- Home
- Entertainment
- Sandalwood
- ಅಭಿಮಾನಿಗಳು ಪ್ರೀತಿಯಿಂದ ಕರೆದ ಹೆಸರಲ್ಲೇ ನಿರ್ಮಾಣ ಸಂಸ್ಥೆ ಆರಂಭಿಸಿದ ನಟಿ ಐಶಾನಿ ಶೆಟ್ಟಿ
ಅಭಿಮಾನಿಗಳು ಪ್ರೀತಿಯಿಂದ ಕರೆದ ಹೆಸರಲ್ಲೇ ನಿರ್ಮಾಣ ಸಂಸ್ಥೆ ಆರಂಭಿಸಿದ ನಟಿ ಐಶಾನಿ ಶೆಟ್ಟಿ
ನಟಿಯಾಗಿ, ಕಿರು ಚಿತ್ರ ನಿರ್ದೇಶಕಿಯಾಗಿ ಗೆದ್ದಿರುವ ಕನ್ನಡಿಗರ ನೆಚ್ಚಿನ ಶಾಕುಂತಲೆ ಐಶಾನಿ ಶೆಟ್ಟಿ ಹೊಸದಾಗಿ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ, ನಿರ್ಮಾಪಕಿಯಾಗಿ ಹೊಸ ಜವಾಬ್ಧಾರಿ ತೆಗೆದುಕೊಂಡಿದ್ದಾರೆ.

ಜ್ಯೋತಿ ಆಲಿಯಾಸ್ ಕೋತಿರಾಜ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಶಾನಿ ಶೆಟ್ಟಿ ರಕ್ಷಿತ್ ಶೆಟ್ಟಿ ಜೊತೆ ವಾಸ್ತು ಪ್ರಕಾರ ಸಿನಿಮಾದಲ್ಲಿ ನಟಿಸುವ ಮೂಲಕ ಸದ್ದು ಮಾಡಿದರು. ನಟಿಯ ಮುದ್ದಾದ ಮಾತುಗಳು, ನಗು, ನಟನೆ ಎಲ್ಲವೂ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಇದಾದ ಬಳಿಕ ಪ್ಲಸ್, ನಡುವೆ ಅಂತರವಿರಲಿ, ರಾಕೆಟ್, ನಂ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ ಮತ್ತು ಬ್ರೀಥ್ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡ ಐಶಾನಿ ಶೆಟ್ಟಿ ಬಳಿಕ ನಿರ್ದೇಶನದಲ್ಲಿ ಮುಖ ಮಾಡಿ..
ತಮ್ಮ ನಟನಾ ವೃತ್ತಿಜೀವನದ ಜೊತೆಗೆ ಐಶಾನಿ 'ಕಾಜಿ' ಎಂಬ ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿದರು. ಅವರ ನಿರ್ದೇಶನದ ಚೊಚ್ಚಲ ಚಿತ್ರವು 2017 ರಲ್ಲಿ ಬೆಂಗಳೂರು ಕಿರುಚಿತ್ರೋತ್ಸವ, ಪಿಂಕ್ ಸಿಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತವಾಗಿ ಪ್ರದರ್ಶಿಸಲ್ಪಟ್ಟಿತು. ಕಾಜಿ ಚಿತ್ರ SIIMA ನಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಪಡೆಯಿತು. ಅಷ್ಟೇ ಅಲ್ಲ ಪಿಂಕ್ ಸಿಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದೆ.
ನಟನೆ, ನಿರ್ದೇಶನದ ಜೊತೆಗೆ ಇದೀಗ ಐಶಾನಿ ಶೆಟ್ಟಿ, ನಿರ್ಮಾಣದ ಕಡೆಗೂ ಮುಖ ಮಾಡಿದ್ದು, ತಮ್ಮ ನಿರ್ಮಾಣ ಸಂಸ್ಥೆಯ ಬಗ್ಗೆ ಸಂಭ್ರಮದಿಂದ ಹಂಚಿಕೊಂಡಿದ್ದಾರೆ. ಐಶಾನಿ ಶೆಟ್ಟಿ ನಟಿಸಿರುವ ನಡುವೆ ಅಂತರವಿರಲಿ ಸಿನಿಮಾದ ಶಾಕುಂತ್ಲೇ ಸಿಕ್ಕಳು, ಸುಮ್ ಸುಮ್ನೆ ನಕ್ಕಳು… ಹಾಡು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಐಶಾನಿಯವರ ಹೆಸರನ್ನು ಮರೆತು ಜನ ಶಾಕುಂತಲೆ ಅಂತಾನೆ ಕರೆಯುತ್ತಿದ್ದರು. ಹಾಗಾಗಿ ತಮ್ಮ ನಿರ್ಮಾಣ ಸಂಸ್ಥೆಗೂ ಐಶಾನಿ ಅದೇ ಹೆಸರನ್ನಿಟ್ಟಿದ್ದಾರೆ.
ನಿರ್ಮಾಣ ಸಂಸ್ಥೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಐಶಾನಿ, ಎಲ್ಲರಿಗೂ ನಮಸ್ಕಾರ, ಒಂದೊಳ್ಳೆ ಸುದ್ದಿ ನಿಮ್ಮ ಜೊತೆ ಹಂಚಿಕೊಳ್ಳುವ ಸಮಯ. ಖುಷಿ ಮತ್ತು ಸ್ವಲ್ಪ ಭಯ ಎರಡು ಒಟ್ಟೊಟ್ಟಿಗೆ ಆಗುತ್ತಿದೆ. ಹೊಸ ಜವಾಬ್ಧಾರಿಯನ್ನ ಹೊತ್ತುಕೊಂಡಿದ್ದೇನೆ. ನನ್ನ ಜೀವನದಲ್ಲಿ ಸಿನಿಮಾ ವಿಶೇಷ ಸ್ಥಾನ ಪಡೆದಿದೆ. ಕಥೆ ಹೇಳುವುದು ನನ್ನ ಇಷ್ಟದ ಕೆಲಸ. ಸದ್ಯ ನಾನೀನ ಸಿನಿಮಾವೊಂದನ್ನು ನಿರ್ದೇಶನ ಮಾಡುವ ದೊಡ್ಡ ಜವಾಬ್ಧಾರಿ ಹೊತ್ತಿದ್ದೇನೆ.
ಈ ಕಥೆ ಕೊತೆ ಕೆಲಸ ಮಾಡುತ್ತಾ ನನಗೆ ತಿಳಿಯದೇ ಹೊಸ ಪ್ರಪಂಚಕ್ಕೆ ಪ್ರಯಾಣ ಮಾಡಿದೆ. ಯಾಕೋ ನನಗೆ ಈ ಕಥೆಯನ್ನು ನಾನೇ ನಿರ್ಮಾಣ ಮಾಡುವ ಆಲೋಚನೆ ಬಂತು. ತುಂಬಾ ಯೋಚಿಸಿದ ನಂತರ ಈ ಚಿತ್ರವನ್ನು ನಮ್ಮದೇ ಸ್ವಂತ ಸಂಸ್ಥೆಯಲ್ಲಿ ಮಾಡಲು ನಿರ್ಧರಿಸಿದೆ. ಅರ್ಪಿಸುತ್ತಿದ್ದೇನೆ ನಿಮಗೆ -ಶಾಕುಂತಲೆ ಸಿನಿಮಾಸ್.
ಶಾಕುಂತಲೆ ನನಗೆ ನೀವೇ ಕೊಟ್ಟ ಹೆಸರು. ನಾನು ಎಲ್ಲೆ ಹೋದರು ಶಾಕುಂತಲೆ ಸಿಕ್ಕಳು ಹಾಡು ಬಿಡುಗಡೆಯಾದಾಗಿನಿಂದಲೂ ನನ್ನನ್ನು ಪ್ರೀತಿಯಿಂದ ನೀವು ಶಾಕುಂತಲೆ ಎಂದು ಕರೆಯುವುದು ನನಗೆ ತುಂಬಾ ಸಂತೋಷ. ನೀವು ಕೊಟ್ಟ ಗೌರವದ ಸಲುವಾಗಿ ಅದೇ ಹೆಸರನ್ನು ನನ್ನ ನಿರ್ಮಾಣ ಸಂಸ್ಥೆಗೆ ಇಡುವ ಮುಖಾಂತರ ನಿಮ್ಮನ್ನು ಪ್ರತಿಯಾಗಿ ಗೌರವಿಸುತ್ತೇನೆ.
ಹೊಸ ಪ್ರಯಾಣ, ಹೊಸ ಆರಂಭ, ಹೊಸ ಜವಾಬ್ಧಾರಿ ಇದನ್ನು ಗಟ್ಟಿಯಾಗಿ ನಿಂತು ಹೊರುವ ಪಣ ತೊಟ್ಟಿದ್ದೇನೆ. ನಿಮ್ಮೆಲ್ಲರ ಸಹೃದಯ ಹಾರೈಕೆಗಳು ಎಂದಿನಂತೆ ನನ್ನ ಜೊತೆಗಿರಲಿ. ಅದೇ ನನ್ನ ಶಕ್ತಿ. ಥ್ಯಾಂಕ್ಯೂ ಆಲ್. ಪ್ರೀತಿಯಿಂದ ನಿಮ್ಮ ಐಶಾನಿ ಎಂದು ಬರೆದುಕೊಂಡಿದ್ದಾರೆ. ಐಶಾನಿ ಹೊಸ ಜರ್ನಿಗೆ ಸೆಲೆಬ್ರಿಟಿಗಳು ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.