ವರ್ಕ್ ಫ್ರಂ ಹೋಂ, ಮೂನ್ ಲೈಟಿಂಗ್ ಆಯ್ತು ಇದೀಗ ಕಾಫಿ ಬ್ಯಾಡ್ಜಿಂಗ್ ಹೊಸ ಟ್ರೆಂಡ್!
ಈ ಕೊರೋನಾ ಬಂದು ಕೆಲಸ ಮಾಡುವ ರೀತಿಯನ್ನೇ ಬದಲಾಯಿಸಿದೆ. ವರ್ಕ್ ಫ್ರಂ ಹೋಮ್‌ಗೆ ಹೊಂದಿಕೊಂಡಿರುವ ಮಂದಿ ಆಫೀಸಿಗೆ ಹೋಗಲು ಮನಸ್ಸೇ ಮಾಡುತ್ತಿಲ್ಲ. ವರ್ಕ್-ಹೋಮ್ ಬ್ಯಾಲೆನ್ಸ್ ಮಾಡುವುದು ಈಸಿ ಮಾಡಿಕೊಂಡಿರುವ ಉದ್ಯೋಗಿಗಳು ಆಫೀಸಿಗೆ ಹೋದರೂ ಎಲ್ಲಿಯೂ ಸ್ವಲ್ಪ ಹೊತ್ತು ಸಹೋದ್ಯೋಗಿಗಳೊಂದಿಗೆ ಕಾಫಿ ಕುಡಿದು ಮರಳೋದು ಕಾಮನ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಟ್ರೆಂಡ್ ಕಾಫಿ ಬ್ಯಾಡ್ಜಿಂಗ್. ಏನಿದು?
ಕೊರೋನಾ ಬಂದ ಕಾಲದಲ್ಲಿ ಶುರುವಾದ ಟ್ರೆಂಡ್ ವರ್ಕ್ ಫ್ರಂ ಹೋಮ್. ಆಫೀಸಿಗೇ ಹೋಗದೇ ಮನೆಯಿಂದಾನೇ ಕೆಲಸವನ್ನು ಎಫೆಕ್ಟಿವ್ ಆಗಿ ಮಾಡಬಹುದು ಎಂಬುದನ್ನು ಕೊರೋನಾ ಹೇಳಿ ಕೊಟ್ಟಿದ್ದು ಸುಳ್ಳಲ್ಲ. ಮಕ್ಕಳು ಮರಿ ಅಂತ ತಲೆ ಕೆಡಿಸಿಕೊಳ್ಳದೇ ಮನೆಯಲ್ಲಿಯೇ ಕೂತು ಕೈ ತುಂಬಾ ದುಡೀಬಹುದು ಎಂಬುದನ್ನು ಇದರಿಂದ ಅರಿವಿಗೆ ಬಂತು.
ಆದರೆ, ಹೊಸ ನಾರ್ಮಲ್ ಲೈಫ್ ಶುರುವಾದ ನಂತರ ವಿವಿಧ ಕಾರಣಗಳಿಂದ ಕಂಪನಿಗಳು ಮತ್ತೆ ವರ್ಕ್ ಫ್ರಂ ಆಫೀಸ್ ಮಾಡಬೇಕೆಂದು ಕರೆ ನೀಡಿತು. ಹೈಬ್ರಿಡ್ ಮೋಡ್ ಅಂದ್ರೆ ವಾರದಲ್ಲಿ ಕೆಲ ದಿನ ಆಫೀಸ್ ಮತ್ತು ಕೆಲ ದಿನ ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯೂ ಹುಟ್ಟಿಕೊಂಡಿತು.
ಈ ಎಲ್ಲ ಬೆಳವಣಿಗೆಗೆ ನಡುವೆ ಮೂನ್‌ಲೈಟಿಂಗ್ ಸಹ ಕೆಲ ಕಾಲ ಸದ್ದು ಮಾಡಿತು. ಒಂದು ಕಂಪನಿಗೆ ಕೆಲಸ ಮಾಡುತ್ತಿರುವಾಗಲೇ ಮತ್ತೊಂದು ಕಂಪನಿಗೆ ಬಿಡುವಿನ ಸಮಯದಲ್ಲಿ ಅಥವಾ ವರ್ಕಿಂಗ್ ಅವರ್ಸ್‌ನಲ್ಲಿಯೋ ಕೆಲಸ ಮಾಡಿದವರು ಸಿಕ್ಕಿ ಹಾಕಿ ಕೊಂಡರು.
Return to Office (RTO) ಕಂಪಲ್ಸರಿ ಮಾಡಿರುವ ಕೆಲವು ಕಂಪನಿಗಳು ಹೈಬ್ರಿಡ್ ಮೋಡ್‌ಗೆ ಸಹ ಅವಕಾಶ ನೀಡಿದೆ. ಆದರೆ, ಆಫೀಸಿಗೇ ಬರಲೇಬೇಕು ಎಂದು ಹೇಳುವುದರಿಂದ ಮನೆ ಬಿಟ್ಟು ಹೋಗುವ ಉದ್ಯೋಗಿಗಳು ಕೆಲ ಸಮಯ ಆಫೀಸ ಪರಿಸರದಲ್ಲಿ, ಕಾಫಿ ಹೀರುತ್ತಾ, ಕೆಲವು ಚರ್ಚೆಗಳಲ್ಲಿ ತೊಡಗಿ ಕಾಲ ಕಳೆಯೋದನ್ನು ಕಾಫಿ ಬ್ಯಾಡ್ಜಿಂಗ್ ಎನ್ನುತ್ತಾರೆ.
ಇದು ವೇಸ್ಟ್ ಅಂತಾನೂ ಹೇಳುತ್ತಾರೆ. ವಿಶೇಷವಾಗಿ ಮಿಲೆನಿಯಲ್ಸ್ ಆಫೀಸಿಗೆ ಹೋಗಿ, ಟ್ರಾಫಿಕ್ಕಲ್ಲಿ ಸಮಯ ಕಳೆದು, ಕೆಲಸ ಮಾಡೋದು ವೇಸ್ಟ್. ಬದಲಾಗಿ ತಮ್ಮ ನೆಚ್ಚಿನ ಜಾಗದಲ್ಲಿ ತಮ್ಮಿಷ್ಟದಂತೆ ಕೆಲಸ ಮಾಡಲು ಅವಕಾಶ ಕೊಟ್ಟರೆ ಪ್ರೊಡಕ್ಟಿವಿಟಿ ಹೆಚ್ಚುತ್ತೆ ಎಂದೇ ನಂಬುತ್ತಾರೆ.
ಸುಖಾ ಸುಮ್ಮನೆ ಆಫೀಸಿಗೇ ಬರಲೇ ಬೇಕು ಎಂಬ ಕಂಪಲ್ಸನ್ ಹಾಕಿದರೆ ಏನು ಮಾಡೋದು, ಹೋಗಿ ಒಟ್ಟಿಗೆ ಕಾಫಿ ಕೂತು ತುಸು ಹರಟೆ ಹೊಡೆದು ಕೊಂಡು ಬರೋದು ಅಷ್ಟೇ. ಇದು ಕೆಲವೊಮ್ಮೆ ಪಾಸಿಟಿವ್ ಆಗಲೂ ಬಹುದು, ಮತ್ತೆ ಕೆಲವೊಮ್ಮೆ ಉದ್ಯೋಗಿಗಳಲ್ಲಿ ಸ್ಪರ್ಧೆ ಹೆಚ್ಚುವಂತೆಯೂ ಮಾಡಬಹುದು ಎಂಬುವುದು ಹಲವರ ಅಭಿಪ್ರಾ.
ಈ ಹೊಸ ಟ್ರೆಂಡ್ ಮಹಿಳಾ ಉದ್ಯೋಗಳಿಗಿಂತ ಪುರುಷರಲ್ಲಿಯೇ ಹೆಚ್ಚಂತೆ. ಇದರಿಂದ ಕೆಲವೊಮ್ಮೆ ಹೊಸ ಹೊಸ ಐಡಿಯಾಗಳು ಶೇರ್ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಆದರೆ,ಬರೀ ಈ ಕೆಲಸ ಮಾಡಲು ಅಷ್ಟು ದೂರ ಅದರಲ್ಲಿಯೂ ಬೆಂಗಳೂರಿನಂಥ ನಗರಗಳಲ್ಲಿ ಆಫೀಸಿಗೆ ಹೋಗಿ ಬರುವುದು ಅಂದ್ರೆ ಟೈಮ್ ವೇಸ್ಟ್ ಅಂತ ಹೇಳುವವರೂ ಇದ್ದಾರೆ. ಅದರ ಬದಲು ವರ್ಕ್ ಫ್ರಂ ಹೋಮ್ ಬೆಸ್ಟ್ ಆಪ್ಷನ್ ಅನ್ನೋದು ಇವರ ಅಂಬೋಣ.
ಹಿಂದಿನ ಜನರೇಷನ್ ಉದ್ಯೋಗಿಗಳಿಗಿಂತ ಈಗಿನ ಕಾಲದವರು ಮೆಂಟಾಲಿಟಿ ಬದಲಾಗಿದೆ. ಕೆಲಸವನ್ನು ವಿಭಿನ್ನವಾಗಿ ನೋಡುವುದು ಅವರಿಗೆ ಅಭ್ಯಾಸವಾಗಿದೆ.
ಅಷ್ಟೇ ವಿಶ್ವಾಸದಿಂದ ಮುನ್ನುಗ್ಗುವ ಈಗಿನ ಕಾಲದ ಪ್ರತಿಭೆಗಳು ತಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಲು ಏನೇನು ಬೇಕೋ ಅದನ್ನು ಮಾಡುತ್ತಾರೆ. ಸ್ಟ್ಸೆಸ್ ಕಡಿಮೆ ಮಾಡಿಕೊಳ್ಳಲು ಪ್ರಯಾರಿಟಿ ಕೊಡುತ್ತಾರೆ.
ಬದಲಾದ ಕಾಲ ಘಟ್ಟದಲ್ಲಿ ವರ್ಕ್ ಹೋಮ್ ಬ್ಯಾಲೆನ್ಸ್ ಮಾಡುವ ರೀತಿಯೂ ಬದಲಾಗುತ್ತಿದೆ. ಮನೆಯಲ್ಲಿಯೇ ಕೆಲಸ ಮಾಡುವುದರಿಂದ ಹಲವರಿಗೆ ಹೆಚ್ಚಿನ ಸಮಯ ಸಿಗುತ್ತಿತ್ತು, ತಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗುವುದೂ ಹೆಚ್ಚುತ್ತಿದೆ.
ಮನೆಯ ಒಂದು ಮೂಲೆಯಲ್ಲಿಯೇ ಆಫೀಸ್ ಸ್ಪೇಸ್ ಮಾಡಿಕೊಂಡು ಕೆಲಸ ಮಾಡುವ ಉದ್ಯೋಗಿಗಳು, ವಿರಾಮದ ವೇಳೆ ಮನೆ ಕಡೆಯೂ ಗಮನ ಹರಿಸುವುದರಿಂದ ಒತ್ತಡ ಮುಕ್ತ ಜೀವನ ಸುಲಭವಾಗಿದೆ. ಈ ಎಲ್ಲ ಬದಲಾವಣೆಗಳ ನಡುವೆ ಕಾಫಿ ಬ್ಯಾಡ್ಜಿಂಗ್ ಈಗ ಹೊಸ ಟ್ರೆಂಡ್. ನೋಡಬೇಕು ಇನ್ನು ಮುಂದೆ ಈ ಬಗ್ಗೆ ಯಾವ ಯಾವ ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಎಂದು.