- Home
- Entertainment
- Movie Reviews
- ಹೇಗಿದೆ ಗೊತ್ತಾ ಕೂಲಿ ಸಿನಿಮಾ? ಹೆಣಭಾರದ ಕತೆಯನ್ನು 170 ನಿಮಿಷ ಹೊತ್ತು ಸಾಗಿದ ರಜನಿಕಾಂತ್
ಹೇಗಿದೆ ಗೊತ್ತಾ ಕೂಲಿ ಸಿನಿಮಾ? ಹೆಣಭಾರದ ಕತೆಯನ್ನು 170 ನಿಮಿಷ ಹೊತ್ತು ಸಾಗಿದ ರಜನಿಕಾಂತ್
ಕೂಲಿ ಚಿತ್ರ ರಜನೀಕಾಂತ್ ಇಮೇಜನ್ನು ಬಿಟ್ಟುಕೊಡದೇ, ಅದಕ್ಕಿಂತಲೂ ಹೆಚ್ಚಿನದ್ದನ್ನು ಸಾಧಿಸಲು ಹೊರಟಿದೆ. ಅದಕ್ಕೋಸ್ಕರ ಲೋಕೇಶ್ ಕನಕರಾಜ್ ಚಿತ್ರಜಗತ್ತಿನ ಘಟಾನುಘಟಿಗಳನ್ನೆಲ್ಲ ಒಂದೆಡೆ ಕಲೆ ಹಾಕಿದ್ದಾರೆ.

ರಜನಿಕಾಂತ್ ಚಿತ್ರರಂಗಕ್ಕೆ ಕಾಲಿಟ್ಟು ಐವತ್ತು ವರ್ಷವಾಗಿದೆ. ಆ ಸಂದರ್ಭಕ್ಕೆಂದೇ ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರ ಬಿಡುಗಡೆಯಾಗಿದೆ. ಕೂಲಿ ಚಿತ್ರದ ಪ್ರಿ-ರಿಲೀಸ್ ಈವೆಂಟಿನಲ್ಲಿ ರಜನೀಕಾಂತ್ ಮಾಡಿದ ನಲವತ್ತೊಂದು ನಿಮಿಷಗಳ ಭಾಷಣ, ಕೂಲಿ ಚಿತ್ರಕ್ಕಿಂತ ಹೆಚ್ಚು ಎಂಟರ್‌ಟೇನಿಂಗ್ ಆಗಿತ್ತು ಅಂತ ನೀವು ನಂಬಬೇಕು. ಅದು ರಜನೀಕಾಂತ್ ಪವರ್.
ನಾನ್ ಲೀನಿಯರ್ ಚಿತ್ರಕತೆ ಮಾಡುವುದರಲ್ಲಿ ಲೋಕೇಶ್ ಕನಕರಾಜ್ ಹೆಸರುವಾಸಿ ಅಂತ ಅವರೇ ಹೇಳಿಕೊಳ್ಳುವುದಿದೆ. ಒಂದು ಟೈಮ್‌ಲೈನಿನಲ್ಲಿ ಮೂರೋ ನಾಲ್ಕೋ ಎಳೆಗಳನ್ನು ಹೇಳಲಿಕ್ಕೆ ಯತ್ನಿಸುವುದು, ಘಟನೆ ನಡೆದ ನಂತರ ಅದಕ್ಕೂ ಮೊದಲು ಏನಾಯಿತು ಅಂತ ಹೇಳುವುದು. ಹೀಗೆ ನಡೆಯಿತು ಅಂತ ನಂಬಿಸಿ, ಬೇರೆಯೇ ಕತೆ ನಡೆಯುವಂತೆ ಮಾಡುವುದು- ಮುಂತಾದ ಹಳೇ ಪತ್ತೇದಾರಿ ಕಾದಂಬರಿಯ ತಂತ್ರಗಳನ್ನು ನಾನ್ ಲೀನಿಯರ್ ಎಂದು ಲೋಕೇಶ್ ಕನಕರಾಜ್ ನಂಬಿದ್ದಾರೆ. ಅವರ ನಂಬಿಕೆ ಚಿರಾಯುವಾಗಲಿ.
ಕೂಲಿ ಚಿತ್ರ ರಜನೀಕಾಂತ್ ಇಮೇಜನ್ನು ಬಿಟ್ಟುಕೊಡದೇ, ಅದಕ್ಕಿಂತಲೂ ಹೆಚ್ಚಿನದ್ದನ್ನು ಸಾಧಿಸಲು ಹೊರಟಿದೆ. ಅದಕ್ಕೋಸ್ಕರ ಲೋಕೇಶ್ ಕನಕರಾಜ್ ಚಿತ್ರಜಗತ್ತಿನ ಘಟಾನುಘಟಿಗಳನ್ನೆಲ್ಲ ಒಂದೆಡೆ ಕಲೆ ಹಾಕಿದ್ದಾರೆ. ಸೌಬೀನ್ ಶಾಹಿರ್, ಸತ್ಯರಾಜ್, ನಾಗಾರ್ಜುನ, ಅಮೀರ್ ಖಾನ್ ಮತ್ತು ಉಪೇಂದ್ರ ಇವರೆಲ್ಲರೂ ಕೂಲಿಯೊಳಗೆ ಇದ್ದಾರೆ. ಪೊಲೀಸನನ್ನು ಕಳ್ಳನಂತೆ ತೋರಿಸುವುದು, ಪ್ರೇಯಸಿಯನ್ನು ಕೊಲೆಗಾತಿಯಂತೆ ಬಿಂಬಿಸುವುದು, ಕೆಟ್ಟವನನ್ನು ಒಳ್ಳೆಯವನೆಂದು ನಂಬಿಸುವುದು- ಹೀಗೆ ಅನೇಕ ಕಳ್ಳಾಟಗಳೂ ಚಿತ್ರದಲ್ಲಿವೆ.
ನಿರ್ದೇಶಕನಿಗೆ ತನ್ನ ಕತೆ ದುರ್ಬಲ ಅನ್ನಿಸಿದಾಗ ಸ್ಟಾರುಗಳ ಬೆಂಬಲ ಪಡೆಯುತ್ತಾನೆ ಅನ್ನುವುದಕ್ಕೆ ಕೂಲಿ ಅತ್ಯುತ್ತಮ ಉದಾಹರಣೆ. ಅವರಲ್ಲಿ ಒಂದಿಬ್ಬರು ಚಿತ್ರದಲ್ಲೂ, ಕತೆಯಲ್ಲೂ, ನಿರೀಕ್ಷೆಯಲ್ಲೂ ಸಾಯುತ್ತಾರೆ. ಒಂದಿಬ್ಬರು ಬದುಕಿದರೂ ಪ್ರೇಕ್ಷಕರ ಕಣ್ಣಲ್ಲಿ ಸಾಯುತ್ತಾರೆ. ಹಾಸ್ಯನಟನಂತೆ ಕಾಣುವ ದಾಹಾ ಪಾತ್ರದ ಅಮೀರ್ ಖಾನ್, ಗೊತ್ತು ಗುರಿಯೇ ಇಲ್ಲದ ಸೌಬೀನ್ ಶಾಹಿನ್ ನಡುವೆ ಮನಸ್ಸಲ್ಲಿ ಉಳಿಯುವುದು ಉಪೇಂದ್ರ ಅಭಿನಯಿಸಿದ ಕಾಲೀಶ ಪಾತ್ರ ಮಾತ್ರ.
ಲೋಕೇಶ್ ಕನಕರಾಜ್ ಡೌನ್ ಟು ಅರ್ಥ್ ನಿರ್ದೇಶಕ. ಲಕ್ಷಾಂತರ ಕೋಟಿಗಳ ಒಡೆಯ ಸದಾ ಹಳೇ ಕುರ್ಚಿಯಲ್ಲಿ ಕೂತು ಒಂದು ಗ್ಲಾಸೂ ಇಲ್ಲದೇ, ನೆಂಚಿಕೊಳ್ಳುವುದಕ್ಕೆ ಉಪ್ಪಿನಕಾಯಿಯೂ ಇಲ್ಲದೇ ಬಾಟಲಿಯಲ್ಲೇ ಮದ್ಯ ಕುಡಿಯುತ್ತಿರುತ್ತಾನೆ. ಅಷ್ಟೇ ಅಲ್ಲ, ರಸ್ತೆ ಬದಿಯಲ್ಲಿ ಕುಡುಕರು ಹೊಡೆದಾಡುವಂತೆ ಹೊಡೆದಾಡುತ್ತಾನೆ. ಅವನ ಸುತ್ತಲೂ ಆಟಿಕೆ ಗನ್ನುಗಳನ್ನು ಹಿಡಕೊಂಡವರಂತೆ ನೂರಾರು ಮಂದಿ ಕಾವಲುಗಾರರು ಇದ್ದರೂ ಆಯಸ್ಸು ಮುಗಿದವನನ್ನು ದೇವರೂ ಕಾಪಾಡಲಾರ ಎಂಬ ಸನಾತನ ನಂಬಿಕೆಯನ್ನು ಲೋಕೇಶ್ ಕನಕರಾಜು ಬಲಪಡಿಸುತ್ತಾರೆ.
ಮೂವರು ನಾಯಕಿಯರೂ ಕಾರಲ್ಲಿ, ಕೋಣೆಯಲ್ಲಿ, ಬಸ್ ಸ್ಟಾಂಡಿನಲ್ಲಿ, ರೇಲ್ವೇ ಸ್ಟೇಷನ್ನಿನಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಒದ್ದೆಯಾದ ಗುಬ್ಬಚ್ಚಿಗಳಂತೆ ಇಡೀ ಚಿತ್ರದುದ್ದಕ್ಕೂ ಕೂತಿರುವುದನ್ನು ಕಂಡು ಸಂತೋಷಪಡಬಹುದು. ಸಾಯುವುದಕ್ಕೂ ಟೈಮು ಬರುತ್ತದೆ ಅನ್ನುವುದಕ್ಕೆ ಸಾಕ್ಷಿಯಾಗಿ ಪಕ್ಕದಲ್ಲೇ ಇರುವ ಖಳನನ್ನು ಸಾಯಿಸಲು ವಾಚುಗಳನ್ನು ಒಂದೊಂದಾಗಿ ಜೋಡಿಸಿ ವಾಚಿನ ಹಗ್ಗ ಹೆಣೆಯುವ ಗುಡಿ ಕೈಗಾರಿಕೆಯೂ ಇಲ್ಲಿದೆ.
ಹಳೇಕಾಲದ ಆಯುಧಗಳ ಮೇಲೆ ನಿರ್ದೇಶಕರಿಗೆ ಪ್ರೀತಿ. ತುಕ್ಕು ಹಿಡಿದ ಕೊಡಲಿ, ಕತ್ತಿ, ಮಚ್ಚು, ಗೋಣಿ ಎತ್ತಲು ಬಳಸುವ ಕೊಕ್ಕೆ- ಹೀಗೆ ಥರಥರದ ಆಯುಧಗಳು ಚಿತ್ರದ ತುಂಬ ಬರುತ್ತವೆ. ಜೈಲರ್ ಚಿತ್ರದ ಸ್ಫೂರ್ತಿಯೂ ಈ ಚಿತ್ರಕ್ಕಿದೆ. ಅದರಲ್ಲಿ ದುಷ್ಟರನ್ನು ಸಲ್ಫ್ಯೂರಿಕ್ ಆ್ಯಸಿಡ್‌ನೊಳಗೆ ಹಾಕಿ ಸುಟ್ಟರೆ, ಇಲ್ಲಿ ಮೊಬೈಲ್ ಕ್ರಿಮೇಟರ್ ಎಂಬ ಯಂತ್ರ ಅವರನ್ನು ಸುಟ್ಟು ಬೂದಿ ಮಾಡುತ್ತದೆ.
ಒಂದಕ್ಕೊಂದು ಸಂಬಂಧವಿಲ್ಲದ ಎಳೆಗಳನ್ನು ಒಟ್ಟುಹಾಕಿದ ಕತೆಯನ್ನು ಹೊತ್ತು 170 ನಿಮಿಷಗಳ ಕಾಲ ಹೊತ್ತು ಸಾಗುವುದು ಬೆನ್ನುಮೂಳೆ ಎಷ್ಟೇ ಗಟ್ಟಿಯಿರುವ ಕೂಲಿಗೂ ಕಷ್ಟವೇ. ಅಂಥ ಕೂಲಿಯ ಕಷ್ಟ ನೋಡುವುದು ಪ್ರೇಕ್ಷಕನಿಗೂ ಕಷ್ಟವೇ. ಚಿತ್ರದ ಕೊನೆಯ ದೃಶ್ಯದಲ್ಲಿ ಬೀಡಿ ಸೇದುತ್ತಿರುವ ಉಪೇಂದ್ರನ ಹತ್ತಿರ ಅಮೀರ್ ಖಾನ್ ಇದೇನು ಅಂತ ಕೇಳುತ್ತಾನೆ. ಉಪೇಂದ್ರ ಬೀಡಿ ಎನ್ನುತ್ತಾನೆ. ಈ ಪ್ರಶ್ನೆಯನ್ನು ಕತೆಯ ಕುರಿತೂ ಅಮೀರ್ ಖಾನ್ ಕೇಳಬಹುದಿತ್ತು!