- Home
- Karnataka Districts
- ಪಿಎಸ್‌ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಮನೆಯಲ್ಲಿ ಜೂಜಾಟ: ಸರ್ಕಾರಿ ಅಧಿಕಾರಿಗಳು ಸೇರಿ 6 ಜನರ ಬಂಧನ!
ಪಿಎಸ್‌ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಮನೆಯಲ್ಲಿ ಜೂಜಾಟ: ಸರ್ಕಾರಿ ಅಧಿಕಾರಿಗಳು ಸೇರಿ 6 ಜನರ ಬಂಧನ!
ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಅವರ ಕಲಬುರಗಿ ನಿವಾಸದಲ್ಲಿ ದೀಪಾವಳಿ ಹಬ್ಬದಂದು ಜೂಜಾಟ ನಡೆದಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಜನರನ್ನು ಬಂಧಿಸಲಾಗಿದೆ.

ದಿವ್ಯಾ ಹಾಗರಗಿ ಮನೆಯಲ್ಲಿ ಜೂಜಾಟ
ಕಲಬುರಗಿ (ಅ.23): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಕಲಬುರಗಿ ನಿವಾಸದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೂಜಾಟ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳು ಸೇರಿದಂತೆ ಒಟ್ಟು ಆರು ಜನ ಜೂಜುಕೋರರನ್ನು ಬಂಧಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ಸೇರಿ 6 ಜನ ಬಂಧನ
ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ದಿವ್ಯಾ ಹಾಗರಗಿ ಅವರ ಮನೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಜು ಲೆಂಗಟಿ, ಸಂಗಮೇಶ ನಾಗನಹಳ್ಳಿ, ತಾಲೂಕಾ ಬಿಸಿಊಟ ಅಧಿಕಾರಿ ಚಂದ್ರಕಾಂತ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ ನಲವತ್ತು ಸಾವಿರ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದಿವ್ಯಾ ಹಾಗರಗಿ ವಾಗ್ದಾಳಿ
ಮನೆಯ ಮೇಲೆ ನಡೆದ ಈ ಪೊಲೀಸ್ ದಾಳಿಯ ಬಗ್ಗೆ ದಿವ್ಯಾ ಹಾಗರಗಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿನಿಂದ ನಡೆದ ಉದ್ದೇಶಪೂರ್ವಕ ದಾಳಿ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಪೊಲೀಸರು ಸುಳ್ಳು ಇಸ್ಪೆಟ್ ಆಟದ ಕಥೆ ಕಟ್ಟಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿರುವ ದಿವ್ಯಾ, 'ನಾನು ದೀಪಾವಳಿ ಹಬ್ಬದ ನಿಮಿತ್ತ ಹಲವು ಆಪ್ತರನ್ನು ಮನೆಗೆ ಕರೆದಿದ್ದೆ. ಎಲ್ಲರೂ ಟೀ ಕುಡಿಯುತ್ತಾ ಕುಳಿತಿದ್ದಾಗ ಮನೆಗೆ ನುಗ್ಗಿದ ಪೊಲೀಸರು ಸುಳ್ಳು ಇಸ್ಪೆಟ್ ಆಟದ ಕಥೆ ಕಟ್ಟಿದ್ದಾರೆ. ಆರು ಜನರ ಬಳಿ ನಲವತ್ತು ಸಾವಿರ ರೂಪಾಯಿ ಇರದೆ ಇರುತ್ತದೆಯೇ? ಇದು ಪ್ರಿಯಾಂಕ್ ಖರ್ಗೆ ಅವರು ನನ್ನನ್ನು ನೇರವಾಗಿ ಟಾರ್ಗೆಟ್ ಮಾಡಿ, ನನ್ನ ಮರ್ಯಾದೆ ತೆಗೆಯಲು ಮಾಡಿಸಿರುವ ಹೊಲಸು ಕೆಲಸವಾಗಿದೆ' ಎಂದು ಗುಡುಗಿದ್ದಾರೆ.
ಗಂಡ, ಮಕ್ಕಳಿಗೆ ತೊಂದರೆಯಾದರೆ ಪ್ರಿಯಾಂಕ ಖರ್ಗೆ ಹೊಣೆ
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಸವಾಲು ಹಾಕಿರುವ ದಿವ್ಯಾ, 'ಖರ್ಗೆಯವರೆ, ನನ್ನದೇನಾದರೂ ತಪ್ಪು ಇದ್ದರೆ ನೇರವಾಗಿ ಕ್ರಮ ಕೈಗೊಳ್ಳಿ, ಅದು ಬಿಟ್ಟು ಇಂತಹ ಹೊಲಸ ಕೆಲಸ ಮಾಡಬೇಡಿ. ನನಗೆ, ನನ್ನ ಗಂಡನಿಗೆ, ನನ್ನ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ನೇರ ಜವಾಬ್ದಾರರಾಗುತ್ತಾರೆ' ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಪಿಎಸ್‌ಐ ಹಗರಣದ ಬಳಿಕ ಜೂಜಾಟ ಪ್ರಕರಣದಿಂದಾಗಿ ದಿವ್ಯಾ ಹಾಗರಗಿ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.