ರ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಕಾಂತಾರ: ಎ ಲೆಜೆಂಡ್ ಚಾಪ್ಟರ್ 1 ಇದೀಗ ಒಟಿಟಿಗೆ ಬರಲು ಸಿದ್ಧವಾಗಿದೆ. ಪ್ರೈಮ್ ವಿಡಿಯೋ ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ಚಿತ್ರವು ಅಕ್ಟೋಬರ್ 31ರಿಂದ ಸ್ಟ್ರೀಮಿಂಗ್ ನಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದೆ. ಈ ಸಿನಿಮಾ 2022ರ ಯಶಸ್ವಿ ಚಿತ್ರ 'ಕಾಂತಾರ' ದ ಮೊದಲ ಅಧ್ಯಾಯವಾಗಿದೆ. ಈ ಚಿತ್ರ ಭಾರತ ಸೇರಿದಂತೆ 200 ಕ್ಕೂ ಹೆಚ್ಚು ದೇಶಗಳಲ್ಲಿ ವೀಕ್ಷಕರಿಗೆ ಲಭ್ಯವಾಗಲಿದೆ. ಇದರ ಮೂಲ ಕಥೆ ಕನ್ನಡದಲ್ಲಿದ್ದು, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿಗಳೂ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಆದರೆ, ಹಿಂದಿ ಆವೃತ್ತಿ ಪ್ರೀಮಿಯರ್ ಸಂದರ್ಭದಲ್ಲಿ ಲಭ್ಯವಿರುವುದಿಲ್ಲ. ಹಿಂದಿ ಪ್ರೇಕ್ಷಕರು ಆನ್‌ಲೈನ್‌ನಲ್ಲಿ ಚಿತ್ರವನ್ನು ವೀಕ್ಷಿಸಲು ಇನ್ನೂ ಕೆಲವು ದಿನಗಳು ಕಾಯಬೇಕಾಗುತ್ತದೆ.
ಹೊಂಬಾಳೆ ಫಿಲ್ಮ್ಸ್‌ನಿಂದ ನಿರ್ಮಾಣ
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವು ಈಗಾಗಲೇ ಚಿತ್ರಮಂದಿರಗಳಲ್ಲಿ ಅದ್ಭುತ ಯಶಸ್ಸು ದಾಖಲಿಸಿದೆ. ಈ ಚಿತ್ರವು ಅಕ್ಟೋಬರ್ 2 ರಂದು ದಸರಾ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದುವರೆಗೆ ಸುಮಾರು 589.50 ರೂ. ನಿವ್ವಳ ಗಳಿಸಿದೆ ಮತ್ತು ವಿಶ್ವಾದ್ಯಂತ 800 ಕೋಟಿ ರೂ.ಗಳನ್ನು ಮೀರಿದೆ. ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ಮತ್ತು ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ತನ್ನ ದೃಶ್ಯ ವೈಭವ, ಆಧ್ಯಾತ್ಮಿಕ ಅಂಶಗಳು ಮತ್ತು ಭಾವನಾತ್ಮಕ ಕಥೆಯ ಶೈಲಿಗಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ವಿಶ್ವದಾದ್ಯಂತ ಹೆಚ್ಚು ವೀಕ್ಷಕರಿಗೆ ತಲುಪುವ ಗುರಿಯನ್ನು ಚಿತ್ರ ತಯಾರಕರು ಇಟ್ಟುಕೊಂಡಿದ್ದಾರೆ.
ಪ್ರೈಮ್ ವಿಡಿಯೋ ಪ್ರತಿಕ್ರಿಯೆ
ಪ್ರೈಮ್ ವಿಡಿಯೋ ಇಂಡಿಯಾದ ನಿರ್ದೇಶಕ ಹಾಗೂ ಕಂಟೆಂಟ್ ಲೈಸೆನ್ಸಿಂಗ್ ಮುಖ್ಯಸ್ಥ ಮನೀಶ್ ಮೆಂಘಾನಿ ಪ್ರತಿಕ್ರಿಯೆ ನೀಡಿ, ‘ಕಾಂತಾರ’ ಭಾರತೀಯ ಸಿನಿಮಾದಲ್ಲಿ ಹೊಸ ಅಧ್ಯಾಯವಾಗಿದೆ. ಸ್ಥಳೀಯ ಸಂಸ್ಕೃತಿ ಮತ್ತು ನೈಜತೆಯಲ್ಲಿ ಬೇರೂರಿರುವ ಕಥೆಗಳು ಜಾಗತಿಕವಾಗಿ ವೀಕ್ಷಕರನ್ನು ಹೇಗೆ ಆಕರ್ಷಿಸಬಲ್ಲವು ಎಂಬುದಕ್ಕೆ ಇದು ಪ್ರಬಲ ಉದಾಹರಣೆ. ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಮತ್ತು ಅವರ ಸೃಜನಶೀಲ ತಂಡವು ಆಧ್ಯಾತ್ಮಿಕತೆ, ಭಾವನಾತ್ಮಕ ದೃಶ್ಯವೈಭವವನ್ನು ಅಸಾಧಾರಣವಾಗಿ ತೋರಿಸಿದ್ದಾರೆ. ಅಕ್ಟೋಬರ್ 31ರಿಂದ ಈ ಚಿತ್ರವನ್ನು ಜಾಗತಿಕ ಪ್ರೈಮ್ ವೀಕ್ಷಕರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ದೈವಿಕ ಕಥೆಯ ಮೂಲದ ಹುಡುಕಾಟ
ಕದಂಬ ರಾಜವಂಶದ ಯುಗವನ್ನು ಹಿನ್ನೆಲೆಯಾಗಿ ಕಾಂತಾರ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಕಾಂತಾರ ಎಂದರೆ ಕಗ್ಗತ್ತಲ ಕಾಡು. ಈ ಪವಿತ್ರ ಕಾಡುಗಳನ್ನು ರಕ್ಷಿಸುವ ದೈವಿಕ ಆತ್ಮ ಪಂಜುರ್ಲಿ ದೈವದ ದಂತಕಥೆಯ ಮೂಲವನ್ನು ಈ ಚಿತ್ರವು ಅನಾವರಣಗೊಳಿಸುತ್ತದೆ. ಶಕ್ತಿ, ದುರಾಸೆ, ಪ್ರಕೃತಿ ಮತ್ತು ಶಕ್ತಿಗಳ ನಡುವಿನ ಹೋರಾಟ. ಇದರಲ್ಲಿ ದೈವಿಕ ಶಕ್ತಿಗಳು ಸಾಮರಸ್ಯ ಮತ್ತು ನ್ಯಾಯವನ್ನು ಕಾಪಾಡಲು ಜಾಗೃತಗೊಳ್ಳುತ್ತವೆ. ಪಂಜುರ್ಲಿ ದೈವ ಮತ್ತು ಗುಲಿಗ ದೈವ ಪಾತ್ರಗಳು ನ್ಯಾಯ ಹಾಗೂ ರಕ್ಷಣೆಯ ಸಂಕೇತಗಳಾಗಿ ಕಾಣಿಸಿಕೊಂಡಿದೆ ಆಧ್ಯಾತ್ಮಿಕ ಆಳವನ್ನು ರೂಪಿಸುತ್ತವೆ.
ಭೂತಕೋಲ ಸಂಪ್ರದಾಯ
ಕರ್ನಾಟಕದ ಕರಾವಳಿ ಭಾಗದ ಭೂತಕೋಲ ಸಂಪ್ರದಾಯ, ದೈವಗಳ ನಂಬಿಕೆ ಮತ್ತು ಶತಮಾನಗಳಷ್ಟು ಹಳೆಯ ಆಚರಣೆಗಳ ನೈಜ ಚಿತ್ರಣಕ್ಕಾಗಿ ಈ ಚಿತ್ರವು ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಅಪಾರ ಸನ್ನಿವೇಶಗಳು, ಅದ್ಭುತ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿಯ ಕಾಂತಾರ: ಎ ಲೆಜೆಂಡ್ ಚಾಪ್ಟರ್ 1 ಕೇವಲ ಸಿನಿಮಾ ಅಲ್ಲ. ಅದು ಸಂಸ್ಕೃತಿ, ನಂಬಿಕೆ ಮತ್ತು ಪ್ರಕೃತಿಯ ಮಹಾಕಾವ್ಯ. ಅಕ್ಟೋಬರ್ 31ರಿಂದ ಪ್ರೈಮ್ ವಿಡಿಯೋ ಮೂಲಕ ಡಿಜಿಟಲ್ ಜಗತ್ತಿಗೆ ಕಾಲಿಡಲಿರುವ ಈ ಸಿನಿಮಾ, ಭಾರತೀಯ ಕಥಾ ಪರಂಪರೆಯ ಗೌರವ ಮತ್ತು ದೈವಿಕ ನೈಜತೆಯನ್ನು ಮತ್ತಷ್ಟು ಹೆಚ್ಚಿಸಲಿದೆ