ಸುಧಾಮೂರ್ತಿ ಕಿವಿಮಾತು: ಗಂಡ-ಹೆಂಡ್ತಿ ಜಗಳವಾಡದಿದ್ರೆ ಅವ್ರು ದಾಂಪತ್ಯ ಜೀವನ ನಡೆಸಲು ನಾಲಾಯಕ್ ಅಂತೆ!
ಪ್ರತಿಯೊಂದೂ ಜೋಡಿಯೂ ತಮ್ಮ ಸಂಬಂಧವನ್ನು ನಿರ್ವಹಿಸುವ ರೀತಿ ಬೇರೆ ಬೇರೆಯಾಗಿರುತ್ತೆ. ದಾಂಪತ್ಯ ಜೀವನ ಅಂದ ಮೇಲೆ ಅಲ್ಲಿ ಕೇವಲ ಪ್ರೀತಿ ಮಾತ್ರ ಇರೋದಿಲ್ಲ, ಇದರ ಜೊತೆ ಜಗಳ, ಕೋಪ ಎಲ್ಲವೂ ಇರುತ್ತೆ. ಸುಧಾ ಮೂರ್ತಿಯವರು ಸಂಬಂಧದಲ್ಲಿ ಜಗಳ ಇರಲೇಬೇಕು ಅಂತಾರೆ. ಯಾಕೆ ಅನ್ನೋದನ್ನ ನೋಡೋಣ.
ಯಾವುದೇ ಸಂಬಂಧ ಆ ಸಂಬಂಧಕ್ಕೆ ಸಂಬಂಧಿಸಿದ ಜನರ ನಡುವೆ ಪ್ರೀತಿ ಇದ್ದಾಗ ಮಾತ್ರ ದೀರ್ಘಕಾಲ ಉಳಿಯುತ್ತದೆ. ಆದರೆ ದಂಪತಿ ನಡುವೆ ಜಗಳ ಇದ್ರೂ, ಅಲ್ಲಿ ಪ್ರೀತಿ ಹೆಚ್ಚುತ್ತೆ ಅನ್ನೋದನ್ನು ನೀವು ಕೇಳಿರಬಹುದು ಅಲ್ವಾ? ಹೌದು ದಂಪತಿ ನಡುವೆ ಜಗಳ ಇಲ್ಲಾಂದ್ರೆ ಅವರು ಗಂಡ ಹೆಂಡ್ತಿ (couples) ಆಗೋಕೆ ಸಾಧ್ಯನೆ ಇಲ್ಲವಂತೆ. ಹಾಗಂತ ಸುಧಾ ಮೂರ್ತಿಯವರು ಸಂದರ್ಶವೊಂದರಲ್ಲಿ ಹೇಳಿದ್ದಾರೆ.
ಸುಧಾ ಮೂರ್ತಿ (Sudha Murthy) ಅವರು ಬರಹಗಾರ್ತಿ, ಸಂಸತ್ ಸದಸ್ಯೆ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ. ಇವರೊಬ್ಬ ಅದ್ಭುತ ಲೇಖಕಿ ಮಾತ್ರವಲ್ಲ, ತಮ್ಮ ಮುಕ್ತ ಮಾತುಕತೆಗೂ ಹೆಸರುವಾಸಿ. ಇತ್ತೀಚಗೆ ಒಂದು ಸಂದರ್ಶನದಲ್ಲಿ ಇವರು ರಿಲೇಶನ್ ಶಿಪ್ ಕುರಿತು, ಗಂಡ ಹೆಂಡ್ತಿ ಸಂಬಂಧದ ಕುರಿತು ಮಾಹಿತಿ ನೀಡಿದ್ದಾರೆ. ಗಂಡ ಮತ್ತು ಹೆಂಡತಿ ಜಗಳವಾಡುವುದು ಅವಶ್ಯಕ, ನೀವು ಎಂದಿಗೂ ಜಗಳವಾಡದಿದ್ದರೆ, ನೀವು ಗಂಡ ಮತ್ತು ಹೆಂಡತಿ ಆಗೋಕೆ ಸಾಧ್ಯ ಇಲ್ಲ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಇದಲ್ಲದೆ, ಅವರು ರಿಲೇಶನ್’ಶಿಪ್ ಅಥವಾ ವೈವಾಹಿಕ ಜೀವನ ಸಕ್ಸಸ್ ಫುಲ್ ಆಗಿರಲು ಏನು ಮಾಡಬೇಕು ಅನ್ನೋದನ್ನು ಹೇಳಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.
ಮೊದಲನೆಯದು- 'ದಂಪತಿಗಳಲ್ಲಿ ಜಗಳ ಮುಖ್ಯ'
ದಂಪತಿ ನಡುವಿನ ಪ್ರೀತಿಯ ಬಗ್ಗೆ ಸುಧಾ ಮೂರ್ತಿ ಹೇಳುವಂತೆ, 'ನೀವು ಗಂಡ ಮತ್ತು ಹೆಂಡತಿಯಾಗಿದ್ದರೆ, ಜಗಳವಾಡೋದು ಸಹಜ, ಅದು ಆಗಲೇ ಬೇಕು, ನೀವು ಎಂದಿಗೂ ಜಗಳವಾಡಿಲ್ಲ ಎಂದು ಹೇಳಿದ್ರೆ, ನೀವು ಗಂಡ-ಹೆಂಡತಿ ಆಗೋಕೆ ಸಾಧ್ಯಾನೆ ಇಲ್ಲ. ಸಣ್ಣ ಪುಟ್ಟ ಮನಸ್ತಾಪ, ಜಗಳಗಳಿಂದ (couple fight) ಪ್ರೀತಿ ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗೋದಿಲ್ಲ.
ಎರಡನೆಯ ವಿಷಯ - ಒಬ್ಬರು ಕೋಪದಲ್ಲಿದ್ರೆ, ಇನ್ನೊಬ್ರು ಕೂಲ್ ಆಗಿರಬೇಕು
ಗಂಡ ಹೆಂಡ್ತಿ ಜಗಳವಾಡಿದಾಗ ಒಬ್ಬ ವ್ಯಕ್ತಿಯು ಬೇಜಾರಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇತರ ವ್ಯಕ್ತಿಯು ಕೂಲ್ ಆಗಿರಬೇಕು. ಮೂರ್ತಿಗೆ ಕೋಪ ಬಂದಾಗ, ನಾನು ಎಂದಿಗೂ ಮಾತನಾಡುವುದಿಲ್ಲ ಮತ್ತು ಅವರು ಬಯಸಿದ್ದನ್ನು ಮಾಡಲು ಬಿಟ್ಟು ನಾನು ಸುಮ್ಮನಿರುತ್ತೇನೆ ಎನ್ನುತ್ತಾರೆ ಸುಧಾ ಮೂರ್ತಿ. ಇದರಿಂದ ಜಗಳ ಬೇಗ ಕೊನೆಗೊಳ್ಳುತ್ತೆ, ಸಂಸಾರ ಸುಂದರವಾಗಿರುತ್ತೆ.
ಆರ್ ನಾರಾಯಣ ಮೂರ್ತಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಸುಧಾ ಮೂರ್ತಿ, "ನಾನು ಕೋಪಗೊಂಡಾಗ ಅವರು ಮೌನವಾಗಿರುತ್ತಾರೆ. ಆದರೆ ನಿಜ ಜೀವನದಲ್ಲಿ, ನಾನು ಹೆಚ್ಚಿನ ಸಮಯ ಮೌನವಾಗಿಯೇ ಇರುತ್ತೇನೆ. ಜಗಳವಾದಾಗ ಇಬ್ಬರೂ ಕೋಪ ಮಾಡಿಕೊಂಡರೆ, ಅದರಿಂದ ಸಂಬಂಧ ಹಾಳಾಗುತ್ತೆ. ಹಾಗಾಗಿ ಒಬ್ಬರು ಕೋಪ ಮಾಡಿದ್ರೆ ಇನ್ನೊಬ್ರು ಕೂಲ್ ಆಗಿರಬೇಕು.
ಜೀವನ ಅಂದ್ರೆ, ಕೊಟ್ಟು ತೆಗೆದುಕೊಳ್ಳೋದು
ಸುಧಾ ಮೂರ್ತಿ ಹೇಳಿರೋ ಮೂರನೆಯ ವಿಷಯವೆಂದರೆ ಕೊಟ್ಟು ತೆಗೆದುಕೊಳ್ಳೋದು ಜೀವನ. ಇಲ್ಲಿ ಯಾರೂ ಪರ್ಫೆಕ್ಟ್ ಲೈಫ್ ಹೊಂದಿಲ್ಲ. ಜೊತೆಗೆ ಪರ್ಫೆಕ್ಟ್ ಕಪಲ್ ಗಳೂ ಇಲ್ಲ. ಇಬ್ಬರಲ್ಲೂ ಕೆಲವು ಒಳ್ಳೆ ಗುಣಗಳಿರುತ್ತೆ, ಕೆಲವು ಕೆಟ್ಟ ಗುಣಗಳಿರುತ್ತೆ. ಎರಡನ್ನೂ ಅರ್ಥ ಮಾಡಿಕೊಂಡು ಜೀವನ ಸಾಗಿಸಿದ್ರೆ ಮಾತ್ರ ಜೀವನ ಚೆನ್ನಾಗಿರುತ್ತೆ. ಸಂಗಾತಿಯ ಒಳ್ಳೆಯ ಅಭ್ಯಾಸಗಳನ್ನು ಸ್ವೀಕರಿಸಿದಂತೆ, ಅವರ ಕೆಲವೊಂದು ಕೆಟ್ಟ ಗುಣಗಳನ್ನು ಸ್ವೀಕರಿಸಿ, ಸಾಧ್ಯವಾದರೆ ಅದು ತುಂಬಾ ಕೆಟ್ಟದು ಎನಿಸಿದರೆ ಸರಿ ಮಾಡಲು ಪ್ರಯತ್ನಿಸಿ, ಆದ್ರೆ ಅವರು ನನ್ನಂತೆ ಇರಬೇಕು ಎಂದು ಯಾವತ್ತೂ ಅಂದುಕೊಳ್ಳಬಾರದು.
ಗಂಡ ಅಡುಗೆಮನೆಯಲ್ಲಿ ಹೆಂಡತಿಗೆ ಸಹಾಯ ಮಾಡಬೇಕು
ಸುಧಾ ಮೂರ್ತಿಯವರು ಎಲ್ಲಾ ಗಂಡಂದಿರು ಮತ್ತು ಪುರುಷರಿಗೆ ಕಿವಿ ಮಾತು ಹೇಳ್ತಾರೆ, ಅದೇನಂದ್ರೆ, 'ಈ ಪೀಳಿಗೆಯ ಪ್ರತಿಯೊಬ್ಬ ಪುರುಷನು ಅಡುಗೆ ಮನೆಯಲ್ಲಿ ತನ್ನ ಹೆಂಡತಿಗೆ ಸಹಾಯ ಮಾಡಬೇಕು. ಇದು ಬಹಳ ಮುಖ್ಯ. ಆಕೆ ಕಚೇರಿಯಲ್ಲಿ ಕೆಲಸ ಮಾಡುವ ಸಾಫ್ಟ್ವೇರ್ ಎಂಜಿನಿಯರ್, ನಂತರ ಮನೆಗೆ ಬಂದು ಅಡುಗೆ ಮಾಡ್ತಾರೆ, ಪಿಟಿಎ ಸಭೆಗೆ ಹಾಜರಾಗುತ್ತಾಳೆ. ಇದು ಅವರಿಗೆ ಹೆಚ್ಚಿನ ಹೊರೆ ನೀಡುತ್ತೆ. ಹಾಗಾಗಿ ಹೆಂಡತಿಯ ಅರ್ಧ ಹೊರೆಯನ್ನು ಗಂಡಸರು ಹೊರೋದನ್ನು ಕಲಿಯಬೇಕು. ಆವಾಗ ಮಾತ್ರ ಜೀವನ ಚೆನ್ನಾಗಿರುತ್ತೆ. ಅಡುಗೆ ಮಾಡೊದಕ್ಕೆ, ಮನೆ ಕೆಲಸಕ್ಕೆ ಹೆಂಡತಿಗೆ ನೆರವಾಗಿ. ಇದರಿಂದ ಹೆಂಡತಿ ಮೇಲಿನ ಹೊರೆ ಕಡಿಮೆಯಾಗುತ್ತೆ.
ಅಮ್ಮ ಉತ್ತಮವಾಗಿ ಅಡುಗೆ ಮಾಡ್ತಿದ್ರು, ನೀನು ಮಾಡೋದು ಚೆನ್ನಾಗಿಲ್ಲ ಅನ್ನೋದೆ ಬೇಡ
ಹೆಚ್ಚಾಗಿ ಗಂಡಸರು ತಮಗೆ ತಮ್ಮ ಅಮ್ಮ ಮಾಡಿದ ಆಹಾರ ಇಷ್ಟ, ನನಗೆ ತಾಯಿ ಎಷ್ಟೊಳ್ಳೆ ಕುಕ್, ನೀನು ಮಾಡಿರೋದು ಅಮ್ಮ ಮಾಡಿದಂತೆ ಆಗೋದಿಲ್ಲ ಎಂದು ಹೇಳಿ ಹೆಂಡ್ತಿಯನ್ನು ದೂಷಿಸುತ್ತಾರೆ. ಇದನ್ನ ಹೇಳೋ ಎಲ್ಲಾ ಗಂಡಸರೇ ನೆನಪಿಡಿ ನಿಮ್ಮ ತಾಯಿ ಹೌಸ್ ವೈಫ್ ಆಗಿದ್ರು, ಅವರಿಗೆ ಮನೆ ಕೆಲಸ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಮನೆಯವರ ಖುಷಿಗಾಗಿ ದಿನವಿಡೀ ಅಡುಗೆ ಮನೆಯಲ್ಲಿ ಇರೋದು ಸಹ ಅವರಿಗೆ ಇಷ್ಟ. ಆದರೆ ನಿಮ್ಮ ಹೆಂಡತಿ ಆಫೀಸ್ ಕೆಲಸ ಮಾಡಿ, ಮನೆಯಲ್ಲಿ ಆಕೆ ನಿಮ್ಮ ತಾಯಿಯಂತೆ ಅಡುಗೆ ಮಾಡಬೇಕೆಂದು ನೀವು ಹೇಗೆ ನಿರೀಕ್ಷಿಸಬಹುದು? ಇದು ಸಾಧ್ಯವಿಲ್ಲ, ಆದ್ದರಿಂದ ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ.